ಸಾರಾಂಶ
ವಿವಿಧ ಯೋಜನೆಗಳ ಯೋಜನೆಯ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯ ಕೈಗಾರಿಕಾ ವಲಯಗಳಲ್ಲಿ ನಿವೇಶನ ಪಡೆದಿರುವವರು ತಕ್ಷಣ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಬೇಕು. ಹೆಚ್ಚುವರಿ ಕಾಲಾವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದ್ದಾರೆ.ಅವರು ರಜತಾದ್ರಿಯ ತಮ್ಮ ಕಚೇರಿ ಸಭಾಂಗಣದಲ್ಲಿ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಜಿಲ್ಲಾ ಏಕಗವಾಕ್ಷಿ ಸಮಿತಿ ಸಭೆ, ರಫ್ತು ಉತ್ತೇಜನ ಸಮಿತಿ ಸಭೆ, ಪ್ರಧಾನಮಂತ್ರಿಯವರ ಉದ್ಯೋಗ ಸೃಜನ ಯೋಜನೆಯ ಡಿ.ಎಲ್.ಎಂ.ಸಿ. ಸಭೆ ಹಾಗೂ ಪಿ.ಎಂ ವಿಶ್ವಕರ್ಮ ಯೋಜನೆಯ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಅನೇಕ ಮಂದಿ ಹೊಸ ಕೈಗಾರಿಕಾ ಘಟಕಗಳಿಗೆಂದು ನಿವೇಶನ ಪಡೆದಿದ್ದರೂ ಸಹ ಕೈಗಾರಿಕೆಗಳನ್ನು ಕಾಲಮಿತಿಯೊಳಗೆ ಪ್ರಾರಂಭಿಸಿರುವುದಿಲ್ಲ. ಆದ್ದರಿಂದ ಅಂತಹ ನಿವೇಶನಗಳನ್ನು ಕೈಗಾರಿಕೆ ಪ್ರಾರಂಭಿಸಲು ನಿವೇಶನ ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿರುವ ಇತರರಿಗೆ ಮರು ಹಂಚಿಕೆ ಮಾಡಲು ಕ್ರಮವಹಿಸಿ ಎಂದವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಹೆಬ್ರಿ ತಾಲೂಕಿನ ಶಿವಪುರದಲ್ಲಿ 74.84 ಎಕ್ರೆ, ಕೆರೆಬೆಟ್ಟುವಿನಲ್ಲಿ 38.75 ಎಕ್ರೆ, ನಿಟ್ಟೆಯಲ್ಲಿ 50.42 ಎಕ್ರೆ ಸೇರಿದಂತೆ ಒಟ್ಟು 165.98 ಎಕ್ರೆ ಜಮೀನನ್ನು ಹೊಸ ಕೈಗಾರಿಕಾ ಪ್ರದೇಶಕ್ಕೆಂದು ಗಡಿ ಗುರುತಿಸುವ ಕಾರ್ಯವನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಎಲ್ಲೂರು ಹಾಗೂ ಸಾಂತೂರುಗಳಲ್ಲಿರುವ ಕೈಗಾರಿಕಾ ಪ್ರದೇಶದ ವಿಸ್ತೀರ್ಣವನ್ನು 941.98 ಎಕ್ರೆ ವಿಸ್ತರಿಸಲಾಗುತ್ತದೆ ಎಂದರು.ಜಿಲ್ಲೆಯಲ್ಲಿ ಸಮುದ್ರ ಉತ್ಪನ್ನಗಳ ರಫ್ತು ಉದ್ಯಮ ಉತ್ತೇಜಿಸಲು ಕೈಂದ್ರೀಕೃತ ಸೀ ಫುಡ್ ಪಾರ್ಕ್‌ಗಳ ನಿರ್ಮಾಣ ಹಾಗೂ ಎಕ್ಸ್ಪೋರ್ಟ್ ಇನ್‌ಸ್ಪೆಕ್ಷನ್ ಏಜೆನ್ಸಿಗಳನ್ನು ನೇಮಿಸಲು ಕ್ರಮವಹಿಸಬೇಕು ಎಂದವರು ಸೂಚಿಸಿದರು.ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಪಿ.ಎಂ., ವಿಶ್ವಕರ್ಮ ಯೋಜನೆಯ 6274 ಫಲಾನುಭವಿಗಳಿಗೆ ತರಬೇತಿ ನೀಡಲಾಗಿದೆ. 3916 ಫಲಾನುಭವಿಗಳಿಗೆ ಸಾಲ ಸೌಲಭ್ಯ ಮಂಜೂರಾಗಿದ್ದು, 3573 ಫಲಾನುಭವಿಗಳಿಗೆ ಸಹಾಯಧನ ಪಾವತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಸಭೆಯಲ್ಲಿ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ಸಣ್ಣ ಕೈಗಾರಿಕಾ ಸಂಘ ಜಿಲ್ಲಾಧ್ಯಕ್ಷ ವಸಂತ ಕಿಣಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ನಗರಸಭೆ ಆಯುಕ್ತ ಮಂಹಾತೇಶ ಹಂಗರಗಿ, ಖಾಸಿಯಾ ಪ್ರತಿನಿಧಿ ಹರೀಶ್ ಕುಂದರ್, ಜಿಲ್ಲಾಮಟ್ಟದ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ಸಣ್ಣ ಕೈಗಾರಿಕಾ ಉದ್ದಿಮೆದಾರರು ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.