ಸಾರಾಂಶ
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ನೀರು ಪಾತಾಳಕ್ಕೆ ಕುಸಿದಿದೆ. ತ್ಯಾಜ್ಯದ ಹೊಡೆತದಿಂದ ಜಲಚರಗಳ ಜೀವಕ್ಕೆ ಕುತ್ತು ಬರಲಾರಂಭಿಸಿದೆ. ಇದರಿಂದ ಮೀನುಗಳು ಜಲಾಶಯದಲ್ಲಿ ಸತ್ತು ಬೀಳುತ್ತಿವೆ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರೈತರ ಕೃಷಿ ಜಮೀನುಗಳಿಗೆ ಹಾಗೂ ಜನ-ಜಾನುವಾರುಗಳಿಗೆ ನೀರು ಉಣಿಸುತ್ತಿರುವ ತುಂಗಭದ್ರಾ ಜಲಾಶಯದ ಒಡಲಿಗೆ ಕೆಲವು ಕಾರ್ಖಾನೆಯ ತ್ಯಾಜ್ಯ ಹರಿದು ಬರುತ್ತಿದೆ. ಇನ್ನು ಜಲಾಶಯದ ಮೇಲ್ಭಾಗದಲ್ಲಿರುವ ಪಟ್ಟಣ, ನಗರಗಳ ಚರಂಡಿ ನೀರು ಜಲಾಶಯದ ಒಡಲು ಸೇರಲಾರಂಭಿಸಿದೆ. ಹಾಗಾಗಿ ಈಗ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಮೀನುಗಳ ಬದುಕಿಗೆ ಸಂಚಕಾರ ಬಂದಿದೆ.ಡ್ಯಾಂನಲ್ಲಿ ನೀರು ಕ್ಷೀಣವಾಗುತ್ತಿದ್ದಂತೆಯೇ ಹಿನ್ನೀರಿನ ಪ್ರದೇಶದಲ್ಲಿ ಮೀನುಗಾರಿಕೆ ಚುರುಕುಗೊಳ್ಳುತ್ತದೆ. ಮೀನುಗಾರರು ನದಿಯಲ್ಲಿ ಮೀನು ಹಿಡಿದು ದಡಕ್ಕೆ ತರುವಷ್ಟರಲ್ಲಿಯೇ ಮೀನುಗಳ ಪ್ರಾಣ ಇರುವುದಿಲ್ಲ. ಇನ್ನು ಜಲಾಶಯದಲ್ಲೂ ಮೀನುಗಳು ನೀರಿನಲ್ಲಿ ಹಿಂಡು, ಹಿಂಡಾಗಿ ಸತ್ತು ನೀರಿನಲ್ಲಿ ತೇಲುತ್ತಿವೆ. ಇದಕ್ಕೆ ತ್ಯಾಜ್ಯವೇ ಕಾರಣವಾಗಿದೆ ಎಂಬುದು ಮೀನುಗಾರರ ಆರೋಪ.ಕಾರ್ಖಾನೆಗಳ ತ್ಯಾಜ್ಯ ಹರಿದು ಬಂದ ಕೂಡಲೇ ಜಲಾಶಯದ ನೀರಿನ ಬಣ್ಣ ಹಸಿರು ಬಣ್ಣಕ್ಕೆ ತಿರುಗುತ್ತದೆ. ನೀರೆಲ್ಲ ಹಸಿರುಮಯವಾಗಿದೆ. ಇಂಥ ಪ್ರಕರಣವನ್ನು ತುಂಗಭದ್ರಾ ಮಂಡಳಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಪ್ರಕರಣ ಬೆಳಕಿಗೆ ಬಂದೊಡನೆ ಜಲಾಶಯದ ನೀರನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಹೇಳಿ ನುಣುಚಿಕೊಳ್ಳುತ್ತಿದೆ. ನೀರು ಪ್ರತಿ ವರ್ಷ ಹಸಿರು ಬಣ್ಣಕ್ಕೆ ಏಕೆ ತಿರುಗುತ್ತಿದೆ? ಇದಕ್ಕೆ ನಿಖರ ಕಾರಣ ಏನು? ಜಲಾಶಯದಲ್ಲಿ ತ್ಯಾಜ್ಯ ಸೇರುತ್ತಿದ್ದರೆ ಎಲ್ಲಿಂದ ಬರುತ್ತಿದೆ? ಎಂಬುದನ್ನು ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ಸಲ್ಲಿಸುವ ಗೋಜಿಗೆ ನೀರಾವರಿ ಇಲಾಖೆ ಆಗಲಿ, ತುಂಗಭದ್ರಾ ಮಂಡಳಿ ಆಗಲಿ ಇದುವರೆಗೆ ಹೋಗಿಲ್ಲ. ಹಾಗಾಗಿ ನಿರಾಂತಕವಾಗಿ ತ್ಯಾಜ್ಯ ಜಲಾಶಯದ ಒಡಲು ಸೇರುತ್ತಿದೆ.ಜಲಾಶಯದ ನೀರನ್ನು ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜನರು ಕುಡಿಯುವ ನೀರಿಗೂ ಬಳಸುತ್ತಿದ್ದಾರೆ. ಹಾಗಾಗಿ ತ್ಯಾಜ್ಯ ಸೇರದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸ್ಥಳೀಯ ಸಂಸ್ಥೆಗಳದ್ದಾಗಿದೆ. ಆದರೆ, ತುಂಗಭದ್ರಾ ಜಲಾಶಯದ ನೀರಿನ ಶುದ್ಧತೆ ಕುರಿತು ನಗರಸಭೆ, ಪುರಸಭೆ, ಪಪಂ, ಗ್ರಾಪಂಗಳಲ್ಲಿ ಠರಾವು ಪಾಸು ಮಾಡಿ ನಿರ್ಣಯ ತೆಗೆದುಕೊಂಡು ಆಯಾ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವ ಕಾರ್ಯ ಕೂಡ ಆಗುತ್ತಿಲ್ಲ. ಇದರಿಂದ ಜಲಾಶಯಕ್ಕೆ ಹೊಸ ನೀರು ಬರುತ್ತಲೇ ತ್ಯಾಜ್ಯದ ವಿಷಯ ಮೂಲೆ ಸೇರಲಾರಂಭಿಸಿದೆ. ಇದರಿಂದ ಜಲಾಶಯದ ಒಡಲಿಗೆ ತ್ಯಾಜ್ಯ ಸೇರುವುದು ನಿರಾತಂಕವಾಗಿ ನಡೆದಿದೆ.ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದೆ. ಬಿಸಿಲಿನ ತಾಪ, ಜಲತ್ಯಾಜ್ಯಗಳಿಂದ ಮಾಲಿನ್ಯ ಹೆಚ್ಚಾಗಿ ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತಿದೆ. ಜಲಚರಗಳು ಸಾಯುತ್ತಿವೆ. ಜಲಾಶಯದ ದಡದಲ್ಲೂ ಮೀನುಗಳು ಸತ್ತು ಬೀಳುತ್ತಿವೆ. ಜಲಚರಗಳಿಗೆ ಆಮ್ಲಜನಕ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತಿದೆ ಎಂಬುದು ಪರಿಸರಪ್ರೇಮಿಗಳ ಆತಂಕ. ಚರಂಡಿ ನೀರು, ಕಾರ್ಖಾನೆಯಿಂದ ಹರಿದು ಬರುವ ತ್ಯಾಜ್ಯಕ್ಕೆ ಕಡಿವಾಣ ಬೀಳಲಿ ಎಂಬುದು ಪರಿಸರಪ್ರೇಮಿಗಳ ಆಗ್ರಹ.ತುಂಗಭದ್ರಾ ಜಲಾಶಯದ ಒಡಲಿಗೆ ಕಾರ್ಖಾನೆಗಳ ತ್ಯಾಜ್ಯ ಹರಿದು ಬರಲಾರಂಭಿಸಿದೆ. ಚರಂಡಿ ನೀರು ಕೂಡ ಜಲಾಶಯದ ಒಡಲು ಸೇರುತ್ತಿದೆ. ಡ್ಯಾಂನಲ್ಲಿ ಆಮ್ಲಜನಕ ಕೊರತೆಯಿಂದ ಚಲಚರ ಉಳಿವಿಗೆ ಕ್ರಮ ವಹಿಸಬೇಕು ಎನ್ನುತ್ತಾರೆ ಪರಿಸರಪ್ರೇಮಿ ಹೊಸಪೇಟೆ ಡಾ. ಸಮದ್ ಕೊಟ್ಟೂರು.