ಸಾರಾಂಶ
ಆಂಧ್ರದ ಆಹಾರ ತುಂಬಾ ಖಾರ. ನಮ್ಮ ಕೆಲ ಹೂಡಿಕೆಗಳೂ ಕೂಡ ಅದೇ ರೀತಿ ಇದ್ದಂತಿದೆ. ಯಾಕೆಂದರೆ ಕೆಲ ನೆರೆಹೊರೆಯವರಿಗೆ ಅದರ ಉರಿ ತಟ್ಟುತ್ತಿದೆ’! ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಆಂಧ್ರದ ಐಟಿ ಸಚಿವ ನಾರಾ ಲೋಕೇಶ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮತ್ತೆ ಟಾಂಗ್ ನೀಡಿದ್ದು ಹೀಗೆ
ನವದೆಹಲಿ: ‘ಆಂಧ್ರದ ಆಹಾರ ತುಂಬಾ ಖಾರ. ನಮ್ಮ ಕೆಲ ಹೂಡಿಕೆಗಳೂ ಕೂಡ ಅದೇ ರೀತಿ ಇದ್ದಂತಿದೆ. ಯಾಕೆಂದರೆ ಕೆಲ ನೆರೆಹೊರೆಯವರಿಗೆ ಅದರ ಉರಿ ತಟ್ಟುತ್ತಿದೆ’!
ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಆಂಧ್ರದ ಐಟಿ ಸಚಿವ ನಾರಾ ಲೋಕೇಶ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮತ್ತೆ ಟಾಂಗ್ ನೀಡಿದ್ದು ಹೀಗೆ. ಈ ಮೂಲಕ ನೆರೆಯ ಬೆಂಗಳೂರಿನ ಮೂಲಸೌಲಭ್ಯ ವಿಚಾರವಾಗಿ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಜತೆಗೆ ಮತ್ತೊಂದು ಸುತ್ತಿನ ತಿಕ್ಕಾಟಕ್ಕೆ ಮುಂದಾಗಿದ್ದಾರೆ.
ಇಂಟರ್ನೆಟ್ ದೈತ್ಯ ಗೂಗಲ್‌ನ 1.31 ಲಕ್ಷ ಕೋಟಿ ರು. ವೆಚ್ಚದ ಡೇಟಾ ಸೆಂಟರ್ ಯೋಜನೆ ಬೆಂಗಳೂರಿನ ಕೈತಪ್ಪಿ ವಿಶಾಖಪಟ್ಟಣದ ಪಾಲಾಗುತ್ತಿದ್ದಂತೆ ಅಸಮಾಧಾನ ಹೊರಹಾಕಿರುವ ಕರ್ನಾಟಕದ ಸಚಿವರಿಗೆ ಬುಧವಾರವಷ್ಟೇ ನಾರಾ ಲೋಕೇಶ್ ತಿರುಗೇಟು ನೀಡಿದ್ದರು. ‘ಕರ್ನಾಟಕದವರು ಅಸಮರ್ಥರಾದರೆ ನಾನೇನು ಮಾಡಲು ಸಾಧ್ಯ? ಅವರ ಉದ್ಯಮಿಗಳೇ ಮೂಲಸೌಲಭ್ಯಗಳು, ವಿದ್ಯುತ್ ಕಡಿತ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮೊದಲು ಅವರು ತಮ್ಮ ಸಮಸ್ಯೆಗಳನ್ನು ಸರಿಮಾಡಿಕೊಳ್ಳಲಿ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಇದು ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಕಾರಣವಾಗಿತ್ತು. ಇದರ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್, ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತಿತರರು ಕಿಡಿಕಾರಿದ್ದರು.