ಮಾಧವ ಗಾಡ್ಗೀಳ್ ನಿಧನದಿಂದ ದೇಶವು ಒಬ್ಬ ಶ್ರೇಷ್ಠ ಪರಿಸರ ತಜ್ಞರನ್ನು ಕಳೆದುಕೊಂಡಿದೆ ಎಂಬ ಭಾವನೆ ಇಲ್ಲಿನ ಪರಿಸರಾಸಕ್ತರು ಹಾಗೂ ಪರಿಸರ ಸಂರಕ್ಷಣಾ ಹೋರಾಟಗಾರರಲ್ಲಿ ಮೂಡಿದೆ.

ಸಂಡೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಕುರಿತಂತೆ ಉತ್ತಮ ವರದಿಯನ್ನು ನೀಡಿದ್ದ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಬುಧವಾರ ಮಹಾರಾಷ್ಟ್ರದ ಪುಣೆಯಲ್ಲಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಅವರ ನಿಧನದಿಂದ ದೇಶವು ಒಬ್ಬ ಶ್ರೇಷ್ಠ ಪರಿಸರ ತಜ್ಞರನ್ನು ಕಳೆದುಕೊಂಡಿದೆ ಎಂಬ ಭಾವನೆ ಇಲ್ಲಿನ ಪರಿಸರಾಸಕ್ತರು ಹಾಗೂ ಪರಿಸರ ಸಂರಕ್ಷಣಾ ಹೋರಾಟಗಾರರಲ್ಲಿ ಮೂಡಿದೆ.

ಗಾಡ್ಗೀಳ್ ೨೦೧೪ರ ಸೆಪ್ಟಂಬರ್ ತಿಂಗಳಲ್ಲಿ ಸಂಡೂರಿಗೆ ಆಗಮಿಸಿ, ತಾಲೂಕಿನ ನಂದಿಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರದಲ್ಲಿ ಅವರು ಇಲ್ಲಿನ ಪರಿಸರವಾದಿಗಳೊಂದಿಗೆ ಹರಿಶಂಕರ ತೀರ್ಥ, ಶ್ರೀಕುಮಾರಸ್ವಾಮಿ ದೇವಸ್ಥಾನ ಹಾಗೂ ಗಣಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಒಂದೆಡೆ ಇಲ್ಲಿನ ಸುಂದರ ಪರಿಸರದ ಕುರಿತು ಮೆಚ್ಚುಗೆ, ಮತ್ತೊಂದೆಡೆ ಪರಿಸರದ ಮೇಲೆ ಅಕ್ರಮ ಗಣಿಗಾರಿಕೆಯಿಂದಾಗಿದ್ದ ಪರಿಣಾಮ ಕುರಿತು ಆತಂಕ ವ್ಯಕ್ತಪಡಿಸಿದ್ದನ್ನು ಇಲ್ಲಿನ ಪರಿಸರಾಸಕ್ತರು ಗುರುವಾರ ಸ್ಮರಿಸಿದರು.

ಜನ ಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಆಲ್ದಳ್ಳಿ ಕನ್ನಡಪ್ರಭದೊಂದಿಗೆ ಮಾತನಾಡಿ, ಗಾಡ್ಗೀಳ್ ೨೦೧೪ರಲ್ಲಿ ಸಂಡೂರಿಗೆ ಆಗಮಿಸಿ ಇಲ್ಲಿನ ಹಲವು ಸ್ಥಳಗಳನ್ನು, ಗಣಿ ಪ್ರದೇಶಗಳನ್ನು ವೀಕ್ಷಿಸಿದ್ದರು. ಮತ್ತೊಮ್ಮೆ ಸಂಡೂರಿಗೆ ಆಗಮಿಸುವುದಾಗಿ ಅವರು ತಿಳಿಸಿದ್ದರು. ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಗಾಗಿ ಉತ್ತಮ ವರದಿಯನ್ನು ಅವರು ನೀಡಿದ್ದರು. ಗಾಡ್ಗೀಳ್ ಅವರ ನಿಧನದಿಂದ ಪಶ್ಚಿಮ ಘಟ್ಟ ಪ್ರದೇಶ ಅನಾಥವಾದಂತಾಗಿದೆ ಎಂದರು.

ಪರಿಸರವಾದಿ ವಿನಾಯಕ ಮುದೇನೂರು ಮಾತನಾಡಿ, ನಾನು ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ವಿರ್ದ್ಯಾರ್ಥಿಯಾಗಿದ್ದಾಗ ಗಾಡ್ಗೀಳ್ ನಮ್ಮ ಕೇಂದ್ರಕ್ಕೆ ಆಗಮಿಸಿ, ಕೇಂದ್ರದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಂತೆ ಗಾಡ್ಗೀಳ್ ಅಧ್ಯಕ್ಷತೆಯಲ್ಲಿನ ಸಮಿತಿ ನೀಡಿದ್ದ ವರದಿಯಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಅಗತ್ಯತೆ ಕುರಿತು ಹಲವು ಸಲಹೆ ಸೂಚನೆಗಳನ್ನು ನೀಡಿತ್ತು. ಅವರು ನೀಡಿದ ವರದಿಗೆ ಅಭಿವೃದ್ಧಿ ಹೆಸರಿನಲ್ಲಿ ಟೀಕೆಗಳ ಕೇಳಿ ಬಂದ ಹಿನ್ನೆಲೆಯಲ್ಲಿ ವರದಿ ಅನುಷ್ಠಾನವಾಗಲಿಲ್ಲ. ಪರಿಸರದ ಮೇಲಿನ ಅತಿಕ್ರಮಣದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಜನತೆ ಅನುಭವಿಸುವಂತಾಗಿದೆ. ವಿವಿಧೆಡೆ ನಡೆದ ಭೂಕುಸಿತವನ್ನು ಜನತೆ ಕಂಡಿದ್ದಾರೆ. ಗಾಡ್ಗೀಳ್ ನಿಧನರಿಂದ ಒಬ್ಬ ಶ್ರೇಷ್ಠ ಪರಿಸರ ತಜ್ಞರನ್ನು ಕಳೆದುಕೊಂಡಾಗಿದೆ ಎಂದರು. ಗಾಡ್ಗೀಳ್ ಅವರೊಂದಿಗೆ ಸಂವಾದ ನಡೆಸಿದ್ದು, ಇಲ್ಲಿನ ಗಣಿ ಮತ್ತಿತರ ಸ್ಥಳಗಳನ್ನು ವೀಕ್ಷಿಸಿದ್ದನ್ನು ಇಲ್ಲಿನ ಪರಿಸರವಾದಿಗಳು ಗುರುವಾರ ಮೆಲುಕು ಹಾಕಿದ್ದಲ್ಲದೆ, ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.