ಪಂಚಮಸಾಲಿ ಪೀಠ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿರುವ ಪೀಠವಾಗಿದ್ದು, ಇದು ಪಂಚ ದಾಸೋಹಗಳ ಪೀಠವಾಗಿದೆ. ಇಲ್ಲಿ ಅನ್ನ, ಅಕ್ಷರ, ಆಶ್ರಯ, ಆರೋಗ್ಯ ಹಾಗೂ ಅಧ್ಯಾತ್ಮದಂಥ ದಾಸೋಹಗಳು ನಿತ್ಯ ಜರುಗುತ್ತಿರುತ್ತವೆ.

ನರೇಗಲ್ಲ: ಜ. 14ರಂದು ಹರಿಹರದಲ್ಲಿ ಜರುಗುವ ಹರನ ಜಾತ್ರೆಗೆ ಸಮಸ್ತ ಪಂಚಮಸಾಲಿ ಸಮಾಜದವರು ಆಗಮಿಸಿ ಗುರುಮಠದ ಪ್ರಸಾದ ಸೇವಿಸುವ ಮೂಲಕ ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ತಿಳಿಸಿದರು. ಇಲ್ಲಿಯ ಕೊಟಗಿ ಅವರ ಜಾಗದಲ್ಲಿ ಹರನ ಜಾತ್ರಾ ಮಹೋತ್ಸವದ ಆಮಂತ್ರಣ ಕಾರ್ಯಕ್ರಮದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿ, ಪಂಚಮಸಾಲಿ ಪೀಠ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿರುವ ಪೀಠವಾಗಿದ್ದು, ಇದು ಪಂಚ ದಾಸೋಹಗಳ ಪೀಠವಾಗಿದೆ. ಇಲ್ಲಿ ಅನ್ನ, ಅಕ್ಷರ, ಆಶ್ರಯ, ಆರೋಗ್ಯ ಹಾಗೂ ಅಧ್ಯಾತ್ಮದಂಥ ದಾಸೋಹಗಳು ನಿತ್ಯ ಜರುಗುತ್ತಿರುತ್ತವೆ ಎಂದರು.ಇತ್ತೀಚಿನ ದಿನಮಾನಗಳಲ್ಲಿ ಯುವಪೀಳಿಗೆ ಒತ್ತಡದ ಮಧ್ಯೆ ಬದುಕುತ್ತಿರುವ ಹಿನ್ನೆಲೆ ಅಂತಹ ವ್ಯಕ್ತಿಗಳಿಗೆ ಒತ್ತಡದಿಂದ ಹೊರಬರಲು ವ್ಯಕ್ತಿತ್ವ ವಿಕಸನದಂಥ ಕಾರ್ಯಗಳನ್ನು ಶ್ರೀಮಠದಿಂದ ಕೈಗೊಳ್ಳಲಾಗುತ್ತಿದೆ. ಪಂಚಮಸಾಲಿ ಸಮಾಜದ ಕಡುಬಡತನದಲ್ಲಿರುವ ಮಕ್ಕಳ ಶಿಕ್ಷಣಕ್ಕೆ ಸದಾ ಮುಂದಿದ್ದು, ಅಂತಹ ಮಕ್ಕಳು ಯಾರ ಗಮನಕ್ಕಾದರೂ ಬಂದಲ್ಲಿ ಶ್ರೀಮಠದ ಗಮನಕ್ಕೆ ತಂದರೆ ಆ ಮಗುವಿನ ಸಮಸ್ತ ಶಿಕ್ಷಣದ ಜವಾಬ್ದಾರಿಯನ್ನು ಶ್ರೀಮಠ ವಹಿಸಲಿದೆ ಎಂದರು. ಈ ವೇಳೆ ಇತ್ತೀಚೆಗೆ ಜರುಗಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಭುಸ್ವಾಮಿ ಅರವಟಗಿಮಠ, ಜಿಲ್ಲಾ ಕಾರ್ಯಾಕಾರಿಣಿ ಸದಸ್ಯರಾದ ನಿಂಗರಾಜ ಬೇವಿನಕಟ್ಟಿ, ಆದರ್ಶ ಕುಲಕರ್ಣಿ ಅವರನ್ನು ಶ್ರೀಗಳು ಸನ್ಮಾನಿಸಿದರು. ಮುಖಂಡರಾದ ಮುತ್ತಣ್ಣ ಪಲ್ಲೇದ, ಬಸನಗೌಡ ಪೊಲೀಸ್ ಪಾಟೀಲ, ಡಾ. ಕೆ.ಬಿ. ಧನ್ನೂರ, ನಿಂಗಪ್ಪ ಕಣವಿ, ಪ್ರಕಾಶ ಪಲ್ಲೇದ, ಗಂಗಾಧರ ಕೊಟಗಿ, ಬಸವರಾಜ ಕಲಾಲಬಂಡಿ, ಶರಣಪ್ಪ ಬೆಟಗೇರಿ, ಪ್ರಕಾಶ ಕೊಟಗಿ, ಆನಂದ ಕೊಟಗಿ, ಸಿದ್ದಪ್ಪ ರಾಗಿ, ಎಸ್.ಕೆ. ಪಾಟೀಲ, ವೀರಣ್ಣ ಗುಜಮಾಗಡಿ, ಮಂಜುನಾಥ ಮಲ್ಲನಗೌಡ್ರ, ವಿ.ವಿ. ಕೆರಿ, ಉಮೇಶ ಚನ್ನುಪಾಟೀಲ, ಶಿವಕುಮಾರ ದೊಡ್ಡೂರ ಇತರರು ಇದ್ದರು.