ಚುನಾವಣೆ ಪ್ರಚಾರ ಸಾಮಗ್ರಿ: ಮುದ್ರಕರ, ಪ್ರಕಾಶಕರ ವಿವರ ಕಡ್ಡಾಯ

| Published : Mar 24 2024, 01:34 AM IST

ಸಾರಾಂಶ

ಲೋಕಸಭೆ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮುದ್ರಣವಾಗುವ ಪ್ರತಿ ಚುನಾವಣಾ ಪ್ರಚಾರ ಸಾಮಗ್ರಿಗಳ ಮೇಲೆ ಮುದ್ರಕರ ಮತ್ತು ಪ್ರಕಾಶರ ಹೆಸರು, ವಿಳಾಸ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಯಾದಗಿರಿ: ಲೋಕಸಭೆ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮುದ್ರಣವಾಗುವ ಪ್ರತಿ ಚುನಾವಣಾ ಪ್ರಚಾರ ಸಾಮಗ್ರಿಗಳ ಮೇಲೆ ಮುದ್ರಕರ ಮತ್ತು ಪ್ರಕಾಶರ ಹೆಸರು, ವಿಳಾಸ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸುಶೀಲಾ ಅವರು ಮುದ್ರಕರಿಗೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಪ್ರಜಾ ಪ್ರತಿನಿಧಿ ಕಾಯ್ದೆ-1951ರ ನಿಯಮ 127ಎ ಪ್ರಕಾರ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದ ಪ್ರತಿ ಕರಪತ್ರ, ಹ್ಯಾಂಡ್ ಬಿಲ್, ಬಂಟಿಂಗ್, ಬ್ಯಾನರ್, ಪ್ಯಾಂಪ್ಲೆಟ್ ಮೇಲೆ ಮುದ್ರಕರ ಮತ್ತು ಪ್ರಕಾಶರ ವಿವರ ಮತ್ತು ಮುದ್ರಣ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದೆ. ಇದನ್ನು ಎಲ್ಲಾ ಮುದ್ರಕರು ಪಾಲಿಸುವ ಮೂಲಕ ಚುನಾವಣಾ ಆಯೋಗಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.

ಜಿಲ್ಲೆಯ ಪ್ರತಿ ಮುದ್ರಕರು ತಮ್ಮ ಬಳಿಗೆ ಮುದ್ರಣಕ್ಕೆ ಬರುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಂದ ಪ್ರತಿ ಚುನಾವಣಾ ಸಾಮಗ್ರಿಗೆ ಪ್ರತ್ಯೇಕವಾಗಿ ಅಪೆಂಡಿಕ್ಸ್ “ಎ” ನಲ್ಲಿ ದೃಢೀಕರಣ ಪಡೆಯಬೇಕು. ಈ ದೃಢೀಕರಣಕ್ಕೆ ಪ್ರಕಾಶಕರನ್ನು ಇಬ್ಬರು ಪ್ರತಿ ಸಹಿ ಮಾಡಿಸಬೇಕು. ಚುನಾವಣಾ ಪ್ರಚಾರ ಸಾಮಾಗ್ರಿ ಮುದ್ರಿಸಿದ ಮೂರು ದಿನದೊಳಗೆ ಅಪೆಂಡಿಕ್ಸ್ “ಬಿ”ನಲ್ಲಿ ಮುದ್ರಕರು ಮುದ್ರಣ ಸಾಮಗ್ರಿ ವಿವರ, ಪ್ರತಿ ವೆಚ್ಚ ಒಳಗೊಂಡಂತೆ ಮಾಹಿತಿ ಭರ್ತಿ ಮಾಡಿ ಅದರೊಂದಿಗೆ ಪ್ರಚಾರ ಸಾಮಗ್ರಿ ಮೂರು ಪ್ರತಿ ಹಾಗೂ ಪ್ರಕಾಶಕರು ನೀಡಿರುವ ಅಪೆಂಡಿಕ್ಸ್ ‘ಎ’ ನಮೂನೆ ಲಗತ್ತಿಸಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಚುನಾವಣಾ ಪ್ರಚಾರ ಸಾಮಗ್ರಿ ಹೊರತಾಗಿ ಇತರೆ ಮುದ್ರಣ ಕಾರ್ಯದ ಬಗ್ಗೆ ಯಾವುದೇ ಮಾಹಿತಿ ನೀಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಜಾತಿ, ಧರ್ಮ, ಪಂಗಡ, ಭಾಷೆ, ಜನಾಂಗ ಆಧಾರದ ಮೇಲೆ ಮತ ಕೇಳುವ, ಎದುರಾಳಿಯ ವೈಯಕ್ತಿಕ ಚಾರಿತ್ರ್ಯ ಹರಣ ಮಾಡುವ, ದೇಶದ ಏಕತೆಗೆ ಧಕ್ಕೆ ತರುವ ಸೇರಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುದ್ರಣ ಕಾರ್ಯ ಮಾಡಬೇಕು ಎಂದಿದ್ದಾರೆ.

ಒಂದು ವೇಳೆ ಪ್ರಜಾ ಪ್ರತಿನಿಧಿ ಕಾಯ್ದೆ-1951ರ 127ಎ ನಿಯಮ ಉಲ್ಲಂಘಿಸಿದಲ್ಲಿ 6 ತಿಂಗಳ ಶಿಕ್ಷೆ ಅಥವಾ 2,000 ರು. ದಂಡ ಅಥವಾ ಎರಡು ವಿಧಿಸುವ ಅವಕಾಶವಿದೆ. ಇದಲ್ಲದೆ ಇತರೆ ಕಾಯ್ದೆಯನ್ವಯ ಲೈಸೆನ್ಸ್ ವಾಪಸ್ ಪಡೆಯುವ ಅಧಿಕಾರ ಸಹ ಹೊಂದಲಾಗಿದೆ ಎಂದಿದ್ದಾರೆ.