ಮಳವಳ್ಳಿ ತಾಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಳವಾಗಿದೆ ಎಂದು ಆರೋಪಿಸಿ ಮಳವಳ್ಳಿ ಚಲೋ ಹಮ್ಮಿಕೊಂಡಿದ್ದ ಕೆಆರ್‌ಎಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ವಾಗ್ವಾದ ನಡೆದ ಘಟನೆ ಪಟ್ಟಣದಲ್ಲಿ ಜರುಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಳವಾಗಿದೆ ಎಂದು ಆರೋಪಿಸಿ ಮಳವಳ್ಳಿ ಚಲೋ ಹಮ್ಮಿಕೊಂಡಿದ್ದ ಕೆಆರ್‌ಎಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ವಾಗ್ವಾದ ನಡೆದ ಘಟನೆ ಪಟ್ಟಣದಲ್ಲಿ ಜರುಗಿದೆ.ಕೆಆರ್‌ಎಸ್ ಪಕ್ಷದಿಂದ ರಾಜ್ಯ ಘಟಕದ ಅಧ್ಯಕ್ಷ ಸಿ.ಎನ್.ದೀಪಕ್, ಕಾರ್ಯಾಧ್ಯಕ್ಷ ರಘು ಜಾಣಗೆರೆ, ಕಾರ್ಯದರ್ಶಿ ರಮೇಶ್ ಗೌಡ, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಜಿಲ್ಲಾ ಅಧ್ಯಕ್ಷ ಮಲ್ಲೇಶ್ ಸೇರಿದಂತೆ ಹಲವರ ನೇತೃತ್ವದಲ್ಲಿ ಕಾರ್ಯಕರ್ತರು ಸಾರಿಗೆ ಬಸ್ ನಿಲ್ದಾಣದಿಂದ ಚಲೋ ಆರಂಭಿಸಿ ತಾಲೂಕು ಪಂಚಾಯ್ತಿ ಬಳಿ ಆಗಮಿಸುತ್ತಿದ್ದಂತೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರನ್ನು ಗೇಟ್ ಬಳಿಯೇ ಪೊಲೀಸರು ತಡೆದರು.
ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡರು ಬ್ಯಾನರ್ ಹಾಗೂ ಪೋಸ್ಟರ್‌ಗಳಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಭಾವಚಿತ್ರವನ್ನು ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆದು ತಳ್ಳಾಟ, ನೂಕಾಟ ನಡೆದು ದೊಡ್ಡ ಹೈಡ್ರಾಮ ಸೃಷ್ಟಿಯಾಯಿತು.ರಾಜ್ಯ ಘಟಕದ ಅಧ್ಯಕ್ಷ ಸಿ.ಎನ್.ದೀಪಕ್ ಮಾತನಾಡಿ, ನಾವು ಶಾಂತಯುತವಾಗಿ ಹೋರಾಟ ಮಾಡಲು ಮುಂದಾಗಿದ್ದವು. ಆದರೆ, ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಮೇಲೆ ದೌರ್ಜನ್ಯ ನಡೆಸಿ ನಮ್ಮ ಪ್ರತಿಭಟನೆ ಹತ್ತಿಕ್ಕಲು ಮುಂದಾಗಿದ್ದಾರೆ. ಇಂಥ ಬೆದರಿಕೆ ಹೆದರುವುದಿಲ್ಲ, ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಕಿಡಿ ಕಾರಿದರು.
ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್ ಮಾತನಾಡಿ, ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅರಿವಿಲ್ಲದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಅನಗತ್ಯವಾಗಿ ಕೆಲ ಸರ್ಕಾರಿ ಕಚೇರಿಗಳಿಗೆ ಹೋಗಿ ವಿಡಿಯೋ ಮಾಡುತ್ತಾ ಅಧಿಕಾರಿಗಳನ್ನು ತೇಜೋವಧೆ ಮಾಡುತ್ತಿರುವುದು ಸರಿಯಲ್ಲ. ಹೊರಗಿನವರು ಇಲ್ಲಿಗೆ ಬಂದ ನಮ್ಮನ್ನು ಪ್ರಶ್ನೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಮುಟ್ಟನಹಳ್ಳಿ ಅಂಬರೀಶ್ ಮಾತನಾಡಿ, ಕೆಆರ್‌ಎಸ್ ಪಕ್ಷದ ಹೋರಾಟದ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ, ಅನಗತ್ಯವಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ತೇಜೋವಧೆ ಮಾಡುವುದು ಸರಿಯಲ್ಲ, ಅಲ್ಲದೇ, ಇಲ್ಲಿ ಬಂದಿರುವವರು ಬಹುತೇಕ ಮಂದಿ ಹೊರಗಡೆಯವರು ಎಂದು ಕಿಡಿಕಾರಿದರು.
ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು ಮಾತನಾಡಿ, ಅಧಿಕಾರಿಗಳು ತಪ್ಪು ಮಾಡಿದರೆ ಮೇಲಾಧಿಕಾರಿಗಳಿಗೆ ದೂರು ನೀಡಲಿ ಅದನ್ನು ಬಿಟ್ಟು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುವುದು ಸರಿಯಲ್ಲ. ಮಹಿಳಾ ಅಧಿಕಾರಿಗಳ ಬಗ್ಗೆಯೂ ಅರಿವಿಲ್ಲದ ಇವರ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೆಆರ್‌ಎಸ್ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಇದೇ ವೇಳೆ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ್, ಟಿಎಪಿಸಿಎಂಎಸ್ ನಿರ್ದೇಶಕರಾದ ಮಲ್ಲಯ್ಯ, ದಿಲೀಪ್ ಕುಮಾರ್, ಮನು, ಮುಖಂಡರಾದ ಪಿ.ಮಾದೇಶ, ಬಂಕ್ ಮಹದೇವು, ಸಂತೋಷ್ ಕುಮಾರ್, ಆನಂದ್ ಕುಮಾರ್, ಎಚ್.ಎಂ.ಮಹೇಶ್, ಮಂಜು, ಚೇತನ್ ನಾಯಕ್, ಚಿಕ್ಕಸ್ವಾಮಿ ಪಾಲ್ಗೊಂಡಿದ್ದರು.