ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಪ್ರಜ್ಞಾವಂತ ನಾಗರಿಕರಾಗಿ ಎಲ್ಲರೂ ಏ.೨೬ ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತಚಲಾಯಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ನಿಮ್ಮ ಹಕ್ಕನ್ನು ಪ್ರಜ್ಞಾಪೂರ್ವಕವಾಗಿ ಚಲಾಯಿಸಿ ಎಂದು ಪುತ್ತೂರು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಹೇಳಿದರು.ಅವರು ಶನಿವಾರ ಭಾರತ ಚುನಾವಣಾ ಆಯೋಗ, ದ.ಕ.ಜಿಲ್ಲಾ ಸ್ವೀಪ್ ಸಮಿತಿ, ಪುತ್ತೂರು ತಾಲೂಕು ಸ್ವೀಪ್ ಸಮಿತಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ರೆಡ್ ಕ್ರಾಸ್ ಘಟಕದ ವತಿಯಿಂದ ನಗರದ ಕೋಟಿ ಚೆನ್ನಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಕುರಿತ ಬೀದಿ ನಾಟಕ ಪ್ರದರ್ಶನ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಮಾಜದಲ್ಲಿ ಮತದಾರರ ಓಲೈಕೆಗಾಗಿ ನಾನಾ ಆಮಿಷಗಳನ್ನು ಒಡ್ಡಲಾಗುತ್ತದೆ, ಅವುಗಳಿಗೆ ಮರುಳಾಗದೆ ತಮ್ಮ ಮತಗಳನ್ನು ಮಾರಿಕೊಳ್ಳದೆ ಸ್ವತಂತ್ರವಾಗಿ ಮತಚಲಾಯಿಸಬೇಕು. ಮತದಾನದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿಯ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ತರಬೇತುದಾರ ಹಾಗೂ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕ ನಂದಕಿಶೋರ್ ಎಸ್. ಮಾತನಾಡಿ, ಜಿಲ್ಲಾಡಳಿತ ಸ್ವೀಪ್ ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಅರಿವು ಮೂಡಿಸುವ ಹಾಗೂ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ನಾನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅದೇ ರೀತಿ ಬಸ್ ನಿಲ್ದಾಣದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರ ಮೂಲಕ ಬೀದಿ ನಾಟಕ ಹಾಗೂ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಬಸ್ ನಿಲ್ದಾಣ ವ್ಯವಸ್ಥಾಪಕ ಅಬ್ಬಾಸ್ ಮಾತನಾಡಿದರು. ಪುತ್ತೂರು ತಾಲೂಕು ಪಂಚಾಯತ್ ವಿಷಯ ನಿರ್ವಾಹಕರಾದ ತುಳಸಿ, ಸಿಬ್ಬಂದಿ ಭರತ್ ರಾಜ್ ಕೆ, ಹಿರಿಯ ಉಪನ್ಯಾಸಕ ಪ್ರೊ ಶಾಂತಾರಾಮ, ಉಪನ್ಯಾಸಕರಾದ ವಸಂತ ಕುಮಾರ್, ವೆಂಕಪ್ಪ ನಾಯ್ಕ್, ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕರಾದ ಕೋಚಣ್ಣ ಪೂಜಾರಿ, ಭಾಸ್ಕರ್ ಶೆಟ್ಟಿ, ಮುರಳೀಧರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.