ಸಿನಿವಾರ್ತೆ
ಪುನೀತ್ ರಾಜ್‌ಕುಮಾರ್ ಅವರ 51ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು, ಕುಟುಂಬದವರು ಅದ್ದೂರಿಯಾಗಿ ಆಚರಿಸಿದ್ದಾರೆ. ಹುಟ್ಟುಹಬ್ಬ ಪ್ರಯುಕ್ತ ಕಂಠೀರವ ಸ್ಟುಡಿಯೋಗೆ ಆಗಮಿಸಿದ ರಾಘವೇಂದ್ರ ರಾಜ್‌ಕುಮಾರ್, ಯುವರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಅವರು ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
ಅಗಲಿದ ನಂತರ ಆಚರಿಸುತ್ತಿರುವ 5ನೇ ವರ್ಷದ ಹುಟ್ಟುಹಬ್ಬ
ತಮ್ಮ ಪುತ್ರಿಯನ್ನು ನೋಡಲು ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರು ಅಮೆರಿಕಾಗೆ ತೆರಳಿದ್ದರಿಂದ ಈ ವರ್ಷ ಅವರು ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಪುನೀತ್ ರಾಜ್‌ಕುಮಾರ್ ಅವರು ಅಗಲಿದ ನಂತರ ಆಚರಿಸುತ್ತಿರುವ 5ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ಇದಾಗಿದೆ.
ಪುನೀತ್ ಅವರ ಸಮಾಧಿಗೆ ವಿಶೇಷ ಹೂವಿನ ಅಲಂಕಾರ
ಕಂಠೀರವ ಸ್ಟುಡಿಯೋದಲ್ಲಿನ ಪುನೀತ್ ಅವರ ಸಮಾಧಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಅಪ್ಪು ಅವರು ನಟಿಸಿರುವ ವಿವಿಧ ಸಿನಿಮಾಗಳ ಕಟೌಟ್‌ಗಳು ಕೂಡ ರಾರಾಜಿಸಿದವು. ಇದೇ ಸಂದರ್ಭದಲ್ಲಿ ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದ ಅಭಿಮಾನಿಗಳಿಗೆ ರಾಜ್ ಕುಟುಂಬದಿಂದ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಎಂದಿನಂತೆ ರಕ್ತದಾನ ಹಾಗೂ ಉಚಿತವಾಗಿ ಸಸಿಗಳನ್ನು ನೆಡುವಂತಹ ಸಮಾಜಮುಖಿ ಕಾರ್ಯಕ್ರಮಗಳು ನಡೆಯಿತು.
ಪುನೀತ್ ಸಮಾಧಿಗೆ ಪೂಜೆ ಮಾಡಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿನಯ್ ರಾಜ್‌ಕುಮಾರ್ ಮತ್ತು ಯುವ ರಾಜ್‌ಕುಮಾರ್, ‘ಅಭಿಮಾನಿಗಳ ಈ ಸಂಭ್ರಮದ ಕಾರಣಕ್ಕೆ ಪುನೀತ್‌ರಾಜ್‌ಕುಮಾರ್ ಅವರು ನಮ್ಮೊಂದಿಗೇ ಇದ್ದಾರೆ ಎನ್ನುವ ಭಾವನೆ ಮೂಡುತ್ತದೆ. ಪ್ರತಿ ವರ್ಷ ಹೀಗೆ ಅಭಿಮಾನಿಗಳು ಚಿಕ್ಕಪ್ಪ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಅವರ ಚಿತ್ರಗಳು ಮರು ಬಿಡುಗಡೆಯಾದರೆ ನೋಡಿ ಖುಷಿ ಪಡುತ್ತಿದ್ದಾರೆ. ಅಭಿಮಾನಿಗಳಿಂದಲೇ ನಾವು’ ಎಂದರು.
