ತುಮಕೂರಿನಲ್ಲಿ ಅದ್ಧೂರಿ ದಸರಾಕ್ಕೆ ಆನೆಗಳ ತಾಲೀಮು

| Published : Oct 09 2024, 01:32 AM IST

ಸಾರಾಂಶ

ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲಾಡಳಿತದ ವತಿಯಿಂದ ದಸರಾ ಉತ್ಸವವನ್ನು ಆಚರಿಸಲಾಗುತ್ತಿದ್ದು, ಅ. 12 ರಂದು ಅದ್ಧೂರಿಯಾಗಿ ಜಂಬೂಸವಾರಿ ನಡೆಸುವ ಸಲುವಾಗಿ ನಗರದಲ್ಲಿಂದು ಎರಡು ಲಕ್ಷ್ಮೀ ಆನೆಗಳ ತಾಲೀಮು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರುಕಲ್ಪತರುನಾಡು ತುಮಕೂರಿನಲ್ಲಿ ಈ ಬಾರಿ ದಸರಾ ಸಂಭ್ರಮ ಮನೆ ಮಾಡಿದೆ. ಇದೇ ಮೊದಲ ಬಾರಿಗೆ ಜಿಲ್ಲಾಡಳಿತದ ವತಿಯಿಂದ ದಸರಾ ಉತ್ಸವವನ್ನು ಆಚರಿಸಲಾಗುತ್ತಿದ್ದು, ಅ. 12 ರಂದು ಅದ್ಧೂರಿಯಾಗಿ ಜಂಬೂಸವಾರಿ ನಡೆಸುವ ಸಲುವಾಗಿ ನಗರದಲ್ಲಿಂದು ಎರಡು ಲಕ್ಷ್ಮೀ ಆನೆಗಳ ತಾಲೀಮು ನಡೆಸಲಾಯಿತು. ತುಮಕೂರು ದಸರಾ ಉತ್ಸವಕ್ಕೆ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮೀ ಹಾಗೂ ತಿಪಟೂರು ತಾಲೂಕು ಕಾಡು ಸಿದ್ದೇಶ್ವರ ಮಠದ ಲಕ್ಷ್ಮೀ ಆನೆಗಳನ್ನು ತೊಡಗಿಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಜಂಬೂಸವಾರಿ ಮೆರವಣಿಗೆಯ ತಾಲೀಮು ನಡೆಸಲಾಯಿತು.ಡಿಎಫ್‌ಐ ಎಚ್. ಅನುಪಮಾ ನೇತೃತ್ವದಲ್ಲಿ ಜಂಬೂಸವಾರಿ ನಡೆಯಲಿರುವ ಮಾರ್ಗದಲ್ಲಿ ಎರಡು ಲಕ್ಷ್ಮೀ ಆನೆಗಳ ತಾಲೀಮು ನಡೆಸಿದ್ದು, ರಸ್ತೆಯಲ್ಲಿ ಯಾವುದೇ ಗಲಾಟೆ ಇಲ್ಲದೆ ಎರಡು ಆನೆಗಳು ಗಾಂಭೀರ್ಯದಿಂದ ಹೆಜ್ಜೆ ಹಾಕಿದವು. ಈ ಸಂದರ್ಭದಲ್ಲಿ ಮಾತನಾಡಿದ ಡಿಎಫ್‌ಐ ಎಚ್. ಅನುಮಪ ಅವರು, ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮೀ ಆನೆ 6300 ಕೆ.ಜಿ. ಇದ್ದು, ಈ ಆನೆ ಅಂಬಾರಿ ಹೊರಲಿದೆ. ತಿಪಟೂರು ಕಾಡುಸಿದ್ದೇಶ್ವರ ಮಠದ ಲಕ್ಷ್ಮೀ ಆನೆ 3400 ಕೆ.ಜಿ. ಇದ್ದು, ಈ ಆನೆಯು ಸಹ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದೆ. ಈ ಎರಡು ಆನೆಗಳು ಯಾವುದೇ ಗಲಾಟೆ ಇಲ್ಲದೆ ರಸ್ತೆಯಲ್ಲಿ ಜನಸಂದಣಿ ಮಧ್ಯೆ ಹೆಜ್ಜೆ ಹಾಕಿವೆ ಎಂದರು.

ಈ ಆನೆಗಳು ಈಗಾಗಲೇ ಜನಸಂದಣಿಗೆ ಹೊಂದಿಕೊಂಡಿರುವುದರಿಂದ ನಮಗೂ ತಾಲೀಮು ನಡೆಸಲು ಸುಲಭವಾಗಿದೆ.ಈ ಎರಡು ಆನೆಗಳು ಸ್ನೇಹಿತರಾಗಿರುವುದರಿಂದ ಯಾವುದೇ ರೀತಿಯ ಗಲಾಟೆ ಸಹ ಮಾಡುತ್ತಿಲ್ಲ ಎಂದು ಅವರು ಹೇಳಿದರು.ಪಶು ವೈದ್ಯ ಡಾ. ಶ್ರೀಧರ್ ಅವರು ಮಾತನಾಡಿ, ತುಮಕೂರು ದಸರಾ ಜಂಬೂಸವಾರಿಗೆ ಎರಡು ಆನೆಗಳನ್ನು ಬಳಸಿಕೊಳ್ಳುತ್ತಿದ್ದು, ಈ ಎರಡು ಆನೆಗಳ ಆರೋಗ್ಯವಾಗಿವೆ. ಯಾವುದೇ ರೀತಿಯ ತೊಂದರೆಯಿಲ್ಲ. ಈ ಆನೆಗಳು ಮೊದಲಿನಿಂದಲೂ ಮಠಗಳಲ್ಲಿ ಹಾಗೂ ಜನರೊಂದಿಗೆ ಬೆರೆತಿರುವುದರಿಂದ ತಾಲೀಮು ಸಲೀಸಾಗಿ ನಡೆದಿದೆ ಎಂದರು. ತಾಲೀಮು ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಮೆರವಣಿಗೆಯಲ್ಲಿ ಏನೆಲ್ಲಾ ಇರಲಿದೆ ಚಿತ್ತಾಕರ್ಷಕ ಜಂಬೂಸವಾರಿ ಮೆರವಣಿಗೆಯಲ್ಲಿ ಕ್ರಮವಾಗಿ ಪೊಲೀಸ್ ಇಲಾಖೆಯ ಅಶ್ವದಳ 10 ಮೀ. ಜಾನಪದ ಕಲಾ ತಂಡಗಳು 20 ಮೀ. ಗತವೈಭವ ಸಾರುವ ಆಕರ್ಷಕ 30 ವಿಂಟೇಜ್ ಕಾರುಗಳು 200ಮೀ. ಪೊಲೀಸ್ ಹಾಗೂ ಎನ್.ಸಿ.ಸಿ ಬ್ಯಾಂಡ್ 20 ಮೀ. 20 ಜೊತೆ ಎತ್ತುಗಳ ರಾಸು 20 ಮೀ. ಅಲಂಕೃತಗೊಂಡ ಟ್ಯಾಕ್ಟರ್‌ನಲ್ಲಿ ಜಿಲ್ಲೆಯ 70 ದೇವರುಗಳು 700 ಮೀ. ನಂತರ ಕಲಾ ತಂಡಗಳ ಸಾಲು 100 ಮೀ. ಹೀಗೆ ಒಟ್ಟು ಜಂಬೂಸವಾರಿ ಮೆರವಣಿಗೆಯ ಉದ್ದ ಸುಮಾರು 1290 ಮೀಟರ್ ಇರಲಿದೆ. ಅಲ್ಲದೆ, ಬಹುಮುಖ್ಯವಾಗಿ ಅಲಂಕಾರಗೊಂಡ ಆನೆಯ ಮೇಲೆ ನಾಡ ದೇವತೆ ಶ್ರೀಚಾಮುಂಡೇಶ್ವರಿ ದೇವಿ ವಿರಾಜಮಾನವಾಗಿ ಸಾಗಲಿದ್ದು, ತುಮಕೂರು ನಗರವು ಇಂತಹ ಸುಂದರ ಭವ್ಯ ಕ್ಷಣಗಳಿಗೆ ಅಂದು ಸಾಕ್ಷಿಯಾಗಲಿದೆ.

ಎಲ್ಲಿಂದ ಎಲ್ಲಿಗೆ ಸಾಗಲಿದೆ ಜಂಬೂಸವಾರಿ

ಮೊದಲ ಬಾರಿಗೆ ನಗರದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಸುತ್ತಿರುವುದರಿಂದ ಜಂಬೂ ಸವಾರಿ ಯಾವ ಮಾರ್ಗದಲ್ಲಿ ಸಾಗಲಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಸಹಜ. ಅ.12ರಂದು ಶನಿವಾರ ಮಧ್ಯಾಹ್ನ 1 ಗಂಟೆಗೆ ನಗರದ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಸೇರಿದಂತೆ ಜಿಲ್ಲೆಯ ಗಣ್ಯರು, ಅಧಿಕಾರಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಆನೆಯ ಅಂಬಾರಿಯ ಮೇಲಿರುವ ಶ್ರೀ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಅಶೋಕ ರಸ್ತೆ ಜಿಲ್ಲಾಧಿಕಾರಿ ಕಚೇರಿ ರಸ್ತೆ, ಅಮಾನಿಕೆರೆ, ಹನುಮಂತಪುರ, ಜಿಲ್ಲಾ ಕ್ರೀಡಾಂಗಣ, ಶಿವಕುಮಾರ ವೃತ್ತ, ಬಿಎಚ್ ರಸ್ತೆ ಮೂಲಕ ಮುಖ್ಯವೇದಿಕೆ ಇರುವ ಶಿಕ್ಷಣ ಭೀಷ್ಮ ಎಚ್. ಎಂ. ಗಂಗಾಧರಯ್ಯ ಮಹಾದ್ವಾರದ ಮೂಲಕ ಸರ್ಕಾರಿ ಪಪೂ ಕಾಲೇಜು ಮೈದಾನಕ್ಕೆ ಆಗಮಿಸಲಿದೆ.