ಕನ್ನಡಪ್ರಭ ವಾರ್ತೆ ಯಾದಗಿರಿ
ನನ್ನ ಮತಕ್ಷೇತ್ರದಲ್ಲಿ ಕೈಗೊಳ್ಳುವ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳು ಸರ್ಕಾರ ನಿಗಧಿಪಡಿಸಿದ ಅವಧಿಯೊಳಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದಿಂದ ಕಾಮಗಾರಿ ಕೈಗೊಳ್ಳಬೇಕೆಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.ನಗರದ ನಗರಸಭೆ ಹಿಂಭಾಗದಲ್ಲಿ ಹಮ್ಮಿಕೊಂಡಿದ್ದ ೨೦೨೫-೨೬ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಸಾಮಾನ್ಯ ಯೋಜನೆಯಡಿಯಲ್ಲಿ ಲೊಕೋಪಯೊಗಿ ಇಲಾಖೆಯಿಂದ ನಗರದ ನಗರಸಭೆ ಹಿಂದುಗಡೆಯಿಂದ ಡಾನ್‌ಬಾಸ್ಕೋ ಶಾಲೆಯವರೆಗೆ ೧.೨೦ ಕೋಟಿ ರು. ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಾನು ಶಾಸಕನಾಗಿ ಆಯ್ಕೆಯಾಗಿ ೩ ವರ್ಷಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಹಲವಾರು ಕಾಮಗಾರಿಗಳ ಅನುಷ್ಟಾನಕ್ಕೆ ಜನರು ನಿರಂತರ ಒತ್ತಾಯ ಮಾಡುತ್ತಿದ್ದಾರೆ, ಅದರಲ್ಲಿ ಈ ರಸ್ತೆಯೂ ಒಂದು, ಹಿರೇ ಅಗಸಿ, ವಾಲ್ಮೀಕಿನಗರ ಇತರ ವಾರ್ಡ್‌ಗಳ ಜನರು ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಹತ್ತಿರವಾಗುವ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ, ಇದರಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲು ಅನುಕೂಲವಾಗುತ್ತದೆ, ಈ ಹಿಂದೆ ಹಲವಾರು ದಶಕಗಳಿಂದ ಹಳ್ಳಿಗಳ ಜನರು ನಗರಕ್ಕೆ ಇದೇ ರಸ್ತೆಯ ಮೂಲಕ ನಡೆದುಕೊಂಡು ತಮ್ಮ ದೈನಂದಿನ ಕೆಲಸಗಳು ಹಾಗೂ ತರಕಾರಿ ವ್ಯಾಪಾರ ಮಾಡಲು ಬರುತ್ತಿದ್ದರು, ಬರುವ ದಿನಗಳಲ್ಲಿ ಎಲ್ಲರಿಗೂ ಶಾಶ್ವತವಾಗಿ ಅನುಕೂಲವಾಗಲಿದೆ ಎಂದು ತಿಳಿಸಿದರು.ಕಳೆದ ೩ ವರ್ಷಗಳಲ್ಲಿ ನಾನು ಸದಾ ಜನರೊಂದಿಗೆ ಬೆರೆಯುವ ಮೂಲಕ ಅವರ ಸಮಸ್ಯೆಗಳನ್ನು ಆದಷ್ಟು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ, ಸರ್ಕಾರ ಈಗಾಗಲೇ ಪಂಚ ಗ್ಯಾರಂಟಿಗಳ ಯೋಜನೆಗಳ ಲಾಭ ನೇರವಾಗಿ ಜನರಿಗೆ ತಲುಪುತ್ತಿದೆ, ನಾನು ಕೂಡ ಹಲವಾರು ಪ್ರಮುಖ ಕಾಮಗಾರಿಗಳ ಅನುಷ್ಟಾನಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ತರುವ ಮೂಲಕ ಬದಲಾಣೆಗೆ ಆದ್ಯತೆ ನೀಡಿದ್ದೇನೆ ಎಂದು ಹೇಳಿದರು.
ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಅಧಿಕಾರಿಗಳು ಇನ್ನೂ ೬೦ ಲಕ್ಷಕ್ಕೂ ಹೆಚ್ಚು ಅನುದಾನ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ, ಬರುವ ದಿನಗಳಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ, ಪೂರ್ಣಗೊಳಿಸಲಾಗುವುದು ಎಂದರು.
ಕರವೇ ಜಿಲ್ಲಾಧ್ಯಕ್ಷ ಟಿ.ಎನ್ ಭೀಮುನಾಯಕ ಮಾತನಾಡಿ, ಶಾಸಕರು ಸರಳವಾಗಿದ್ದಾರೆ, ಈ ಕಾಮಗಾರಿ ಬಗ್ಗೆ ನಾವೇಲ್ಲರೂ ಶಾಸಕರ ಬಳಿ ಚರ್ಚೆ ಮಾಡಿದ ಕೂಡಲೇ ಅಧಿಕಾರಿಗಳ ಜೊತೆ ಚರ್ಚಿಸಿ, ಕಾಮಗಾರಿ ಕೈಗೊಳ್ಳಲು ಅನುದಾನ ನೀಡಿರುವುದರಿಂದ ಬರುವ ದಿನಗಳಲ್ಲಿ ಎಲ್ಲರಿಗೂ ಸಹಾಯಕವಾಗಲಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಪರಶುರಾಮ ಮಾತನಾಡಿ, ಕಾಮಗಾರಿ ವಿವರ ಮಾಹಿತಿ ನೀಡಿದರು.ವೇದಿಕೆ ಮೇಲೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ, ಸಲೀಂ ಹುಂಡೆಕರ್, ಸಹಾಯಕ ಇಂಜಿನೀಯರ್ ಹಣಮಂತ್, ಶಿವು ಪೂಜಾರಿ, ಸಾಯಿಬಣ್ಣ ಬಾಡಿಯಾಳ, ಮಲ್ಲು ಮಾಳಿಕೇರಿ ಹಲವರು ಹಾಜರಿದ್ದರು.
ಸಿದ್ದಯ್ಯಸ್ವಾಮಿ ಹಿರೇಮಠ ಸ್ವಾಗತಿಸಿ, ವಂದಿಸಿದರು.