ಡಿಕೆಶಿ ಸ್ವಂತ ತಪ್ಪಿಗೆ ಜೈಲಿಗೆ ಹೋದದ್ದು, ಬಿಜೆಪಿ ಕಳಿಸಿದ್ದಲ್ಲ : ಕೋಟ

| N/A | Published : Oct 17 2025, 01:03 AM IST / Updated: Oct 17 2025, 10:51 AM IST

Kota Srinivas Poojary
ಡಿಕೆಶಿ ಸ್ವಂತ ತಪ್ಪಿಗೆ ಜೈಲಿಗೆ ಹೋದದ್ದು, ಬಿಜೆಪಿ ಕಳಿಸಿದ್ದಲ್ಲ : ಕೋಟ
Share this Article
  • FB
  • TW
  • Linkdin
  • Email

ಸಾರಾಂಶ

ಡಿಕೆಶಿ ಅವರು ಜೈಲಿಗೆ ಹೋಗಿದ್ದು ಆರ್ಥಿಕ ಅಪರಾಧ ಮಾಡಿರುವುದಕ್ಕೆ, ಬಿಜೆಪಿಯವರೇ ಆಗಿದ್ದ ಜನಾರ್ದನ ರೆಡ್ಡಿ ಕೂಡ ಜೈಲಿಗೆ ಹೋಗಿದ್ದು ಆರ್ಥಿಕ ಅಪರಾಧದ ಕಾರಣಕ್ಕೆ, ಹೊರತು ಬಿಜೆಪಿ ಅವರನ್ನು ಜೈಲಿಗೆ ಕಳುಹಿಸಿದ್ದಲ್ಲ ಎಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ: ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಬಿಜೆಪಿ ಆಫರ್ ನೀಡಿರುವ ಸಾಧ್ಯತೆಗಳಿಲ್ಲ, ಒಂದು ವೇಳೆ ಅವರು ಹೇಳುತ್ತಿರುವುದು ನಿಜವಾಗಿದ್ದರೆ ಅದನ್ನವರು ಆಗಲೇ ಯಾಕೆ ಹೇಳಿಲ್ಲ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪ್ರಶ್ನಿಸಿದ್ದಾರೆ.ಡಿ.ಕೆ. ಶಿವಕುಮಾರ್‌ ಅವರು ತಮಗೆ ಬಿಜೆಪಿಯಿಂದ ಉಪಮುಖ್ಯಮಂತ್ರಿಯ ಆಫರ್ ಬಂದಿತ್ತು ಅಥವಾ ಜೈಲಿಗೆ ಕಳುಹಿಸುವ ಬೆದರಿಕೆ ಬಂದಿತ್ತು, ತಾನು ಜೈಲು ಆಯ್ಕೆ ಮಾಡಿಕೊಂಡೆ ಎಂದು ಹೇಳಿರುವುದಕ್ಕೆ, ಕೋಟ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು. 

ಡಿಕೆಶಿ ಅವರು ಜೈಲಿಗೆ ಹೋಗಿದ್ದು ಆರ್ಥಿಕ ಅಪರಾಧ ಮಾಡಿರುವುದಕ್ಕೆ, ಬಿಜೆಪಿಯವರೇ ಆಗಿದ್ದ ಜನಾರ್ದನ ರೆಡ್ಡಿ ಕೂಡ ಜೈಲಿಗೆ ಹೋಗಿದ್ದು ಆರ್ಥಿಕ ಅಪರಾಧದ ಕಾರಣಕ್ಕೆ, ಹೊರತು ಬಿಜೆಪಿ ಅವರನ್ನು ಜೈಲಿಗೆ ಕಳುಹಿಸಿದ್ದಲ್ಲ. ಆಗ ಡಿಕೆಶಿ ಬಿಜೆಪಿ ವಿರುದ್ಧ ಆರೋಪ ಮಾಡಿರಲಿಲ್ಲ, ಬದಲಾಗಿ ತಾವೇ ಪ್ರಧಾನಿ ಮೋದಿ ಅವರ ಸಮಯಾವಕಾಶ ತಗೊಂಡು ಭೇಟಿ ಮಾಡಿ, ತಮ್ಮನ್ನು ರಕ್ಷಿಸುವಂತೆ ಕೇಳಿದ್ದರು. 

ಈಗ ಡಿಕೆಶಿ ತಮ್ಮನ್ನು ಮೋದಿ ಅವರೇ ಕರೆದಿದ್ದಾರಾ ಅಥವಾ ಡಿಕೆಶಿ ಅವರೇ ಸಮಯ ತೆಗೆದುಕೊಂಡು ಹೋಗಿ ಮೋದಿ ಅವರನ್ನು ಭೇಟಿಯಾದರಾ ಅವರು ಹೇಳಲಿ ಎಂದು ಕೋಟ ಹೇಳಿದರು.  

ಡಿ.ಕೆ. ಶಿವಕುಮಾರ್ ಒಬ್ಬ ಪ್ರಬುದ್ಧ ರಾಜಕಾರಣಿ, ಸಮಯ ಗಮನಿಸಿ ನಿರ್ಧಾರ ತೆಗೆದುಕೊಳ್ಳುವವರು, ಈಗ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ, ಅದಕ್ಕೆ ಬಿಜೆಪಿ ಉತ್ತರ ಕೊಡುತ್ತದೆ ಎಂದರು.ಕರ್ನಾಟಕದಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ವಿಳಂಬ ಅಂತೇನಿಲ್ಲ, ಒಂದೊಂದೇ ರಾಜ್ಯಗಳ ಅಧ್ಯಕ್ಷರ ಆಯ್ಕೆ ಕ್ರಮವಾಗಿ ನಡೆಯುತ್ತದೆ, ಹೊರತು ಒಂದೇ ಬಾರಿ ಆಗುವುದಿಲ್ಲ, ಗುಜರಾತ್‌ ರಾಜ್ಯಾಧ್ಯಕ್ಷರ ಆಯ್ಕೆ ನಡೆದಿದೆ, ಬೇರೆ ರಾಜ್ಯಗಳಲ್ಲಿಯೂ ಆಗುತ್ತಿದೆ, ಕರ್ನಾಟಕದಲ್ಲಿಯೂ ಆಗುತ್ತಿದೆ, ಈಗ ವಿಜಯೇಂದ್ರ ಅಧ್ಯಕ್ಷರಾಗಿದ್ದಾರೆ. ಮುಂದೆ ಯಾರೂ ಎಂಬುದನ್ನು ಅಂತ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಬಗ್ಗೆ ಕಾಂಗ್ರೆಸ್ ನಲ್ಲಿಯೇ ಚರ್ಚೆ ಆಗುತ್ತಿದೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಆಯ್ಕೆ ಅದರ ಶಾಸಕರಿಗೆ ಬಿಟ್ಟ ವಿಚಾರ, ಕಾಂಗ್ರೆಸ್ ತನ್ನ ನಿರ್ಧಾರವನ್ನು ಮಾಡಲಿ, ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದ ಕೋಟ, ಸಿದ್ದರಾಮಯ್ಯ ನಾನೇ 5 ವರ್ಷ ಮುಖ್ಯಮಂತ್ರಿ ಅಂತಿದ್ದಾರೆ, ಆದರೆ ಡಾ. ಪರಮೇಶ್ವರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗ್ತಾರೆ ಅಂತಿದ್ದಾರೆ, ಬಹುಶಃ ಅವರು ಸಿದ್ದರಾಮಯ್ಯರಿಗೆ ದಾರಿ ಬಿಡಿ, ಖರ್ಗೆ ಬರ್ತಿದ್ದಾರೆ ಎಂದು ಹೇಳಿದಂತಿದೆ ಎಂದು ಕೋಟ ಹೇಳಿದರು.

Read more Articles on