ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸರ್ಕಾರಿ ಶಾಲೆ, ಕಾಲೇಜು ಉಳಿದರೆ ಮಾತ್ರ ಭವಿಷ್ಯದ ಕಾಲ ಸುಂದರವಾಗಲಿದೆ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಪಂದನಾ ಫೌಂಡೇಷನ್, ಎನ್‌ಎಸ್‌ಎಸ್ ಘಟಕ ಹಮ್ಮಿಕೊಂಡಿದ್ದ ಮರೆಯಲಾರದ ಮಹನೀಯರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ, ಆರೋಗ್ಯ, ಆಸ್ಪತ್ರೆ ಖಾಸಗೀಕರಣವಾದರೆ ವ್ಯಾಪಾರೀಕರಣದ ಬರೆಯಿಂದ ಬಡವರ ಬದುಕಿಗೆ ಹೊರೆಯಾಗಲಿದೆ. ಮಕ್ಕಳ ಮನದಲ್ಲಿ ತನ್ನ ಪರಿಸರ, ಇತಿಹಾಸದ ಕುರುಹು, ತಂದೆ, ತಾಯಿ, ಗುರುಗಳನ್ನು ಗೌರವಿಸಿ, ಪೂಜಿಸಿ, ಸತ್ಕಾರಗೊಳಿಸುವ ಸಂಸ್ಕಾರ ಕಲಿಸುವ ಪಾಠ ಮೊದಲು ಆಗಬೇಕಿದೆ ಎಂದರು.ಸಂಸ್ಕಾರ ಶಿಕ್ಷಣ ಬಲುಮುಖ್ಯ. ಜನ್ಮ ನೀಡಿದ ತಂದೆ, ತಾಯಿ, ಗುರುಗಳೇ ನಿಜವಾದ ಮರೆಯಲಾರದ ಮಹನೀಯರು. ಸಂಧ್ಯಾಕಾಲದಲ್ಲಿರುವ ಹಿರಿಯ ಜೀವಿಗಳಿಗೆ ನೋವು ನೀಡದೆ ಆಸರೆಯಾಗಬೇಕು. ಇದು ನನ್ನೂರು. ಅಕ್ಕರೆ ಪ್ರೀತಿಇಲ್ಲಿದೆ. ಈ ಪಿಯು ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹಿಸಲು ಸದಾ ಬದ್ಧನಿರುವೆ. ಇಲ್ಲಿನ ಮಕ್ಕಳಿಗೆ ಸುಗಮ ಸಂಗೀತ ತರಬೇತಿ ನೀಡಿ ಸುಂದರ ಕಾರ್ಯಕ್ರಮ ರೂಪಿಸುವ ಬಯಕೆ ತನಗಿದೆ ಎಂದು ನುಡಿದರು.
ಅಮೀಬಾ ಗ್ರೂಪ್ಸ್ ಸಿಇಒ ಸುರೇಶ್ ಮಾತನಾಡಿ, ಸರ್ಕಾರಿ ಶಾಲೆ, ಕಾಲೇಜು ಮುಚ್ಚಿದರೆ ಮುಂದಿನ ಪೀಳಿಗೆ ಭವಿಷ್ಯದ ಮಕ್ಕಳ ಶಾಪ ತಟ್ಟಲಿದೆ ಎಂದು ಎಚ್ಚರಿಸಿದರು. ಬೆಂಗಳೂರಿನ ರೋಟರಿ ಗಂಧದಗುಡಿ ಸಂಸ್ಥೆ ನಿರ್ದೇಶಕ ವಿಜಯರಾಜ್ ಮಾತನಾಡಿ, ಖಾಸಗಿ ಶಾಲೆ ವ್ಯಾಮೋಹ ಬಿಡಿ. ಭವಿಷ್ಯದ ಮಕ್ಕಳಿಗೆ ಬೆನ್ನೆಲುಬಾಗಿ ನಿಲ್ಲಲು ತಾವು ಬದ್ಧರಿರುವುದಾಗಿ ಆತ್ಮವಿಶ್ವಾಸ ತುಂಬಿದರು.
ಗಾಯಕ ಕಿಕ್ಕೇರಿ ವಿವಿಧ ಗೀತೆಗಳನ್ನು ಹಾಡಿ ಮಕ್ಕಳೊಂದಿಗೆ ಹಾಡಿಸಿ ಕನ್ನಡ ಪ್ರೇಮವನ್ನು ಭಾವಾಂಕುರಗೊಳಿಸಿದರು.
ಬೃಹತ್ ಇನ್ ಫೋಕಾಂ ಸಿಇಒ ಅಚ್ಯುತ್, ಬೆಂಗಳೂರಿನ ರೋಟರಿ ಗಂಧದಗುಡಿ ಸಂಸ್ಥೆ ನಿರ್ದೇಶಕರಾದ ಅರುಣ್, ಸಂದೀಪ್, ಕಿಶೋರ್, ಪರಿಸರ ಪ್ರೇಮಿ ವೆಂಕಟೇಶ್, ಕೆ.ವಿ.ಬಲರಾಮು, ಉಪನ್ಯಾಸಕರಾದ ಜಿ.ಎಸ್.ಕುಮಾರಸ್ವಾಮಿ, ಎನ್. ರವೀಂದ್ರ, ಎಂ.ವಿನಾಯಕ, ಅರ್ಪಿತಾ, ಸಹನಾ, ಲಾವಣ್ಯ ಇದ್ದರು.