ಹಗರಿಬೊಮ್ಮನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಗುಣಮಟ್ಟದ ಶಿಕ್ಷಣ ಪಡೆಯಲು ಅವಕಾಶಗಳಿವೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಶಾಲೆಗಳ ಆಸ್ತಿತ್ವ ಉಳಿಸಲು ಮುಂದಾಗಬೇಕು ಎಂದು ಶಾಸಕ ನೇಮರಾಜ್ ನಾಯ್ಕ ಒತ್ತಾಯಿಸಿದರು.ತಾಲೂಕಿನ ಚಿಲಗೋಡು ಗ್ರಾಮದಲ್ಲಿ ಆರ್.ಎಂ.ಎಸ್.ಎ. ಯೋಜನೆಯಡಿ ₹೧.೬೧ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಪ್ರೌಢಶಾಲಾ ಕಟ್ಟಡವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಈಗಾಗಲೇ ಸಾಕಷ್ಟು ಅನುದಾನ ಒದಗಿಸಿ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಜೊತೆಗೆ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಸಹಕರಿಸಬೇಕು. ಶಿಕ್ಷಣವೇ ಶಕ್ತಿ ಎಂಬ ಡಾ.ಅಂಬೇಡ್ಕರ್ ಅವರ ಘೊಷಣೆ ಶಿಕ್ಷಣದ ಮೂಲಕ ದೇಶದ ಅಭಿವೃದ್ಧಿ ಆಗಬೇಕು ಎಂಬ ಆಶಯಗಳಿಗೆ ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು.ಮುಂದಿನ ಎರಡು ವರ್ಷದಲ್ಲಿ ಕೆ.ಕೆ.ಆರ್.ಡಿ.ಬಿ. ಹಾಗೂ ಡಿ.ಎಂ.ಎಫ್. ಅನುದಾನಗಳ ಮೂಲಕ ಕ್ಷೇತ್ರದ ಬಹುತೇಕ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಕುಡಿಯುವ ನೀರು ಸಹಿತ ಮೂಲ ಸೌಕರ್ಯಗಳನ್ನು ಒದಗಿಸುವುದು, ಆವರಣ ಗೋಡೆ, ಕ್ರೀಡಾಂಗಣ, ಶೌಚಾಲಯ ಸಹಿತ ನೂತನ ಕೊಠಡಿಗಳ ನಿರ್ಮಾಣಕ್ಕೆ ಒತ್ತು ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮದ ಐತಿಹಾಸಿಕ ಕರಿಯಮ್ಮ ದೇಗುಲದ ಗೋಪುರ ನಿರ್ಮಾಣ ಸಹಿತ ಗ್ರಾಮದ ಮುಖ್ಯರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಮಾರ್ಪಡಿಸುವ ಕಾಮಗಾರಿಯನ್ನು ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದರು.ಇದಕ್ಕೂ ಮುನ್ನ ಸಮೀಪದ ಸೀಗೇನಹಳ್ಳಿ-೩ ಗ್ರಾಮದಲ್ಲಿ ಮುಖ್ಯಮಂತ್ರಿ ಮೂಲ ಸೌಕರ್ಯ ಯೋಜನೆಯ ₹೧ ಕೋಟಿ ಅನುದಾನದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ್, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಸಿ.ಎಚ್.ಸಿದ್ಧರಾಜು, ಶಾಲೆಯ ಮುಖ್ಯಗುರು ಲಲಿತಮ್ಮ, ಪಿಡಬ್ಲುಡಿ ಎಇಇ ಸತೀಶ್ ನಾಯ್ಕ, ಅಕ್ಷರ ದಾಸೋಹದ ರಾಜಕುಮಾರ್ ನಾಯ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕರಿಯಪ್ಪ, ಗುತ್ತಿಗೆದಾರ ಎಚ್.ಉಮಾಪತಿ ಹಾಗೂ ಗ್ರಾಮದ ಮುಖಂಡರು ಮತ್ತು ಶಾಲಾ ಸಿಬ್ಬಂದಿ ಇದ್ದರು.