ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸರ್ಕಾರದಿಂದ ಸಿಗುವ ಸೌಲಭ್ಯಗಳು ದುರುಪಯೋಗವಾಗದೆ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳಿ ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಪಂ ಆವರಣದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗದವರಿಗೆ ಕೊಳವೆ ಬಾವಿಗಳ ಮೋಟಾರು ಹಾಗೂ ಪೈಪುಗಳ ವಿತರಿಸಿ ಮಾತನಾಡಿ, ಕಳೆದ ಮೂರು ವರ್ಷಗಿಂದ ಯಾವುದೇ ಸಮಾಜಕ್ಕೆ ಅನ್ಯಾಯವಾಗದಂತೆ ಹಲವು ಗ್ಯಾರಂಟಿ ಯೋಜನೆಗಳ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ, ಹಾಲಿ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬಡ ಜನರು ಹಾಗೂ ರೈತಾಪಿ ಜನರಿಗೆ ಸರ್ಕಾರದ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಇದೀಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ 25ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸರ್ಕಾರದ ಸಣ್ಣ ನೀರಾವರಿ ಇಲಾಖೆಯಿಂದ ಕೊಳವೆ ಬಾವಿಗಳ ತೆರೆಸಿ ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ನಂತರ ಕೊಳವೆ ಬಾವಿಗಳಿಗೆ ಮೋಟಾರು ಅಳವಡಿಸಿ ಪೈಪುಗಳ ಸೇರಿದಂತೆ ಇತರೆ ಪರಿಕರಗಳನ್ನು ವಿತರಿಸಲಾಗುತ್ತಿದೆ. ಇದನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಈಗಾಗಲೇ ನೂರಾರು ಮಂದಿಗೆ ಇಂತಹ ಸೌಲಭ್ಯ ನೀಡಲಾಗಿದೆ. ಮುಂದೆ ಇನ್ನಷ್ಟು ಅನುದಾನಗಳು ಬರಲಿವೆ. ಅವುಗಳನ್ನು ಇನ್ನಷ್ಟು ಫಲಾನುಭವಿಗಳನ್ನು ಗುರುತಿಸಿ ಸರ್ಕಾರದಿಂದಲೆ ವಿತರಿಸಲಾಗುತ್ತದೆ ಎಂದರು.


ಈ ವೇಳೆ ತಾಪಂ ಎಒ ಚಂದ್ರು, ತಾಪಂ ನೋಡಲ್ ಅಧಿಕಾರಿ ತ್ರಿವೇಣಿ, ಕಾಳೇನಹಳ್ಳಿ ಮಂಜು, ಪೀಕಾರ್ಡ್ ಮಾಜಿ ಅಧ್ಯಕ್ಷ ದರಸಗುಪ್ಪೆ ಪ್ರಾಣೇಶ್, ಸೋಮಸುಂದರ್ ಸೇರಿದಂತೆ ಇತರ ಅಧಿಕಾರಿ ವರ್ಗ ಉಪಸ್ಥಿತರಿದ್ದರು.

ಇಂದು ಭೂಮಿತಾಯಿ ಹೋರಾಟ ಸಮಿತಿ ನೀರಾವರಿ ಕಚೇರಿ ಮುತ್ತಿಗೆ

ಶ್ರೀರಂಗಪಟ್ಟಣ:ರೈತರ ಎಲ್ಲಾ ಬೆಳೆಗಳು ಒಣಗುತ್ತಿದ್ದರೂ ರಾಜ್ಯ ಸರ್ಕಾರ, ಜಿಲ್ಲೆಯ ಶಾಸಕರು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನೀರು ಹರಿಸದೆ ಮೌನ ವಹಿಸಿರುವ ವಿರುದ್ಧ ಜು.3ರಂದು ಭೂಮಿತಾಯಿ ಹೋರಾಟ ಸಮಿತಿ ಆರ್‌ಎಸ್ ನೀರಾವರಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.

ಬೆಳಗ್ಗೆ 11 ಗಂಟೆಗೆ ರೈತಪರ ಹಿರಿಯ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ, ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ ನೇತೃತ್ವದಲ್ಲಿ ನೀರಾವರಿ ನಿಗಮದ ಕಚೇರಿ ಮುತ್ತಿಗೆ ಹಾಕಿ, ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ಎಲ್ಲಾ ಬೆಳೆಗಳು ಒಣಗುತ್ತಿದ್ದರೂ ರಾಜ್ಯ ಸರ್ಕಾರವಾಗಲಿ, ಜಿಲ್ಲೆಯ ಶಾಸಕರು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನೀರು ಬಿಡಿಸದೆ ಮೌನ ವಹಿಸಿದ್ದಾರೆ. ಇವರ ವಿರುದ್ಧ ಪ್ರತಿಭಟನೆ ನಡೆಸಿ ತಕ್ಷಣ ಎಲ್ಲಾ ನಾಳೆಗಳಿಗೆ ನೀರು ಬಿಡುವಂತೆ ಒತ್ತಾಯಿಸಲಾಗುವುದು. ಹಾಗಾಗಿ ಸಮಿತಿ ಪದಾಧಿಕಾರಿಗಳು, ರೈತರು, ಸಾರ್ವಜನಿಕರು ಭಾಗವಹಿಸುವಂತೆ ಪ್ರಕಟಣೆ ಮೂಲಕ ಅಧ್ಯಕ್ಷ ಬಿ.ಸಿ ಕೃಷ್ಣೇಗೌಡರ ಕೋರಿದ್ದಾರೆ.