ಸಾರಾಂಶ
ಆರೆಸ್ಸೆಸ್‌ಗೆ ಯಾವುದೇ ಸ್ವಾರ್ಥವಿಲ್ಲ ಎನ್ನುವುದು ನನಗೆ ಮನದಟ್ಟಾಗಿದೆ. ಅವರು ನಮ್ಮೊಂದಿಗೆ ನಿಂತು, ಸರ್ಕಾರದ ಕೈಗಳನ್ನು ಬಲಪಡಿಸಬೇಕು. ಅಧಿಕಾರದಲ್ಲಿರುವ ಕೆಲ ಕಾಂಗ್ರೆಸ್ಸಿಗರು ತಾವು ಆರೆಸ್ಸೆಸ್ಸನ್ನು ಹೊಸಕಿ ಹಾಕಬಹುದು ಎಂದುಕೊಂಡಿದ್ದಾರೆ
ಆರ್.ಅಶೋಕ್- ಲೇಖನ
‘ಆರೆಸ್ಸೆಸ್‌ಗೆ ಯಾವುದೇ ಸ್ವಾರ್ಥವಿಲ್ಲ ಎನ್ನುವುದು ನನಗೆ ಮನದಟ್ಟಾಗಿದೆ. ಅವರು ನಮ್ಮೊಂದಿಗೆ ನಿಂತು, ಸರ್ಕಾರದ ಕೈಗಳನ್ನು ಬಲಪಡಿಸಬೇಕು. ಅಧಿಕಾರದಲ್ಲಿರುವ ಕೆಲ ಕಾಂಗ್ರೆಸ್ಸಿಗರು ತಾವು ಆರೆಸ್ಸೆಸ್ಸನ್ನು ಹೊಸಕಿ ಹಾಕಬಹುದು ಎಂದುಕೊಂಡಿದ್ದಾರೆ. ಆದರೆ, ದಂಡ ಪ್ರಯೋಗದಿಂದ ಒಂದು ಸಂಘಟನೆಯನ್ನು ಹತ್ತಿಕ್ಕುವುದು ಸಾಧ್ಯವಿಲ್ಲ. ಅದೇನಿದ್ದರೂ ಕಳ್ಳಕಾಕರು ಮತ್ತು ಡಕಾಯಿತರನ್ನು ಸದೆಬಡಿಯಲು ಇರುವಂಥದ್ದು. ಇಷ್ಟಕ್ಕೂ ಆರೆಸ್ಸೆಸ್ಸಿನವರು ಈ ಜಾತಿಗೆ ಸೇರಿದವರಲ್ಲ, ಬದಲಿಗೆ ಭಾರತವನ್ನು ಪ್ರೀತಿಸುವ ದೇಶಭಕ್ತರು’.
-ಸರ್ದಾರ್ ವಲ್ಲಭಭಾಯ್ ಪಟೇಲ್
1925ರ ವಿಜಯದಶಮಿಯ ಶುಭದಿನದಂದು ರಾಷ್ಟ್ರವಾದಿ ನೇತಾರ, ದೂರದೃಷ್ಟಿಯ ದ್ರಷ್ಟಾರ ಡಾ.ಕೇಶವ ಬಲಿರಾಂ ಹೆಡಗೇವಾರರಿಂದ ಅಸ್ತಿತ್ವಕ್ಕೆ ಬಂದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಈಗ ಶತಮಾನೋತ್ಸವದ ಸಂಭ್ರಮ. ಇದರ ಅಂಗವಾಗಿ, ಕರ್ನಾಟಕದ ಉದ್ದಗಲಕ್ಕೂ ಸೇರಿ ಇಡೀ ಭಾರತದಾದ್ಯಂತ ಶಿಸ್ತುಬದ್ಧ ಪಥಸಂಚಲನವೂ ಸೇರಿ ಹತ್ತಾರು ರಚನಾತ್ಮಕ ಕಾರ್ಯಕ್ರಮಗಳು ನಡೆಯುತ್ತಿವೆ. ಇದರಿಂದಾಗಿ ಇಡೀ ದೇಶವಾಸಿಗಳಲ್ಲಿ ಅಸ್ಮಿತೆಯ ಪ್ರಜ್ಞೆ ಜಾಗೃತಗೊಂಡಿದ್ದು, ಇದು ದೇಶದ ಭವಿಷ್ಯದ ಬಗ್ಗೆ ಅಪಾರ ಭರವಸೆಯ ಹೊಸ ಅಲೆಯನ್ನೇ ಸೃಷ್ಟಿಸಿದೆ. ಇನ್ನೊಂದೆಡೆಯಲ್ಲಿ, ದೇಶದ 140 ಕೋಟಿ ಜನರಲ್ಲಿ ಸುಭದ್ರತೆ ಮತ್ತು ಸುರಕ್ಷತೆಗಳ ರೋಮಾಂಚನದ ಹಿತಾನುಭವವನ್ನು ಉಂಟುಮಾಡುತ್ತಿದೆ. ಇವೆಲ್ಲವೂ ದೇಶವಾಸಿಗಳಲ್ಲಿ ಸ್ವಯಂಸ್ಫೂರ್ತಿಯಿಂದ ಕಂಡುಬರುತ್ತಿರುವ ಅಭಯದ ಭಾವನೆಯಾಗಿದೆ.
ಆದರೆ, ಇದನ್ನು ಕಂಡು ಕಾಂಗ್ರೆಸ್ ಪಕ್ಷಕ್ಕೂ ಅದರ ನಾಯಕರಿಗೂ ಎದೆಯೊಳಗೆ ಅವಲಕ್ಕಿ ಕುಟ್ಟಿದಂತಾಗುತ್ತಿದೆ. ಎ.ಒ.ಹ್ಯೂಮ್ ಎಂಬ ಒಬ್ಬ ಪರದೇಶಿಯಿಂದ ಹುಟ್ಟಿಕೊಂಡ ಕಾಂಗ್ರೆಸ್ ಈಗ ಬಹುಮಟ್ಟಿಗೆ ಅವನತಿಯ ಅಂಚಿನಲ್ಲಿದೆ. ಅದು ಕುಟುಕುಜೀವ ಉಳಿಸಿಕೊಂಡಿರುವುದು ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಮಾತ್ರ. ದೆಹಲಿಯಲ್ಲಿ ಅರವತ್ತು ವರ್ಷಗಳ ಕಾಲ ಯಾವ ಹೊಣೆಗಾರಿಕೆಯೂ ಇಲ್ಲದೆ ಅಧಿಕಾರದ ರುಚಿ ಕಂಡ ಆ ಪಕ್ಷ, ಈಗ ಅಧಿಕಾರವಿಲ್ಲದೆ ಬದುಕಲಾರದ ದುರವಸ್ಥೆಯಲ್ಲಿದೆ. ಹೀಗಾಗಿಯೇ ಅದು ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ಟೂಲ್‌ಕಿಟ್‌ಗಳ ದಾಳ ಉರುಳಿಸುತ್ತಿದ್ದು, ತನ್ನ ಸ್ವಾರ್ಥಕ್ಕಾಗಿ ವಿದೇಶಿ ದುಷ್ಟಶಕ್ತಿಗಳೊಂದಿಗೆ ಶಾಮೀಲಾಗಿದ್ದು, ದಿನದಿಂದ ದಿನಕ್ಕೆ ಜನರ ಮುಂದೆ ಬೆತ್ತಲಾಗುತ್ತಿದೆ.
ಒಟ್ಟಿನಲ್ಲಿ ಆ ಪಕ್ಷದವರ ಅಸಲಿ ಬಣ್ಣ ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿಯೇ, ನಮ್ಮ ಅಗ್ರಗಣ್ಯ ನಾಯಕರಾಗಿದ್ದ ವಾಜಪೇಯಿಯವರು, ʻತಾನು ಅಧಿಕಾರದಲ್ಲಿ ಇಲ್ಲದಿದ್ದಾಗ ಕಾಂಗ್ರೆಸ್ ಹೆಚ್ಚು ಅಪಾಯಕಾರಿʼ ಎಂದು ಎಚ್ಚರಿಸಿದ್ದರು. ಅವರ ಮಾತಿನಲ್ಲಿ ನೂರಕ್ಕೆ ನೂರರಷ್ಟು ಸತ್ಯವಿದೆ. ಇದೇ ರೀತಿ ಅಂಬೇಡ್ಕರ್ ಕೂಡ, ʻದಲಿತರು ಕಾಂಗ್ರೆಸ್ಸನ್ನು ಸೇರುವುದೆಂದರೆ ಧಗಧಗನೆ ಉರಿಯುತ್ತಿರುವ ಮನೆ ಹೊಕ್ಕಂತೆʼ ಎಂದು ಉದ್ಗರಿಸಿದ್ದರು.
ಈಗ ಸಿದ್ದರಾಮಯ್ಯ ನೇತೃತ್ವದ ಕಾಕದೃಷ್ಟಿ ಆರೆಸ್ಸೆಸ್ ಮೇಲೆ ಬಿದ್ದಿದೆ. ಈ ಪಿತೂರಿಯ ಭಾಗವಾಗಿ ಕುಟುಂಬ ರಾಜಕಾರಣದ ಕುಡಿಯಾಗಿರುವ ಸಚಿವ ಪ್ರಿಯಾಂಕ್ ಖರ್ಗೆ, ಆರೆಸ್ಸೆಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಸಿದ್ದರಾಮಯ್ಯ ಕ್ರಾಂತಿಯ ಭ್ರಮೆಯಲ್ಲಿ ಮುಂದಿನ ಕ್ರಮಕ್ಕೆ ಸೂಚಿಸಿ, ತಮ್ಮ ದಿಲ್ಲಿಯ ಪ್ರಭೃತಿಗಳನ್ನು ತೃಪ್ತಿಪಡಿಸುವ ದಾಸ್ಯದ ಬುದ್ಧಿಯನ್ನೂ ಬೌದ್ಧಿಕ ದಾರಿದ್ರ್ಯವನ್ನೂ ಪ್ರದರ್ಶಿಸಿಕೊಂಡಿದ್ದಾರೆ. ಇದರ ವಿರುದ್ಧ ಜನಾಕ್ರೋಶ ಆಸ್ಫೋಟಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಸರ್ಕಾರ ತನ್ನ ಇಡೀ ವಂದಿಮಾಗಧರನ್ನೂ ವಿಭಜಕ ಮನೋಭಾವದ (ದುರ್)ಬುದ್ಧಿಜೀವಿಗಳನ್ನೂ ಅಖಾಡಕ್ಕೆ ತಳ್ಳಿದೆ. ಇದು ಸತತ ವೈಫಲ್ಯ, ಒಂದರ ಹಿಂದೊಂದರಂತೆ ಬಯಲಾಗುತ್ತಿರುವ ಕರ್ಮಕಾಂಡಗಳು, ಎಗ್ಗಿಲ್ಲದೆ ನಡೆಯುತ್ತಿರುವ ಭ್ರಷ್ಟಾಚಾರ, ಸಿಎಂ ಗಾದಿಗಾಗಿ ನಡೆಯುತ್ತಿರುವ ಒಳಜಗಳ ಇತ್ಯಾದಿಗಳಿಂದ ಜನರ ಗಮನ ಬೇರೆಡೆಗೆ ಸೆಳೆಯುವ ಕುತಂತ್ರವೂ ಆಗಿದೆ.
ಚರಿತ್ರೆಯಲ್ಲಿ ಅದೆಷ್ಟೋ ಸಂಘಟನೆಗಳು ಬಂದುಹೋಗಿವೆ. ಇಂದು ಅವುಗಳ ಹೆಸರು ಕೂಡ ಎಲ್ಲೂ ಉಳಿದುಕೊಂಡಿಲ್ಲ. ಆದರೆ, ಆರೆಸ್ಸೆಸ್ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ದಿನದಿಂದ ದಿನಕ್ಕೆ ಮತ್ತಷ್ಟು ಬಲಗೊಳ್ಳುತ್ತ ಇಡೀ ಜಗತ್ತಿನ ಗಮನ ಸೆಳೆದಿದೆ. ಇದಕ್ಕೆ ಕಾರಣವೆಂದರೆ ಆರೆಸ್ಸೆಸ್ಸಿನ ಮೂಲಗುರಿಗಳು. ಇವೆಂದರೆ- ಸಾಂಸ್ಕೃತಿಕ ರಾಷ್ಟ್ರೀಯತೆ, ಹಿಂದೂ ಧರ್ಮದ ಸಂಘಟನೆ ಮತ್ತು ಸಾಮಾಜಿಕ ಸಾಮರಸ್ಯ, ಚಾರಿತ್ರ್ಯ ನಿರ್ಮಾಣ ಮತ್ತು ಶಿಸ್ತು, ಹಾಗೂ ನಿಸ್ವಾರ್ಥ ಸೇವೆ. ಇವುಗಳ ಜೊತೆ ಕಾಲದ ಅಗತ್ಯಕ್ಕೆ ತಕ್ಕಂತೆ ಸ್ವಬೋಧ (ಸ್ವಾವಲಂಬನೆ), ಪರ್ಯಾವರಣ (ಪರಿಸರ ಸಂರಕ್ಷಣೆ) ಮತ್ತು ಕೌಟುಂಬಿಕ ಮೌಲ್ಯಗಳ ಪ್ರಸಾರ (ಕುಟುಂಬ ಪ್ರಬೋಧಿನೀ) ಇಂತಹ ಉಪಕ್ರಮಗಳನ್ನೂ ಸಂಘ ತನ್ನದಾಗಿಸಿಕೊಂಡಿದೆ.
ಆದರೆ, ಸಂಘದ ನೆಲೆ-ಹಿನ್ನೆಲೆ ಏನೂ ಗೊತ್ತಿರದ ಕಾಂಗ್ರೆಸ್ಸಿನ ಪಟಾಲಂ, ಇಂತಹ ಚಾರಿತ್ರಿಕ ಸಂಘಟನೆ ಮೇಲೆ ಏನೇನೋ ಬಡಬಡಿಸುತ್ತಿದ್ದಾರೆ. ಇದು ಮುಸ್ಲಿಂ ಲೀಗ್ ಜತೆ ಷಾಮೀಲಾಗಿ ದೇಶವನ್ನೇ ಇಬ್ಭಾಗ ಮಾಡಿದ ಮತ್ತು ತನ್ನ ಅಧಿಕಾರದ ಲಾಲಸೆಗಾಗಿ ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕೋಮುಗಲಭೆ ನಡೆಸಿದ ಕರಾಳ ಇತಿಹಾಸದ ಕಾಂಗ್ರೆಸ್ ಪಕ್ಷದ ನಿಜವಾದ ಬಂಡವಾಳ! ನೆಹರೂ ಕಾಲದಲ್ಲಿ ಆ ಪಕ್ಷಕ್ಕೆ ಅಂಟಿಕೊಂಡ ಈ ಕಾಮಾಲೆ, ಈಗ ಅವರ ಮರಿಮೊಮ್ಮಗ ರಾಹುಲ್ ಗಾಂಧಿ ಮತ್ತು ರಾಜ್ಯದಲ್ಲಿರುವ ಎಐಸಿಸಿ ಅಧ್ಯಕ್ಷರ ಕುಡಿ ಪ್ರಿಯಾಂಕ್ ಖರ್ಗೆಗೂ ಹಬ್ಬಿದೆ. ಹೀಗಾಗಿಯೇ ಆ ಪಕ್ಷವು ಇಂದು ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ, ಒಡಿಶಾ, ಅಸ್ಸಾಂ, ಗುಜರಾತ್, ಬಂಗಾಳ, ಪಂಜಾಬ್, ಹರ್ಯಾಣ, ದೆಹಲಿ, ಇಡೀ ಈಶಾನ್ಯ ಭಾರತ, ಉತ್ತರಪ್ರದೇಶ, ಉತ್ತರಾಖಂಡ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್‌ಗಢ, ಕಾಶ್ಮೀರ ಹೀಗೆ ಎಲ್ಲಾ ಕಡೆಗಳಲ್ಲೂ ನಾಮಾವಶೇಷವಾಗಿ ಹೋಗಿದೆ.
ಆರೆಸ್ಸೆಸ್ ಇಂದು ಪೊಲಿಟಿಕಲ್ ಐಡಿಯಾಲಜಿ, ಸಮಾಜಸೇವೆ, ಶಿಕ್ಷಣ, ಕಾರ್ಮಿಕ ಕಲ್ಯಾಣ, ಸಮಾಜಕಾರ್ಯ, ಪ್ರಕೃತಿವಿಕೋಪ ಮತ್ತು ಸಾಂಕ್ರಾಮಿಕಗಳ ಸಂಕಷ್ಟದ ಸಮಯದಲ್ಲಿ ಪರಿಹಾರ ಕಾರ್ಯ ಹೀಗೆ ಎಲ್ಲ ರಂಗಗಳಲ್ಲೂ ಇಡೀ ದೇಶವೇ ಮೆಚ್ಚುವಂತಹ ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿದೆ. ಆದರೆ, 60 ವರ್ಷ ದೇಶವನ್ನಾಳಿದರೂ ಜನರ ಬಳಿಗೆ ಹೋಗದ ಕಾಂಗ್ರೆಸ್ಸಿಗೆ ನಿಜಕ್ಕೂ ನಾಚಿಕೆಯಾಗಬೇಕು!
ವೈದ್ಯಕೀಯ ಶಿಬಿರ, ರೋಗಗಳ ವಿರುದ್ಧ ಜಾಗೃತಿ, ಕುಷ್ಠರೋಗಿಗಳಿಗೆ ಪುನರ್ವಸತಿ, ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳು ಮತ್ತು ಭೂಕಂಪ, ಪ್ರವಾಹ, ಸುನಾಮಿ, ಬರಗಾಲ, ಕೋವಿಡ್ ತರಹದ ವಿಕೋಪದ ಸಂದರ್ಭಗಳಲ್ಲಿ ಆರೆಸ್ಸೆಸ್ ಆ ಧರ್ಮ, ಈ ಧರ್ಮ ಎಂದು ನೋಡದೆ, ಸಂಕಷ್ಟದಲ್ಲಿದ್ದ ಪ್ರತಿಯೊಬ್ಬ ಭಾರತೀಯರಿಗೂ ಸಹಾಯಹಸ್ತ ಚಾಚಿಕೊಂಡು ಬಂದಿದೆ. ಅವಸಾನದ ಅಂಚಿನಲ್ಲಿರುವ ಕಾಂಗ್ರೆಸ್ಸಿನ ಇತಿಹಾಸದಲ್ಲಿ ಇಂತಹ ಒಂದೇ ಒಂದು ರಚನಾತ್ಮಕ ಚಟುವಟಿಕೆಯೂ ಇಲ್ಲ. ಅವರದೇನಿದ್ದರೂ ಗುಲಾಮಗಿರಿಯಷ್ಟೆ!
ದೇಶದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ಪ್ರಬಲ ರಾಜಕಾರಣ ಕಟ್ಟುವಲ್ಲಿ ಆರೆಸ್ಸೆಸ್ ಗೆದ್ದಿದೆ. ಇದು ಆ ಪಕ್ಷಕ್ಕೆ ನುಂಗಲಾರದ ಬಿಸಿತುಪ್ಪವಾಗಿದೆ. ಆರೆಸ್ಸಿಸ್ಸಿನಿಂದಾಗಿ ದೇಶಕ್ಕೆ ಸಂದಿರುವ ಸೇವೆಗೆ ಬೆಲೆ ಕಟ್ಟುವುದು ಸಾಧ್ಯವಿಲ್ಲ. ಇಂತಹ ನಿಸ್ವಾರ್ಥ ಸಂಘಟನೆ ಮೇಲೆ ಕೆಂಗಣ್ಣು ಬೀರುವ ಕಾಂಗ್ರೆಸ್ಸಿನ ಪುಢಾರಿಗಳಿಗೆ ನಿಗೂಢವಾಗಿರುವ ಅನ್ಯಧರ್ಮೀಯ ಸಂಘಟನೆಗಳ ಬಗ್ಗೆ ಚಕಾರವನ್ನೆತ್ತುವ ಧೈರ್ಯವಾದರೂ ಇದೆಯೇ? ಅಯ್ಯೋ..ಕಾಂಗ್ರೆಸ್ಸಿನ ದುರ್ವಿಧಿಯೇ!