ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ಕ್ರಮ ಮತ್ತು ವೆಬ್ ಕಾಸ್ಟಿಂಗ್ ಸಿಸ್ಟಮ್ ಅಳವಡಿಸಿದ್ದರಿಂದ ನಕಲು ಮಾಡಲು ಬ್ರೇಕ್ ಬಿದ್ದಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಯ ಫಲಿತಾಂಶ ಪಾತಾಳಕ್ಕೆ ಕುಸಿದಿದೆ.

16ನೇ ಸ್ಥಾನದಿಂದ 32ನೇ ಸ್ಥಾನಕ್ಕೆ ಕುಸಿತಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ಕ್ರಮ ಮತ್ತು ವೆಬ್ ಕಾಸ್ಟಿಂಗ್ ಸಿಸ್ಟಮ್ ಅಳವಡಿಸಿದ್ದರಿಂದ ನಕಲು ಮಾಡಲು ಬ್ರೇಕ್ ಬಿದ್ದಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಯ ಫಲಿತಾಂಶ ಪಾತಾಳಕ್ಕೆ ಕುಸಿದಿದೆ.

ಕಳೆದ ವರ್ಷ 16ನೇ ಸ್ಥಾನದಲ್ಲಿದ್ದು ಬೀಗುತ್ತಿದ್ದ ಕೊಪ್ಪಳ ಜಿಲ್ಲೆಯ ಫಲಿತಾಂಶ ಈ ಬಾರಿ 32ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ ಶೇ. 90ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಆದರೆ, ಈ ವರ್ಷ ಕೇವಲ ಶೇ. 64.01ರಷ್ಟು ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ. ಬರೋಬ್ಬರಿ ಶೇ. 26ರಷ್ಟು ಫಲಿತಾಂಶ ಕುಸಿದಿದೆ.

ಪರೀಕ್ಷೆಗೆ ಹಾಜರಾದ 22713 ವಿದ್ಯಾರ್ಥಿಗಳು ಪೈಕಿ ಈ ಬಾರಿ ಕೇವಲ 14539 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲಿಯೂ 11129 ಬಾಲಕರು ಪರೀಕ್ಷೆಗೆ ಹಾಜರಾಗಿ 6165 ತೇರ್ಗಡೆಯಾಗಿದ್ದರೆ ಬಾಲಕಿಯರ ಪೈಕಿ 11584 ಪರೀಕ್ಷೆಗೆ ಹಾಜರಾಗಿ 8374 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೇ. 63ರಷ್ಟು ತೇರ್ಗಡೆಯಾಗಿದ್ದರೆ, ನಗರ ಪ್ರದೇಶದ ವಿದ್ಯಾರ್ಥಿಗಳು ಶೇ. 67ರಷ್ಟು ತೇರ್ಗಡೆಯಾಗಿ ಮುನ್ನಡೆ ಸಾಧಿಸಿದ್ದಾರೆ.

ಕಟ್ಟುನಿಟ್ಟಿನ ಕ್ರಮವೇ ಕಾರಣ:

ಪರೀಕ್ಷಾ ಪದ್ಧತಿಯಲ್ಲಿ ಈ ಬಾರಿ ಕಟ್ಟನಿಟ್ಟಿನ ಕ್ರಮವಹಿಸಿದ್ದೇ ಫಲಿತಾಂಶ ಕುಸಿಯಲು ಕಾರಣವಾಗಿದೆ ಎನ್ನುವುದು ಪಕ್ಕಾ. ಇದೇ ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ಮಾಡಿದ್ದರಿಂದ ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳು ನೇರವಾಗಿ ಪ್ರಸಾರವಾಗುತ್ತಿದ್ದವು. ಎಲ್ಲಿಯೇ ಆಗಲಿ ನಕಲು ನಡೆಯುತ್ತಿದೆ ಎನ್ನುವುದು ಗೊತ್ತಾಗುತ್ತದೆ ಎನ್ನುವುದನ್ನು ಅರಿತಿದ್ದರಿಂದ ನಕಲು ಮಾಡುವುದಕ್ಕೆ ಅವಕಾಶವನ್ನೇ ನೀಡಲಿಲ್ಲ. ಪರಿಣಾಮ ಫಲಿತಾಂಶ ಕುಸಿಯಲು ಕಾರಣವಾಯಿತು.

ಸರ್ಕಾರಿ ಶಾಲೆಗಿಂತಲೂ ಖಾಸಗಿ ಶಾಲೆಯಲ್ಲಿಯೇ ಫಲಿತಾಂಶ ಉತ್ತಮವಾಗಿ ಬಂದಿದೆ. ಇದಕ್ಕೆ ಹಲವಾರು ಕಾರಣಗಳು ಇರಬಹುದಾದರೂ ಇದು ವಿಮರ್ಶೆಗೆ ಒಳಗಾಗಲೇ ಬೇಕು ಎನ್ನುತ್ತಾರೆ ಶಿಕ್ಷಣ ತಜ್ಞರು.

ಫಲಿತಾಂಶ ಸುಧಾರಣೆಗಾಗಿ ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಹಲವಾರು ಕ್ರಮ ಕೈಗೊಂಡಿದ್ದರೂ ಫಲಿತಾಂಶ ಪಾತಳಕ್ಕೆ ಕುಸಿದಿರುವುದು ಅಚ್ಚರಿಯಾಗಿದೆ. ಮಕ್ಕಳಲ್ಲಿ ಪರೀಕ್ಷೆಯ ಗಂಭೀರತೆ ಇಲ್ಲದಂತೆ ಆಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಪ್ರತಿ ಬಾರಿಯೂ ಪಾಸ್ ಮಾಡುವಷ್ಟು ಅಂಕ ಯಾವುದಾದರೂ ಮೂಲದಿಂದ ಪರೀಕ್ಷೆಯಲ್ಲಿ ಮಕ್ಕಳಿಗೆ ಹೇಳಿಕೊಡಲಾಗುತ್ತಿತ್ತು. ಹೀಗಾಗಿ, ಪರೀಕ್ಷೆಯ ಬಗ್ಗೆ ಗಂಭೀರತೆ ಇರಲಿಲ್ಲ. ಈ ಬಾರಿ ವೆಬ್ ಕಾಸ್ಟಿಂಗ್ ಮಾಡಿ, ಕಟ್ಟುನಿಟ್ಟಿನ ಕ್ರಮವಹಿಸಿದ್ದರಿಂದ ನಕಲು ಮಾಡಲು ಅವಕಾಶ ಇರದಂತೆ ಆಗಿದ್ದೇ ಫಲಿತಾಂಶ ಕುಸಿಯಲು ನಿಖರ ಕಾರಣ ಎನ್ನುವುದು ಜಗಜ್ಜಾಹೀರು.

1ನೇ ತರಗತಿಯಿಂದಲೇ ಆಗಲಿ:

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕಟ್ಟುನಿಟ್ಟು ನಡೆಸಿದಂತೆ ಒಂದನೇ ತರಗತಿಯಿಂದಲೇ ಮಾಡಬೇಕು. ಅಂದಾಗಲೇ ಇದು ಇನ್ನು ಪರಿಣಾಮಕಾರಿಯಾಗುತ್ತದೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಗುಣಮಟ್ಟ ಕುಸಿದು ಹೋಗಿದೆ. ಕಡ್ಡಾಯ ಪಾಸ್ ಎನ್ನುವುದರಿಂದ ವಿದ್ಯಾರ್ಥಿಗಳಲ್ಲಿ ಮತ್ತು ಶಿಕ್ಷಕರಲ್ಲಿ ಫಲಿತಾಂಶ ಕುಸಿಯುವ ಭಯ ಇಲ್ಲ. ಓದಲು, ಬರೆಯಲು ಬಾರದವರು ಎಂಟನೇ ತರಗತಿಗೆ ಆಗಮಿಸುತ್ತಾರೆ. 8ನೇ ತರಗತಿಗೆ ಪ್ರವೇಶ ಪರೀಕ್ಷೆ ಮಾಡಿದರೆ ಅರ್ಧದಷ್ಟು ವಿದ್ಯಾರ್ಥಿಗಳು ಪಾಸಾಗುವುದಿಲ್ಲ. ಎಬಿಸಿಡಿ ಬರದ ಮಕ್ಕಳನ್ನು ಹೈಸ್ಕೂಲ್‌ಗೆ ಕಳುಹಿಸುತ್ತಾರೆ. ಹೀಗಾಗಿಯೇ ಸಮಸ್ಯೆಯಾಗಿದೆ. ಕಟ್ಟುನಿಟ್ಟಿನ ಕ್ರಮ ಪ್ರಾಥಮಿಕ ಹಂತದಲ್ಲಿಯೇ ಇರುವಂತಾಗಬೇಕು ಎನ್ನುವುದು ಹೈಸ್ಕೂಲ್ ಶಿಕ್ಷಕರ ಆಗ್ರಹವಾಗಿದೆ.

ಅವಕಾಶ ಉಂಟು:

ಈಗ ಫೇಲಾಗಿರಬಹುದು ಅಥವಾ ಕಡಿಮೆ ಅಂಕ ಬಂದಿರಬಹುದು. ಆದರೆ, ಇನ್ನು ಎರಡು ಅವಕಾಶಗಳು ಇರುವುದರಿಂದ ವಿದ್ಯಾರ್ಥಿಗಳು ಧೃತಿಗೆಡಬಾರದು. ಇದೇ ವರ್ಷದಲ್ಲಿಯೇ ಫಲಿತಾಂಶ ಸುಧಾರಣೆ ಮಾಡಿಕೊಳ್ಳಲು ಮತ್ತು ಫೇಲಾದವರು ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಇರುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿಕೊಳ್ಳಬೇಕು. ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು.ತಾಲೂಕುವಾರು ಫಲಿತಾಂಶ

ಕೊಪ್ಪಳ – 74.16

ಯಲಬುರ್ಗಾ – 72.05

ಕುಷ್ಟಗಿ -56.47

ಗಂಗಾವತಿ -55.08

ಕೊಪ್ಪಳ ಟಾಪರ್:

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕೊಪ್ಪಳಯಲ್ಲಿ ಮೂವರು ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಗಂಗಾವತಿ ನಗರದ ಮಹಾನ್ ಕಿಡ್ಸ್ ಶಾಲೆಯ ಪಿ. ರೇವಂತ ಕುಮಾರ 621 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ,

ಕೊಪ್ಪಳ ನಗರದ ಎಸ್ ಎಫ್ ಎಸ್ ಶಾಲೆಯ ಪ್ರಕಾಂಕ್ಷ ಎಂ. 616 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯ ತಿರುಪತಿ ಗುರಿಕಾರ 615 ಅಂಕ ಪಡೆಯುವ ಮೂಲಕ ತೃತಿಯ ಸ್ಥಾನ ಪಡೆದಿದ್ದಾರೆ.