ಸಾರಾಂಶ
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಗೆ ತಲುಪಿದ್ದು, ಅಪಾಯಕ್ಕೆ ಬಾಯಿ ತೆರೆದು ನಿಂತಿವೆ.
ಸಂಭವಿಸಬಹುದಾದ ಅಪಾಯ ತಡೆಗೆ ಕೂಡಲೇ ಕ್ರಮ ವಹಿಸಲು ಸಾರ್ವಜನಿಕರ ಒತ್ತಾಯಬಿ.ಎಚ್.ಎಂ. ಅಮರನಾಥ ಶಾಸ್ತ್ರಿ
ಕನ್ನಡಪ್ರಭ ವಾರ್ತೆ ಕಂಪ್ಲಿಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಗೆ ತಲುಪಿದ್ದು, ಅಪಾಯಕ್ಕೆ ಬಾಯಿ ತೆರೆದು ನಿಂತಿವೆ. ಹಲವು ವರ್ಷಗಳಿಂದಲೂ ಶಿಥಿಲಾವಸ್ಥೆಗೆ ತಲುಪಿದ ಕಂಬ ಹಾಗೂ ಹಳೆಯದಾದ ವಿದ್ಯುತ್ ತಂತಿಗಳನ್ನು ತೆಗೆದು ನೂತನ ಕಂಬ ಮತ್ತು ತಂತಿಗಳನ್ನು ಅಳವಡಿಸಲು ಸಾಧ್ಯವಾಗಿಲ್ಲ. ಇದರಿಂದ ವಿದ್ಯುತ್ ಅವಘಡಗಳಂತಹ ಘಟನೆಗಳು ಸಂಭವಿಸುವ ಸಾಧ್ಯತೆಗಳಿದ್ದು, ಈ ಕುರಿತು ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ತಾಲೂಕಿನ ಜನತೆ ಆರೋಪಿಸಿದ್ದಾರೆ.
ಗ್ರಾಮೀಣ, ಪಟ್ಟಣ ಮತ್ತು ಮೆಟ್ರಿಯ 110 ಕೆವಿ ಉಪ ಕೇಂದ್ರ ಸೇರಿ ಒಟ್ಟಾರೆ ಕಂಪ್ಲಿ ತಾಲೂಕಿನಲ್ಲಿ 80ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಶಿಥಿಲಾವಸ್ಥೆಗೆ ತಲುಪಿವೆ. ಇನ್ನು ಅನೇಕ ಕಡೆಗಳಲ್ಲಿ ವಿದ್ಯುತ್ ತಂತಿ ಹಳೆಯದಾಗಿದ್ದು, ಯಾವ ಕ್ಷಣದಲ್ಲಾದರೂ ತುಂಡಾಗಿ ಬೀಳುವ ಸ್ಥಿತಿಯಲ್ಲಿವೆ. ಕಳೆದ ಎರಡು ಮೂರು ವಾರಗಳಿಂದ ತಾಲೂಕಿನ ಎಲ್ಲೆಡೆ ಮೋಡ ಕವಿದ ವಾತಾವರಣವಿದ್ದು, ಕೆಲ ದಿನ ಉತ್ತಮ ಮಳೆಯಾದರೆ ಇನ್ನು ಕೆಲ ದಿನ ಜಿಟಿ ಜಿಟಿ ಮಳೆಯಾಗುತ್ತಿದೆ. ನಿತ್ಯ ಬಿಟ್ಟು ಬಿಡದಂತೆ ಜೋರಾಗಿ ಗಾಳಿ ಬೀಸುತ್ತಿದೆ ಇದರಿಂದಾಗಿ ಶಿಥಿಲಾವಸ್ಥೆಗೆ ತಲುಪಿದ ವಿದ್ಯುತ್ ಕಂಬಗಳು, ಹಳೆಯಾದಾದ ವಿದ್ಯುತ್ ತಂತಿಗಳು ನೆಲಕ್ಕೆ ಬಿದ್ದು ವಿದ್ಯುತ್ ಅವಘಡಗಳು ಜರುಗುವ ಸಾಧ್ಯತೆಗಳು ಹೆಚ್ಚಾಗಿವೆ. ತಾಲೂಕಿನಲ್ಲಿ ಒಟ್ಟಾರೆ 120ಕ್ಕೂ ಹೆಚ್ಚು ಕಬ್ಬಿಣದ ವಿದ್ಯುತ್ ಕಂಬಗಳಿವೆ. ಇವು ಮಳೆಗಾಲದಲ್ಲಿ ಹೆಚ್ಚು ಅಪಾಯಕಾರಿಯಾಗಿದ್ದು, ಹಲವೆಡೆ ಎಮ್ಮೆಗಳು, ಹಸುಗಳು ಸೇರಿ ಅನೇಕ ಪ್ರಾಣಿಗಳಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆಗಳು ತಾಲೂಕಿನಲ್ಲಿ ನಡೆದಿವೆ. ಶಿಥಿಲಾವಸ್ಥೆಗೆ ತಲುಪಿದ ಕಂಬ, ಹಳೆಯದಾದ ವಿದ್ಯುತ್ ತಂತಿಗಳನ್ನು ಬದಲಿಸಿ ಹಾಗೂ ಕಬ್ಬಿಣದ ಕಂಬಗಳನ್ನು ತೆರವುಗೊಳಿಸಿ ಸಿಮೆಂಟ್‌ನಿಂದ ನಿರ್ಮಿಸಲಾದ ಕಂಬಗಳನ್ನು ಅಳವಡಿಸಿ ಆಗಬಹುದಾದ ಅಪಾಯ ತಡೆಯಲು ಅಧಿಕಾರಿಗಳು ಮುಂದಾಗಬೇಕು ಎಂದು ಸಾರ್ವಜನಿಕರು ಅನೇಕ ಬಾರಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಈವರೆಗೂ ಯಾವ ಪ್ರಯೋಜನವೂ ಆಗಿಲ್ಲ ಎಂಬುದು ಬೇಸರದ ಸಂಗತಿ.ಜೆಸ್ಕಾಂ ಕಚೇರಿಯಲ್ಲಿಯೇ ಇವೆ ಶಿಥಿಲಗೊಂಡ ಕಂಬಗಳು:
ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ಗುಲ್ಬರ್ಗ ವಿದ್ಯುಚಕ್ತಿ ಸರಬರಾಜು ಕಂ. ನಿ ಸಹಾಯಕ ಎಂಜಿನಿಯರ್ ಕಚೇರಿ ಕಾರ್ಯ ಮತ್ತು ಪಾಲನ ಶಾಖೆಯ ಆವರಣದಲ್ಲಿಯೇ ಕೆಲ ಕಂಬಗಳು ಶಿಥಿಲಾವಸ್ಥೆಗೆ ತಲುಪಿದ್ದು, ಹಳೆಯದಾದ ವಿದ್ಯುತ್ ತಂತಿಗಳು ಈಗಲೋ ಆಗಲೋ ತುಂಡಾಗಿ ಬೀಳುತ್ತಾವೇನೋ ಎಂಬ ಸ್ಥಿತಿಯಲ್ಲಿವೆ. ತಮ್ಮ ಕಚೇರಿ ಆವರಣದಲ್ಲಿನ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳನ್ನೇ ಸರಿಪಡಿಸುವಲ್ಲಿ ಅಧಿಕಾರಿಗಳು ಅಸಹಾಯಕರಾಗಿದ್ದು, ಇನ್ನು ಎಷ್ಟರ ಮಟ್ಟಿಗೆ ಸಾರ್ವಜನಿಕ ಸ್ಥಳಗಳಲ್ಲಿನ ವಿದ್ಯುತ್ ಕಂಬಗಳನ್ನು ಹಾಗೂ ತಂತಿಗಳನ್ನು ಬದಲಿಸಿ ಉತ್ತಮ ಸೇವೆ ಸಲ್ಲಿಸಲಿದ್ದಾರೆ ಎಂಬ ಪ್ರಶ್ನೆ ಜನತೆಯದ್ದಾಗಿದೆ.