ನರಸಿಂಹರಾಜಪುರ ಪ್ರತಿಯೊಬ್ಬ ಮಹಿಳೆ ಸಮತೋಲನ ಆಹಾರ ಸೇವನೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಶುಶ್ರೂಷಣಾ ಅಧಿಕಾರಿ ಸೋನಾ ಮ್ಯಾಥ್ಯೂ ಸಲಹೆ ನೀಡಿದರು.

- ಹಿಳುವಳ್ಳಿಯಲ್ಲಿ ಸಾಧನ ಜ್ಞಾನ ವಿಕಾಸ ಕೇಂದ್ರ ಆಶ್ರಯದಲ್ಲಿ ಪೌಷ್ಠಿಕ ಆಹಾರ ಮಾಹಿತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪ್ರತಿಯೊಬ್ಬ ಮಹಿಳೆ ಸಮತೋಲನ ಆಹಾರ ಸೇವನೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಶುಶ್ರೂಷಣಾ ಅಧಿಕಾರಿ ಸೋನಾ ಮ್ಯಾಥ್ಯೂ ಸಲಹೆ ನೀಡಿದರು.

ಭಾನುವಾರ ಹಿಳುವಳ್ಳಿ ಗಣಪತಿ ಪೆಂಡಾಲ್ ನಲ್ಲಿ ಧ.ಗ್ರಾ.ಯೋಜನೆ ಎನ್.ಆರ್.ಪುರ ವಲಯದ ಹೊಸ್ಕೆರೆ ಕಾರ್ಯಕ್ಷೇತ್ರದ ಸಾಧನ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಕಿಶೋರಿಯರಿಗೆ, ಮಕ್ಕಳಿಗೆ ಪೌಷ್ಠಿಕ ಆಹಾರ ಅದರಲ್ಲೂ ಪ್ರೋಟೀನ್ ದೇಹದ ಬೆಳವಣಿಗೆಗೆ ಅಗತ್ಯವಾಗಿದೆ. ವಿಟಮಿನ್ ಖನಿಜಾಂಶ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು.

ಸೊಪ್ಪು, ಹಸಿ ತರಕಾರಿ ಸೇವಿಸಿದರೆ ರಕ್ತ ಹೀನತೆ ಉಂಟಾಗುವುದಿಲ್ಲ . ಮೂಳೆ ಗಟ್ಟಿಯಾಗಲು ಕ್ಯಾಲ್ಸಿಯಂ ಸೇವನೆ ಮಾಡಬೇಕು. ಸರಿಯಾದ ಪೌಷ್ಠಿಕ ಆಹಾರ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ. 6 ತಿಂಗಳ ಮಗುವಿನಿಂದಲೇ ಪೌಷ್ಠಿಕ ಆಹಾರ ನೀಡಬೇಕು.ಆರೋಗ್ಯ ಚೆನ್ನಾಗಿ ಇರಬೇಕಾದರೆ ಹಿತಮಿತ ಆಹಾರ ಸೇವಿಸಬೇಕು. ಹಾಲು, ಮೊಟ್ಟೆ, ಮೊಳಕೆ ಬಂದ ಕಾಳುಗಳನ್ನು ಸೇವಿಸಬೇಕು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಜ್ಞಾನ ವಿಕಾಸ ಕೇಂದ್ರದ ಕೊಪ್ಪ, ಎನ್.ಆರ್.ಪುರ ತಾಲೂಕುಗಳ ಸಮನ್ವಯಾಧಿಕಾರಿ ಉಷಾ ಮಾತನಾಡಿ, ಧರ್ಮಸ್ಥಳದ ಹೇಮಾವತಿ ಅಮ್ಮನ ಮಾರ್ಗದರ್ಶನದಲ್ಲಿ ಮಹಿಳಾ ಜ್ಞಾನ ವಿಕಾಸ ಕೇಂದ್ರಗಳಲ್ಲಿ ಪ್ರತಿ ತಿಂಗಳು ಒಬ್ಬ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುವುದು. ಮಹಿಳಾ ಜ್ಞಾನ ವಿಕಾಸ ಕೇಂದ್ರ ಶಿಕ್ಷಣ, ಸ್ವ ಉದ್ಯೋಗ, ಪೌಷ್ಠಿಕ ಆಹಾರ, ಆರೋಗ್ಯ, ನೈರ್ಮಲ್ಯ, ಕೌಟಂಬಿಕ ಸಾಮರಸ್ಯ, ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ, ಕಾನೂನು ಅರಿವು ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.

ಆಂತರಿಕ ಲೆಕ್ಕ ಪರಿಶೋಧಕ ಪ್ರದೀಪ್ ಮಾತನಾಡಿ, ಮಹಿಳಾ ಜ್ಞಾನ ವಿಕಾಸ ಕೇಂದ್ರಗಳಲ್ಲಿ ನಡೆಸುವ ವಾತ್ಸಲ್ಯ ಕಾರ್ಯಕ್ರಮದಲ್ಲಿ ಅತಿ ದುರ್ಬಲ ಮತ್ತು ಅಸಹಾಯಕ ಸ್ಥಿತಿಯಲ್ಲಿರುವ ಕುಟುಂಬಗಳ ಸಮೀಕ್ಷೆ ನಡೆಸಿ ಅವರಿಗೆ ಅಗತ್ಯ ಸೌಲಭ್ಯ ನೀಡಲಾಗುವುದು. ಗೆಳತಿ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೌಟಂಬಿಕ ಸಮಸ್ಯೆಗೆ ಒಳಗಾದ ಮಹಿಳೆ ಯರ ಮತ್ತು ಅವರ ಕುಟುಂಬದವರ ಆಪ್ತ ಸಮಾಲೋಚನೆ ಮೂಲಕ ಬದುಕನ್ನು ಸರಿಪಡಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

ಒಕ್ಕೂಟದ ಅಧ್ಯಕ್ಷೆ ಪುಷ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಭೆ ಅಧ್ಯಕ್ಷತೆಯನ್ನು ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಗಾಯಿತ್ರಿ ವಹಿಸಿದ್ದರು. ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಪವಿತ್ರ, ಸೇವಾ ಪ್ರತಿನಿಧಿ ಶಶಿಕಲಾ ಇದ್ದರು. ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ತಯಾರಿಸಿದ್ದ ಪೌಷ್ಠಿಕ ಆಹಾರಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು. ಪೌಷ್ಠಿಕ ಆಹಾರ ತಯಾರಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.