ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆ ಆಯುಕ್ತರ ಹುದ್ದೆ ಖಾಲಿಯಾಗಿ ಎರಡು ತಿಂಗಳಾದರೂ ಇನ್ನೂ ಆ ಹುದ್ದೆಗೆ ನೂತನ ಆಯುಕ್ತರ ಆಗಮನವಾಗಿಲ್ಲ. ಪ್ರಭಾರ ಹುದ್ದೆಯಲ್ಲಿರುವವರಿಗೂ ಹೆಚ್ಚುವರಿ ಕೆಲಸದ ಒತ್ತಡವಿರುವುದರಿಂದ ನಿತ್ಯ ನಗರಸಭೆಗೆ ಬರಲಾಗುತ್ತಿಲ್ಲ. ಆಯುಕ್ತರಿಲ್ಲದೆ ನಗರಸಭೆಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯದಂತಾಗಿದೆ.ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿ ಅವರಿಗೆ ನಗರಸಭೆ ಆಯುಕ್ತರ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಅವರಿಗೂ ಕಾರ್ಯಭಾರದ ಒತ್ತಡವಿರುವುದರಿಂದ ವಾರದಲ್ಲಿ ಒಮ್ಮೆಯೋ ಎರಡು ಬಾರಿಯೋ ಬಂದು ಹೋದರೆ ಅದೇ ಹೆಚ್ಚು. ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆ, ಪ್ರಮುಖ ಪ್ರಕರಣಗಳಲ್ಲಿ ತೀರ್ಮಾನಗಳನ್ನು ಕೈಗೊಳ್ಳುವುದು, ಕಚೇರಿಯ ಬಹುಮುಖ್ಯ ಕಡತಗಳನ್ನು ಓದಿ ಅರ್ಥೈಸಿಕೊಂಡು ಸಹಿ ಹಾಕುವುದು, ಕಚೇರಿಯ ಕೆಲಸ-ಕಾರ್ಯಗಳು ಸುಗಮವಾಗಿ ನಡೆಯಲು, ಆಸ್ತಿ ದಾಖಲೆಗಳ ವಿಚಾರವಾಗಿ ಜನರಿಗಿರುವ ಸಮಸ್ಯೆಗಳು, ಗೊಂದಲಗಳಿಗೆ ಪರಿಹಾರ ಸೂಚಿಸಲು ಹಾಗೂ ಸಾರ್ವಜನಿಕ ಕೆಲಸಗಳಿಗೆ ಸಂಬಂಧಿಸಿದಂತೆ ನೌಕರರು-ಸಿಬ್ಬಂದಿಗೆ ಮ ಮಾರ್ಗದರ್ಶನ ಮಾಡಲು ಆಯುಕ್ತರಿಲ್ಲದೆ ಎಲ್ಲವೂ ಅಸ್ತವ್ಯಸ್ತಗೊಂಡಿದೆ.
ಕೆಲಸದಲ್ಲಿ ಆಸಕ್ತಿ ಇಲ್ಲ:ಆಯುಕ್ತರಿಲ್ಲದಿರುವುದರಿಂದ ಕಚೇರಿ ಸಿಬ್ಬಂದಿಯೂ ಕೆಲಸದಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಸಾರ್ವಜನಿಕರು ಆಸ್ತಿ, ಖಾತೆ, ದಾಖಲೆಗಳಲ್ಲಿರುವ ವ್ಯತ್ಯಾಸಗಳು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಆಯುಕ್ತರನ್ನು ಹುಡುಕಿಕೊಂಡು ನಿತ್ಯವೂ ಕಚೇರಿಗೆ ಎಡತಾಕುತ್ತಿದ್ದರೂ ಆಯುಕ್ತರ ಕಚೇರಿ ಬಾಗಿಲು ಸದಾ ಮುಚ್ಚಿರುವುದನ್ನು ಕಂಡು ನಿರಾಸೆಯಿಂದ ವಾಪಸಾಗುತ್ತಿದ್ದಾರೆ.
ಹೆಚ್ಚುವರಿ ಕಾರ್ಯಭಾರ ಹೊತ್ತಿರುವ ಆಯುಕ್ತರು ಕಚೇರಿಯ ಸಣ್ಣ ಪುಟ್ಟ ಸಮಸ್ಯೆಗಳಿಗೆ ಸಂಬಂಧಿಸಿದ ಕಡತಗಳಿಗೆ ಸಹಿ ಹಾಕಿ ಹೋಗುತ್ತಾರೆ. ಆದರೆ, ಸದಾ ಕಾಲ ಕಚೇರಿಯಲ್ಲಿದ್ದು ಕಚೇರಿ ಸಿಬ್ಬಂದಿಯ ಕೆಲಸ-ಕಾರ್ಯಗಳ ಮೇಲೆ ನಿಗಾ ವಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡ ಆದಷ್ಟು ಬೇಗ ಆಯುಕ್ತರನ್ನು ನೇಮಿಸದೆ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದರಿಂದ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.ಕಚೇರಿ ಅಲೆಯುವುದು ಸಾಮಾನ್ಯ:
ಆಯುಕ್ತರು ನಗರಸಭೆಯಲ್ಲಿ ಇರಲಿ, ಇಲ್ಲದಿರಲಿ ಸಾಮಾನ್ಯ ಜನರು ವಿವಿಧ ಕೆಲಸಗಳಿಗಾಗಿ ಕಚೇರಿಗೆ ಅಲೆಯುವುದು ಮಾತ್ರ ತಪ್ಪಿಲ್ಲ. ಕಚೇರಿಯ ನೌಕರರು, ಸಿಬ್ಬಂದಿ ಕಡತಗಳನ್ನು ವಿಲೇವಾರಿ ಮಾಡುವುದಕ್ಕೆ ವಿಳಂಬ ಮಾಡಿದರೆ, ವಿನಾಕಾರಣ ಅಲೆಸಿದರೆ ಅವರ ಬಗ್ಗೆ ದೂರು ನೀಡಲು ಆಯುಕ್ತರಾದರೂ ಇರುತ್ತಿದ್ದರು. ಈಗ ಅವರೂ ಇಲ್ಲದೆ ಸಾರ್ವಜನಿಕರು ತಮ್ಮ ದೂರನ್ನು ಯಾರ ಬಳಿ ಹೇಳಿಕೊಳ್ಳುವುದು ಎಂಬ ಪ್ರಶ್ನೆ ಕಾಡುತ್ತಿದೆ.ಕಚೇರಿ ಅಧಿಕಾರಿಗಳು, ನೌಕರರು, ಸಿಬ್ಬಂದಿ ಕೂಡ ಜನರಿಗೆ ಆಯುಕ್ತರಿಲ್ಲದಿರುವ ನೆಪ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಆಸ್ತಿ ತೆರಿಗೆ ಪಾವತಿ ಸಂಬಂಧ ನಮೂನೆ-೩ ಪಡೆದುಕೊಳ್ಳಲು ಬರುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆಯುಕ್ತರಿಲ್ಲದೆ ಕಡತ ಮುಂದೆ ಸಾಗದಂತಾಆಗಿದೆ.
ನಿಯಮಬಾಹೀರ ನೇಮಕ ತಿರಸ್ಕೃತ:ಆಯುಕ್ತರಾಗಿದ್ದ ಆರ್.ಮಂಜುನಾಥ್ ವರ್ಗಾವಣೆಯಾದ ನಂತರದಲ್ಲಿ ಚನ್ನಪಟ್ಟಣದಲ್ಲಿ ಸಮುದಾಯ ಸಂಘಟನಾ ಅಧಿಕಾರಿಯಾಗಿದ್ದವರೊಬ್ಬರು ಮಂಡ್ಯದ ಆಯುಕ್ತರ ಹುದ್ದೆಗೆ ನೇಮಕಗೊಳ್ಳಲು ಮುಂದಾಗಿದ್ದರು. ಆದರೆ, ಆ ಶಿಫಾರಸನ್ನು ಜಿಲ್ಲಾಧಿಕಾರಿ ಡಾ.ಕುಮಾರ ತಳ್ಳಿಹಾಕಿದ್ದರು. ನಿಯಮಾನುಸಾರ ಸಮುದಾಯ ಸಂಘಟನಾಧಿಕಾರಿಯನ್ನು ಆಯುಕ್ತರ ಹುದ್ದೆಗೆ ನೇಮಿಸುವುದಕ್ಕೆ ನಿಯಮಗಳಲ್ಲಿ ಅವಕಾಶವಿರದಿದ್ದರಿಂದ ಅದನ್ನು ಜಿಲ್ಲಾಧಿಕಾರಿ ತಿರಸ್ಕರಿಸಿದ್ದರು.
ನಗರಸಭೆಯಲ್ಲಿ ಸಿಬ್ಬಂದಿ ಕೊರತೆನಗರಸಭೆಯಲ್ಲಿ ಆಯುಕ್ತರಿಲ್ಲದಿರುವ ಕೊರತೆಯ ನಡುವೆ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ೩ ಮಂದಿ ಕಿರಿಯ ಅಭಿಯಂತರರಿರುವ ಕಡೆ ೧ ಹುದ್ದೆ ಭರ್ತಿ ಇದ್ದು, ೨ ಖಾಲಿ ಇದೆ. ೪ ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲಿ
೩ ಮಂದಿ ಕಾರ್ಯನಿರ್ವಹಿಸುತ್ತಿದ್ದು, ೧ ಖಾಲಿ ಇದೆ. ಸಮುದಾಯ ಸಂಘಟನಾ ಅಧಿಕಾರಿ ಒಂದೇ ಒಂದು ಹುದ್ದೆ ಇದ್ದು ಅದೂ ಖಾಲಿ ಉಳಿದಿದೆ. ೩ ಹಿರಿಯ ಆರೋಗ್ಯ ನಿರೀಕ್ಷಕ ಹುದ್ದೆಗಳಲ್ಲಿ ೨ ಭರ್ತಿ ಇದ್ದು, ೧ ಖಾಲಿ ಉಳಿದಿದೆ.೩ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರ ಹುದ್ದೆಯಲ್ಲಿ ೨ ಹುದ್ದೆ ಭರ್ತಿ ಇದ್ದು, ೧ ಹುದ್ದೆ ಖಾಲಿ ಇದೆ. ೩ ಕಿರಿಯ ಆರೋಗ್ಯ ನಿರೀಕ್ಷಕ ಹುದ್ದೆಗಳಲ್ಲಿ ೨ ಹುದ್ದೆ ಖಾಲಿ ಇದ್ದು, ೧ ಹುದ್ದೆ ಭರ್ತಿಯಾಗಿದೆ. ಎಲೆಕ್ಟ್ರೀಷಿಯನ್ ದರ್ಜೆ ಒಂದು ಹುದ್ದೆ ಇದ್ದು ಅದೂ ಖಾಲಿ ಉಳಿದಿದೆ. ೩ ಸಮುದಾಯ ಸಂಘಟಕರ ಹುದ್ದೆಗಳಲ್ಲಿ ೨ ಖಾಲಿ ಉಳಿದಿದ್ದು, ೧ ಹುದ್ದೆ ಭರ್ತಿ ಇದೆ. ೧೪ ದ್ವಿತೀಯರ್ಜೆ ಸಹಾಯಕ ಹುದ್ದೆಗಳಲ್ಲಿ ೯ ಹುದ್ದೆಗಳು ಭರ್ತಿ ಇದ್ದರೆ ೫ ಹುದ್ದೆಗಳು ಖಾಲಿ ಬಿದ್ದಿವೆ. ಕರ ವಸೂಲಿಗಾರರು ೯ ಹುದ್ದೆಗಳಿದ್ದು, ಪ್ರಸ್ತುತ ೪ ಮಂದಿ ಕಾರ್ಯನಿರ್ವಹಿಸುತ್ತಿದ್ದು, ೫ ಹುದ್ದೆಗಳು ಖಾಲಿ ಉಳಿದಿವೆ.ರಾಜಕೀಯ ದ್ವೇಷದಿಂದ ವಿಳಂಬ
ನಗರಸಭೆ ಅಧಿಕಾರ ಕಾಂಗ್ರೆಸ್ ಕೈ ಜಾರಿತೆಂಬ ಕಾರಣಕ್ಕೆ ನಗರಸಭೆ ಆಯುಕ್ತರ ಹುದ್ದೆಯನ್ನು ಖಾಲಿ ಉಳಿಸಲಾಗಿದೆಯೇ ಎಂಬ ಬಗ್ಗೆ ಚರ್ಚೆಗಳು, ಆರೋಪಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಪಾಲಾಗುತ್ತಿದ್ದ ನಗರಸಭೆ ಅಧಿಕಾರ ಎಚ್.ಡಿ. ಕುಮಾರಸ್ವಾಮಿ ಆಗಮನದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಬಣದ ಪಾಲಾಗಿದ್ದರಿಂದ ನಿರಾಸೆಗೊಳಗಾದ ಕಾಂಗ್ರೆಸ್ ಸರ್ಕಾರ ನಗರಸಭೆಗೆ ಆಯುಕ್ತರನ್ನು ನೇಮಕ ಮಾಡದೆ ಸೇಡು ತೀರಿಸಿಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಶಾಸಕ ಪಿ.ರವಿಕುಮಾರ್ ಅವರು ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ನಗರಸಭೆ ಕೆಲಸ-ಕಾರ್ಯಗಳು ಸುಗಮವಾಗಿ ನಡೆಯುವಂತೆ ಮಾಡುವುದಕ್ಕೆ ಕೂಡಲೇ ಆಯುಕ್ತರನ್ನು ಕ್ರಮ ವಹಿಸುವಂತೆ ನಗರದ ಜನರು ಒತ್ತಾಯಿಸಿದ್ದಾರೆ.