ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್‌ಪಿ ರವಿಕುಮಾರ್, ಡಿವೈಎಸ್ಪಿ ನಂದಾರೆಡ್ಡಿ ಹಾಗೂ ಶಾಸಕ ಭರತ್ ರೆಡ್ಡಿ ವಿರುದ್ಧ ದೂರು ಕೊಟ್ಟಿದ್ದೇನೆ.
ಬಳ್ಳಾರಿ: ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್‌ಪಿ ರವಿಕುಮಾರ್, ಡಿವೈಎಸ್ಪಿ ನಂದಾರೆಡ್ಡಿ ಹಾಗೂ ಶಾಸಕ ಭರತ್ ರೆಡ್ಡಿ ವಿರುದ್ಧ ದೂರು ಕೊಟ್ಟಿದ್ದೇನೆ. ನಾನು ಇತ್ತೀಚೆಗೆ ಕೊಟ್ಟ ಒಂದು ದೂರಿಗೆ ಪ್ರತಿಯಾಗಿ ಪೊಲೀಸರು ಇನ್ನೂ ಎಫ್‌ಐಆರ್ ಮಾಡಿಲ್ಲ. ಆದರೆ, ದೂರು ಪ್ರತಿಗೆ ನಾನು ಹಿಂಬರಹ ಪಡೆದಿದ್ದೇನೆ. ಎಫ್‌ಐಆರ್ ದಾಖಲಿಸದೇ ಹೋದರೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು ಮಾಡುತ್ತೇನೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ತಿಳಿಸಿದರು.
ನಗರದಲ್ಲಿ ಗುರುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೊದಲ ಬಾರಿ ಘರ್ಷಣೆ ನಡೆದಾಗ ರಾತ್ರಿ ಮನೆಗೆ ಬಂದಿದ್ದ ಎಸ್ಪಿ ಮತ್ತು ಡಿಐಜಿ ಕಾಂಗ್ರೆಸ್ಸಿನವರಿಂದಲೇ ತಪ್ಪಾಗಿದೆ ಎಂದಿದ್ದರು. ಅವರ ಮಾತು ಕೇಳಿ ನಾನು ಮನೆಯಲ್ಲೇ ಉಳಿದಿದ್ದೆ. ಆದರೆ, ಪೊಲೀಸರ ಭದ್ರತಾ ವೈಫಲ್ಯದಿಂದ ಭರತ್ ರೆಡ್ಡಿ ನಮ್ಮ ಮನೆವರೆಗೆ ಬಂದು ದಾಳಿ ಮಾಡಿದರು. ಭರತ್ ರೆಡ್ಡಿಯನ್ನು ನಮ್ಮ ಮನೆವರೆಗೆ ಬರಲು ಬಿಡಬಾರದಿತ್ತು ಎಂದರು.ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಕೊಲೆ ಪ್ರಕರಣದಲ್ಲಿ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಇಬ್ಬರನ್ನೂ ಈ ಹೊತ್ತಿಗಾಗಲೇ ಪೊಲೀಸರು ಬಂಧಿಸಬೇಕಿತ್ತು. ಆದರೆ, ಅವರು ಕಾಲಹರಣ ಮಾಡುತ್ತಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದರು.
ಭರತ್ ರೆಡ್ಡಿ ಅವರನ್ನು ವಾಲ್ಮೀಕಿ ವೃತ್ತದಿಂದ ನಮ್ಮ ಮನೆಯ ಬಳಿಗೆ ಪೊಲೀಸರೇ ಕರೆದುಕೊಂಡು ಬಂದರು. ಇಡೀ ಘಟನೆಗೆ ಪೊಲೀಸರೇ ಕಾರಣ. ನನ್ನ ಮನೆ ಸುಡುತ್ತೇನೆ ಎಂದು ಭರತ್ ರೆಡ್ಡಿ ಬಹಿರಂಗವಾಗಿ ಹೇಳಿದರೂ ಆತನನ್ನು ಪೊಲೀಸರು ಬಂಧಿಸಿಲ್ಲ. ಈಗ ಒಳ್ಳೆ ಅಧಿಕಾರಿಗಳು ಬಳ್ಳಾರಿಗೆ ಬಂದಿದ್ದಾರೆ. ಪರಿಶೀಲನೆ ನಡೆಸುತ್ತಿದ್ದಾರೆ. ಶೀಘ್ರ ಕ್ರಮ ಕೈಗೊಳ್ಳುತ್ತಾರೆ ಎಂಬ ನಿರೀಕ್ಷೆಯಿದೆ ಎಂದರು.ಭರತ್ ರೆಡ್ಡಿ ಸಂಬಂಧಿ ಸತೀಶ ರೆಡ್ಡಿಗೆ ಏನೂ ಆಗಿಲ್ಲ. ಆರಾಮವಾಗಿ ಆಸ್ಪತ್ರೆಯಿಂದ ನಡೆದು ಆ್ಯಂಬುಲೆನ್ಸ್ ಹತ್ತಿ ಹೋಗುತ್ತಾನೆ. ತಲೆಗೆ ಸುಮ್ಮನೆ ಬ್ಯಾಂಡೇಜ್ ಹಾಕಿದ್ದಾರೆ. ಮೂಗಲ್ಲಿ ಸುಮ್ಮನೆ ಹತ್ತಿ ಇಟ್ಟಿದ್ದಾರೆ. ಹೊರಡುವಾಗ ಸತೀಶ್ ರೆಡ್ಡಿ ಗೆಲುವಿನ ಚಿಹ್ನೆ ಪ್ರದರ್ಶಿಸುತ್ತಾನೆ. ಬಂಧನಕ್ಕೀಡಾಗುವ ಭಯದಿಂದ ಅವನನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಇದು ಎಎಸ್‌ಪಿ ರವಿಕುಮಾರ್, ಶಾಸಕ ಭರತ್ ರೆಡ್ಡಿ, ಸಂಬಂಧಿ ಪ್ರತಾಪ್ ರೆಡ್ಡಿ ಮಾಡಿರುವ ಕುತಂತ್ರವಾಗಿದೆ. ಕಾಂಗ್ರೆಸ್ ಕಾರ್ಯಕರ್ತನೊಬ್ಬ ಹಲ್ಲೆ ನಡೆಸಿದ್ದಕ್ಕೆ ಪ್ರತಿಯಾಗಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಖಾರದ ಪುಡಿ ಎರಚಿದ್ದರು ಎಂದು ತಿಳಿಸಿದರು. ಇದೇ ವೇಳೆ ದೊಂಬಿಗೆ ಸಂಬಂಧಿಸಿದ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದರು.
ಗಲಭೆ ಪ್ರಕರಣ: 107 ಜನರಿಗೆ ನೋಟಿಸ್: ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಈವರೆಗೆ 107 ಜನರಿಗೆ ನೋಟಿಸ್ ನೀಡಲಾಗಿದೆ. ಸಾರ್ವಜನಿಕ ಶಾಂತಿ ಭಂಗ ಉಂಟು ಮಾಡಿದ ಆರೋಪದ ಮೇಲೆ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಸೇರಿದಂತೆ ಒಟ್ಟು 107 ಜನರಿಗೆ ನೋಟಿಸ್ ನೀಡಲಾಗಿದೆ.ಸುಮೊಟೋ ಪ್ರಕರಣದ ಮೇಲೆ ಜನಾರ್ದನ ರೆಡ್ಡಿ, ಶ್ರೀರಾಮುಲು, ಸೋಮಶೇಖರ ರೆಡ್ಡಿ ಸೇರಿ 33 ಜನರಿಗೆ ಬುಧವಾರವಷ್ಟೇ ನೋಟಿಸ್ ನೀಡಲಾಗಿದೆ. ಕಾಂಗ್ರೆಸ್, ಬಿಜೆಪಿಯ 26 ಜನರನ್ನು ಈಗಾಗಲೇ ಬಂಧಿಸಲಾಗಿದೆ.