ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಮನುಷ್ಯ ಸ್ನೇಹಪರ, ಪ್ರಕೃತಿ ಪರ ಎನ್ನುವುದನ್ನು ಸಾಕ್ಷಿಪ್ರಜ್ಞೆಯಾಗಿ ತೋರಿಸುವ ಮೂಲಕ ಮಾದರಿಯಾದ ವ್ಯಕ್ತಿ ಮರಸಪ್ಪ ರವಿ ಎಂದು ನಿವೃತ್ತ ಡಿವೈಎಸ್ಪಿ ಶ್ರೀನಿವಾಸ್ ತಿಳಿಸಿದರು.ಮಳಗಾಳು ಸಮುದಾಯ ಭವನದಲ್ಲಿ ಕನಕಪುರ ಪರಿಸರ ಪ್ರೇಮಿಗಳ ಸಂಘ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಶ್ರೀ ಮರಸಪ್ಪ ರವಿ ಅವರಿಗೆ ಸನ್ಮಾನ ಹಾಗೂ ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಲಾ ಪರಿಕರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮೊಟ್ಟಿಗೆ ಪ್ರಾಣಿ- ಪಕ್ಷಿಗಳು ಇರಬೇಕು, ಅದನ್ನು ಮರೆಯುತ್ತಿರುವ ಕಾಲಘಟ್ಟದಲ್ಲಿ ಮರಸಪ್ಪ ರವಿ ಅವರು ಅವುಗಳೊಡನೆ ಅನ್ಯೋನ್ಯ ಸಂಬಂಧ ಇಟ್ಟುಕೊಂಡು ಜೀವನ ಸಾಗಿಸುತ್ತಿರುವುದು ಶ್ಲಾಘನೀಯವೆಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಮರಸಪ್ಪ ರವಿ, ಸಮಾಜ ನನಗೆ ಸಾಕಷ್ಟು ನೀಡಿದೆ, ನಾನು ಪ್ರಕೃತಿಗೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಹಂಬಲ ನನ್ನ ಕಿರಿ ವಯಸ್ಸಿನಿಂದ ಬಂದಿತ್ತು. ಆ ನಿಟ್ಟಿನಲ್ಲಿ ಅದನ್ನು ಸಾಕಾರಗೊಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಅದಕ್ಕೂ ಮಿಗಿಲಾಗಿ ಇನ್ನಷ್ಟು ಪ್ರಾಣಿ- ಪಕ್ಷಿಗಳ ರಕ್ಷಣೆ ಮಾಡುವ ಹಂಬಲ ನನ್ನಲಿದೆ, ದೇವರು ನಮಗೆ ಪ್ರಕೃತಿದತ್ತವಾಗಲೆಂದು ಆಶೀರ್ವದಿಸಿದ್ದು, ಆದರೆ ನಾವು ಪ್ರಕೃತಿಯನ್ನು ನಾಶ ಮಾಡುವತ್ತ ಮುಂದಾಗಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ನನ್ನ ಚಿಕ್ಕ ಅಳಿಲು ಸೇವೆ, ಮನೆ ಅಂಗಳದಲ್ಲಿ ಒಂದಷ್ಟು ಪಕ್ಷಿಗಳಿಗೆ ಆಶ್ರಯ, ವರ್ಷಕ್ಕೆ 5 ಸಾವಿರ ಸಸಿ ನೆಡುವುದು, ವಿತರಣೆ ಮಾಡಿಕೊಂಡು ಬಂದಿದ್ದೇನೆ. ಇದನ್ನು ಗಮನಿಸಿ ನನಗೆ ಸರ್ಕಾರ ಕೆಂಪೇಗೌಡ ಪ್ರಶಸ್ತಿ ನೀಡಿದೆ. ಅದಕ್ಕೂ ಮಿಗಿಲಾಗಿ ನಮ್ಮ ಪರಿಸರ ಪ್ರೇಮಿಗಳು ಸನ್ಮಾನಿಸಿರುವುದು ಅತ್ಯಂತ ಗೌರವವನ್ನು ನನಗೆ ತಂದು ಕೊಟ್ಟಿದೆ ಎಂದರು.ನಗರಸಭಾ ಸದಸ್ಯ ಎಂ. ಕಾಂತರಾಜು ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ಪರಿಸರ ಪ್ರೇಮಿಗಳ ಸಂಘದಿಂದ ಹತ್ತಾರು ಕಾರ್ಯಕ್ರಮ ಹಮ್ಮಿಕೊಂಡು ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಜೊತೆಗೆ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಸಹಾಯ ಮಾಡುತ್ತೇವೆ ಎಂದರು.
ಯೋಗ ಶಿಬಿರಾರ್ಥಿಗಳಾದ ಶಾರದ ಮತ್ತು ಸಾವಿತ್ರಿ ಯೋಗದ ಉಪಯೋಗದ ಬಗ್ಗೆ ಮಾಹಿತಿ ಹಂಚಿಕೊಂಡರು.ಇದೇ ವೇಳೆ ನಾಡಪ್ರಭು ಕೆಂಪೇಗೌಡ ಪುರಸ್ಕೃತರಾದ ಶ್ರೀಮರಸಪ್ಪ ರವಿಯವರಿಗೆ ಸನ್ಮಾನಿಸಲಾಯಿತು, ಡಾ. ಸುಮಾ ಮತ್ತು ಚಂದ್ರಿಕಾ ಮೂರ್ತಿ ಅವರಿಗೂ ಸನ್ಮಾನಿಸಲಾಯಿತು. ಯೋಗಾಸನ ಕಲಿಯುತ್ತಿರುವ ಐವತ್ತು ಮಹಿಳೆಯರಿಗೆ ಹೂವಿನ ಗಿಡಗಳನ್ನು ವಿತರಿಸಿ, ಮಳಗಾಳು ಗ್ರಾಮದ ಒಂದನೇ ತರಗತಿಯಿಂದ ಎಸ್ ಎಸ್ ಎಲ್ ಸಿ ವರೆಗೆ 60 ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಜಾಮಿಟ್ರಿ ಬಾಕ್ಸ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಎಂ. ಕಾಂತರಾಜ್, ಸಂಪತ್ , ನಾಗರಾಜ್ ಮರಸಯ್ಯ, ವೆಂಕಟರಮಣಸ್ವಾಮಿ, ಎಲ್. ಎನ್. ಮೂರ್ತಿ ಉಪಸ್ಥಿತರಿದ್ದರು.ನಿವೃತ್ತ ಡಿವೈಎಸ್ ಪಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು, ಮಹದೇವು, ರಾಜೇಶ್, ಜೈ ಕುಮಾರ್, ಶ್ರೀಧರ್, ಮಹಿಳೆಯರಿಗೆ ಗಿಡಗಳ ವಿತರಣೆ ಮಾಡಿದರು. ಲಕ್ಷ್ಮೀಕಾಂತ್, ರಾಜು, ವೇಣುಗೋಪಾಲ್, ರಂಗಸ್ವಾಮಿ, ನಾಗರಾಜ್ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದರು. ಕಾರ್ಯಕ್ರಮವನ್ನು ವೆಂಕಟೇಶ್, ಖುಷಿ ನಿರೂಪಿಸಿದರು. ಜಯರಾಮ್ ಸ್ವಾಗತಿಸಿದರು. ವೆಂಕಟೇಶ್ ಡೈರಿ ಅಧ್ಯಕ್ಷರು ವಂದನಾರ್ಪಣೆ ಮಾಡಿದರು.