ಸಾರಾಂಶ
ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ನಾನಾ ಪಾತ್ರಗಳನ್ನು ನಿಭಾಯಿಸುತ್ತಿರುವ ರಾಜ್ ಬಿ. ಶೆಟ್ಟಿ ಇದೀಗ ಹೊಸ ಥ್ರಿಲ್ಲರ್ ಸಿನಿಮಾ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರ ಜೊತೆ ಮಾತುಕತೆ.
ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ನಾನಾ ಪಾತ್ರಗಳನ್ನು ನಿಭಾಯಿಸುತ್ತಿರುವ ರಾಜ್ ಬಿ. ಶೆಟ್ಟಿ ಇದೀಗ ಹೊಸ ಥ್ರಿಲ್ಲರ್ ಸಿನಿಮಾ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾರಂಗ, ಯಶಸ್ಸು, ಬದಲಾಗಿರುವ ಪರಿಭಾಷೆ ಈ ಎಲ್ಲದರ ಕುರಿತು ಅವರ ಜೊತೆ ಮಾತುಕತೆ.
- ರಾಜೇಶ್ ಶೆಟ್ಟಿ
ಆ ಕಾಲವನ್ನೂ ಈ ಕಾಲವನ್ನೂ ಹೇಗೆ ನೋಡುತ್ತೀರಿ?
ಮೊದಲು ಕೊಂಚ ಪ್ರಾಮಾಣಿಕತೆ ಜಾಸ್ತಿ ಇತ್ತು. ಪ್ರಮೋಷನ್ ಮಾಡುವ ವಿಚಾರದಲ್ಲಿ ಬಹಳಷ್ಟು ಪ್ರಾಮಾಣಿಕರಾಗಿದ್ದೆವು. ಆದರೆ ಈಗ ಬಲವಂತವಾಗಿ ತುರುಕುತ್ತಿದ್ದೇವೆ. ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದೇವೆ. ಈಗ ಸಿಕ್ಕಾಪಟ್ಟೆ ಕಂಟೆಂಟ್‌ಗಳು ಬರುತ್ತಿವೆ. ತುಂಬಾ ಸಿನಿಮಾಗಳು ಬರುತ್ತಿವೆ. ಆದರೆ ಒಳ್ಳೆಯ ಕಂಟೆಂಟ್‌ಗಳು ತುಂಬಾ ಕಡಿಮೆ ಆಗಿವೆ. ವರ್ಚುವಲ್ ಆಗಿ ಬದುಕುವುದು ಜಾಸ್ತಿಯಾಗಿದೆ. ಈಗ ನಾವು ಬದಲಾಗಿದ್ದೇವೆ ಅನ್ನುವುದಕ್ಕಿಂತ ಬದಲಾಗಿರುವ ಇಂಡಸ್ಟ್ರಿಗೆ ತಕ್ಕಂತೆ ಬದಲಾವಣೆ ಪ್ರತಿಬಿಂಬಿಸುತ್ತಿದೆ.
ಸಿನಿಮಾ ಪ್ರಯಾಣ ಹೇಗಿದೆ?
ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಸಿನಿಮಾ ಕ್ಷೇತ್ರ ಕೊಡುವಷ್ಟು ಬೇರೆ ಯಾವ ಕ್ಷೇತ್ರವೂ ಕೊಡುವುದಿಲ್ಲ. ಇಲ್ಲಿ ಪ್ರೀತಿಯೂ ಅಗಾಧವಾಗಿ ಸಿಗುತ್ತದೆ. ಕೀರ್ತಿಯೂ ಬಹಳ ದೊಡ್ಡದಾಗಿ ಬರುತ್ತದೆ. ಅದೇ ಥರ ಹೊಟ್ಟೆಕಿಚ್ಚೂ ಜಾಸ್ತಿ. ಜೆಲಸಿ ಜಾಸ್ತಿ. ಎಲ್ಲವೂ ಇಲ್ಲಿ ಜಾಸ್ತಿಯೇ. ಚಿತ್ರರಂಗದಲ್ಲಿರುವ ನಾವು ಸುನಾಮಿಯಲ್ಲಿ ಸರ್ಫಿಂಗ್ ಮಾಡುತ್ತಿರುತ್ತೇವೆ. ತಾಕತ್ತಿನಿಂದ ಗೆದ್ದವರು ಜಯಭೇರಿ ಬಾರಿಸುತ್ತಾರೆ. ಬಿದ್ದು ಹೋದವರು ಗತ ಸೇರುತ್ತಾರೆ. ಈ ಪ್ರಯಾಣ ಅನುದಿನದ ಸಾಹಸ.
ಕಥನಕ್ಕಿಂತ ವಿಷುವಲ್‌ಗೆ ಹೆಚ್ಚು ಮನ್ನಣೆ ಸಿಗುತ್ತಿದೆ ಅನ್ನಿಸುತ್ತಿಲ್ಲವೇ?
ಹೌದು. ಈಗ ತಾಂತ್ರಿಕತೆ ಮುಂದೆ ಬಂದಿದೆ. ವಿಷುವಲ್‌ಗಳಿಗೆ ಹೆಚ್ಚಿನ ಒತ್ತು ಸಿಗುತ್ತಿದೆ. ಕಥನ ತೆಳುವಾಗುತ್ತಾ ಹೋಗುತ್ತಿದೆ. ಅದಕ್ಕೆ ಕಾರಣವಿದೆ. ನಾವು ಮನುಷ್ಯರು ವೈಯಕ್ತಿಕ ಸಂವಹನಗಳಿಂದ ದೂರ ಸರಿಯುತ್ತಿದ್ದೇವೆ. ವೈಯಕ್ತಿಕ ಬಾಂಡಿಂಗ್ ಕಡಿಮೆಯಾಗುತ್ತಿದೆ. ಗಾಢ ಸಂವಾದಗಳು ಅಪರೂಪವಾಗಿದೆ. ಮನುಷ್ಯರು ಬದಲಾಗಿದ್ದೇವೆ. ಅದೇ ಥರ ಸಿನಿಮಾ ರೂಪಿಸುವಿಕೆ ಕೂಡ ಬದಲಾಗಿದೆ. ಮೊದಲು ಕಥೆ ಪ್ರಧಾನವಾಗಿದ್ದ ಚಿತ್ರಗಳಿಗೆ ಮೆಚ್ಚುಗೆ ದೊರೆಯುತ್ತಿತ್ತು. ಆದರೆ ಈಗ ಸೆಟ್ ಪ್ರಧಾನ ಸಿನಿಮಾಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮೊದಲು ಓದು, ಮೈಬಗ್ಗಿಸಿ ದುಡಿಯಬೇಕಿತ್ತು. ಈಗ ತಾಂತ್ರಿಕತೆ ಕಡೆಗೆ ಗಮನ ಕೊಡಬೇಕಿದೆ.
ಬರವಣಿಗೆ ಪ್ರಕ್ರಿಯೆ ಬದಲಾಗಬೇಕೇ?
ಬರವಣಿಗೆ ಬದಲಾಗಲ್ಲ, ಬರಹಗಾರ ಬದಲಾಗುತ್ತಾನೆ. ಅವನ ಅನುಭವ ಶ್ರೀಮಂತವಾಗುತ್ತದೆ ಅಥವಾ ಹೊಸ ರೀತಿಯ ಅನುಭವಗಳಿಗೆ ಎದುರಾಗುತ್ತಾನೆ. ಅವನ ಆಲೋಚನೆಗಳು ಬದಲಾಗಬಹುದು. ರಾಜಕೀಯ ಚಿಂತನೆಗಳು, ಸಾಂಸ್ಕೃತಿಕ ಚಿಂತನೆಗಳು ಬದಲಾಗಬಹುದು. ಅವನ ಕಲಿಕೆಗಳು ಬದಲಾಗುತ್ತಾ ಹೋಗುತ್ತದೆ. ಅದೇ ರೀತಿ ಅವನಿಗೇ ಗೊತ್ತಿಲ್ಲದಂತೆ ಬರವಣಿಗೆ ಕೂಡ ಬದಲಾಗಬೇಕು. ಅದು ಸಹಜ ಕ್ರಮ.
ನೀವು ಮತ್ತೆ ತುಂಬಿಕೊಳ್ಳುವ ಬಗೆ ಹೇಗೆ?
ಮನುಷ್ಯರ ಜೊತೆ ಒಡನಾಟದಲ್ಲಿ, ಮಾತುಕತೆಯಲ್ಲಿ. ನಾನು ನನ್ನ ಸ್ನೇಹಿತರ ಜೊತೆ ತುಂಬಾ ಸಮಯ ಕಳೆಯುತ್ತೇನೆ. ಓಡಾಡುತ್ತೇವೆ. ಬದುಕನ್ನು ಅನುಭವಿಸುತ್ತೇವೆ. ನಾವು ಸಿನಿಮಾ ಕುರಿತು ಮಾತನಾಡುವುದಿಲ್ಲ. ಸಿನಿಮಾ ಮಾತನಾಡುವುದರಿಂದ ದೂರ ಉಳಿಯುತ್ತೇನೆ. ಬದುಕಿನಿಂದ ಸಿನಿಮಾ ಹುಟ್ಟಬೇಕೇ ಹೊರತು, ಸಿನಿಮಾದಿಂದ ಬದುಕಲ್ಲ. ನಾನು ಸಿನಿಮಾ ಸಂಬಂಧಿಸಿದ ಜಗತ್ತಿನಿಂದ ಸಾಧ್ಯವಾದಷ್ಟು ದೂರವೇ ಉಳಿಯುತ್ತೇನೆ. ಎಲ್ಲಕ್ಕೂ ತೆರೆದುಕೊಂಡಿರುತ್ತೇನೆ. ನಾವು ತುಂಬಿಕೊಳ್ಳಬೇಕಿದ್ದರೆ, ಬರಿದಾಗಿರಬೇಕು.
ಯಶಸ್ಸು ಎಷ್ಟು ಸುಲಭ, ಎಷ್ಟು ಕಷ್ಟ?
ಯಶಸ್ಸು ಬಹಳ ಕಷ್ಟ ಕೊಡುತ್ತದೆ. ಯಶಸ್ಸು ನಮ್ಮ ದಾರಿಯನ್ನು ವಿಚಲಿತಗೊಳಿಸಬಹುದು. ಆ ಕ್ಷಣದ ಹೊಗಳಿಕೆಯನ್ನು ನಾವು ಮನಸ್ಸಿಗೆ ಹಚ್ಚಿಕೊಳ್ಳಬಾರದು. ನಾವು ಆ ಕ್ಷಣದ ಮಾತುಗಳನ್ನು ನಂಬಿಕೊಳ್ಳಬಾರದು. ನೀವು ಗ್ರೇಟು, ಅದ್ಭುತ ಸಿನಿಮಾ ಮಾಡಿದ್ದೀರಿ ಅನ್ನೋ ಮಾತುಗಳನ್ನು ಬೇರೆಯವರು ಹೇಳಬಹುದು ಮತ್ತು ಅವರು ಆ ಮಾತುಗಳ ಮೇಲೆ ನಂಬಿಕೆ ಇಟ್ಟುಕೊಳ್ಳಬಹುದು. ಅದನ್ನು ನಾವು ನಂಬಬಾರದು. ಅದನ್ನು ನಂಬಿದರೆ ನಮ್ಮತನ ಕಳೆದುಕೊಳ್ಳುತ್ತೇವೆ.
ಯಶಸ್ಸನ್ನು ನಿರ್ವಹಿಸುವುದು ಹೇಗೆ?
ನಾವು ಗೆದ್ದಾಗ ತುಂಬಾ ಅಲರ್ಟ್ ಆಗಿ ಅದೇ ಥರದ, ಅದಕ್ಕಿಂತ ದೊಡ್ಡ ಸಿನಿಮಾ ಮಾಡಲು ಹೊರಡುತ್ತೇವೆ. ದುಡ್ಡು ಬರುತ್ತದೆ, ಕೀರ್ತಿ ಬರುತ್ತದೆ. ಆದರೆ ನಮ್ಮತನ ಉಳಿಯುವುದಿಲ್ಲ. ನಾಲ್ಕೋ ಐದೋ ವರ್ಷ ಒಂದೇ ಯೋಜನೆಯಲ್ಲಿ, ಒಂದೇ ಯೋಚನೆಯಲ್ಲಿ ಇದ್ದಾಗ ಹೊಸತು ಹುಟ್ಟುವುದಿಲ್ಲ. ಅನುಭವ ಕಟ್ಟಿಕೊಡಲಾಗುವುದಿಲ್ಲ. ಸಿನಿಮಾಗಳಲ್ಲಿ ಸ್ಕೇಲ್ ಬೇರೆ, ಅನುಭವ ಬೇರೆ. ಸೆಟಪ್ ದೊಡ್ಡದಾಗುವುದು ಬೇರೆ, ಅನುಭವ ಕಟ್ಟಿಕೊಡುವುದು ಬೇರೆ. ಮಯೂರ ಸಿನಿಮಾದಲ್ಲಿ ಅಣ್ಣಾವ್ರು ಕನ್ನಡಿಗರ ಸ್ವಾಭಿಮಾನ ಕೆಣದಿರಿ ಎಂದು ಹೇಳುವ ದೃಶ್ಯವನ್ನು ನೆನಪಿಸಿದರೆ ಆ ದೃಶ್ಯ ತಕ್ಷಣ ಮನಸ್ಸಲ್ಲಿ ಸುಳಿಯುತ್ತದೆ. ಯಾಕೆಂದರೆ ಅದು ಕೊಟ್ಟ ಅನುಭವ ದೊಡ್ಡದು. ಆ ಅನುಭವವನ್ನು ದೊಡ್ಡ ಗಾತ್ರದ ಸೆಟ್ ಕೊಡುವುದಿಲ್ಲ. ಅಂಥಾ ಅನುಭವ ಕಟ್ಟಿಕೊಡಬೇಕಾದರೆ ನಮ್ಮತನ ಉಳಿದಿರಬೇಕು. ಅವನು ಮಾಡಿದ್ದು ನಾವೂ ಮಾಡಬೇಕು ಅಂತ ಹೊರಟಾಗ ನಮ್ಮದು ಸೆಕೆಂಡ್ ಹ್ಯಾಂಡ್ ಥಾಟ್ ಆಗಿಬಿಡುತ್ತದೆ. ಅವನು ಮಾಡಿದ್ದೂ ನಾನೂ ಮಾಡಬೇಕು ಎಂಬ ಅಭದ್ರತೆಯನ್ನು ಮೀರುವ ಯತ್ನದಲ್ಲಿ ನಾವು ನಮ್ಮತನ ಬಲಿಕೊಡುವ ಸಾಧ್ಯತೆ ಬಹಳ ಇರುತ್ತದೆ. ಅದರಿಂದ ದೂರ ಉಳಿಯಬೇಕಾದರೆ ನಾನು ಯಾಕೆ ಇಲ್ಲಿಗೆ ಬಂದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಉದ್ದೇಶ ಏನು ಎಂಬುದನ್ನು ಅರಿವಿಗೆ ತಂದುಕೊಳ್ಳಬೇಕು. ಯಾಕೆಂದರೆ ಅಣ್ಣಾವ್ರು ಒಂದು ವರ್ಷದಲ್ಲಿ 14 ಸೂಪರ್‌ಹಿಟ್ ಸಿನಿಮಾಗಳನ್ನು ಕೊಟ್ಟವರು. ಅಂಥಾ ಯಶಸ್ಸಿನ ಮುಂದೆ ನಮ್ಮ ಯಶಸ್ಸು ಯಾವ ಲೆಕ್ಕ ಎಂಬುದು ಗೊತ್ತಿರಬೇಕು.
ಯಶಸ್ಸಿನ ದುಷ್ಪರಿಣಾಮಗಳೇನು?
ನೀವು ಯಶಸ್ಸು ಗಳಿಸಿದಾಗ ಹೇಗೆ ವರ್ತಿಸುತ್ತೀರೋ ಅದೇ ರೀತಿ ನಿಮ್ಮ ಜೊತೆ ಇರುವವರೂ ವರ್ತಿಸುತ್ತಾರೆ. ನೀವು ಲೀಡರ್ ಆಗಿರುತ್ತೀರಿ. ಅವರು ಕೂಡ ಅದೇ ಥರ ಯೋಚನೆ ಮಾಡುತ್ತಿರುತ್ತಾರೆ. ಹಾಗಾಗಿ ಒಂದು ವರ್ತುಲದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಜಾಸ್ತಿ ಇರುತ್ತದೆ. ಹಾಗಾದಾಗ ಮತ್ತೆ ಎಕ್ಸ್‌ಪೆರಿಮೆಂಟ್ ಮಾಡುವ ಸಾಧ್ಯತೆ ಕ್ಷೀಣಿಸಬಹುದು. ಹಾಗಾಗಿ ಸಕ್ಸಸ್ ಅನ್ನು ಅಲ್ಲಲ್ಲೇ ಬಿಟ್ಟು ನಡೆಯಬೇಕು. ಅದರಿಂದ ದೊರೆಯುವ ಕಲಿಕೆ ಮಾತ್ರ ತೆಗೆದುಕೊಳ್ಳಬೇಕು. ಬದುಕಲ್ಲಿ ದುಡ್ಡೇ ಎಲ್ಲಾ ಅಲ್ಲ. ಹಾಗಾಗಿ ನನ್ನ ಫ್ಯಾನ್ ನಾನೇ ಆಗಬಾರದು. ನನ್ನ ಯಶಸ್ಸಿನ ಫ್ಯಾನ್ ನಾನಾಗಬಾರದು. ನಮ್ಮನ್ನು ನಾವು ಕಳೆದುಕೊಂಡರೆ ಬೇರೆ ಯಾವುದಕ್ಕೂ ಪ್ರಾಮುಖ್ಯತೆಯೇ ಇರುವುದಿಲ್ಲ.