ಹಿರೇಕೆರೂರು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರಕ್ಕೆ ಶಾಸಕ ಯು.ಬಿ. ಬಣಕಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ರೋಗಿಗಳ ಯೋಗಕ್ಷೇಮ ವಿಚಾರಿಸಿದರು.

ಹಿರೇಕೆರೂರು: ಪಟ್ಟಣ ಸೇರಿದಂತೆ ತಾಲೂಕಿನ ಡಯಾಲಿಸಿಸ್ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಉತ್ತಮ ಸೇವೆ, ಚಿಕಿತ್ಸೆ ಸೌಲಭ್ಯವನ್ನು ಆರೋಗ್ಯ ಇಲಾಖೆ ನೀಡಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ರೋಗಿಗಳ ಯೋಗಕ್ಷೇಮ ವಿಚಾರಿಸಿ ಅವರು ಮಾತನಾಡಿದರು. ಈ ಮೊದಲು ಇಲ್ಲಿ 2 ಮತ್ತು ರಟ್ಟೀಹಳ್ಳಿ ಆಸ್ಪತ್ರೆಗಳಲ್ಲಿ 2 ಸೇರಿದಂತೆ ಬರಿ 4 ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಇದರಿಂದ ರೋಗಿಗಳು ಅನಿವಾರ್ಯವಾಗಿ ಹಾವೇರಿಗೆ ಹೋಗಿ, ಅಲ್ಲಿ ಸರದಿಯಂತೆ ಡಯಾಲಿಸಿಸ್ ಮಾಡಿಸಿಕೊಂಡು ಬರಬೇಕಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಬೇಡಿಕೆ ಬಂದಿದ್ದರಿಂದ ಬೆಳಗಾವಿಯ ಅಧಿವೇಶನದಲ್ಲಿ ಆರೋಗ್ಯ ಸಚಿವರ ಗಮನಕ್ಕೆ ತರಲಾಗಿತ್ತು. ಅದರಂತೆ ಸಚಿವ ದಿನೇಶ ಗುಂಡೂರಾವ್ ಅವರು ಹಿರೇಕೆರೂರಿಗೆ 2 ಹಾಗೂ ರಟ್ಟೀಹಳ್ಳಿ ಆಸ್ಪತ್ರೆಗೆ 2 ಹೀಗೆ 4 ಹೊಸ ಡಯಾಲಿಸಿಸ್ ಯಂತ್ರಗಳನ್ನು ಮಂಜೂರು ಮಾಡಿದ್ದು, ಅವರು ಅವಶ್ಯಕತೆಯಿದ್ದಲ್ಲಿ ಇನ್ನು ಹೆಚ್ಚಿನ ಯಂತ್ರಗಳನ್ನು ನೀಡುವ ಭರವಸೆ ನೀಡಿದ್ದಾರೆ. ಒಂದು ವೇಳೆ ರೋಗಿಗಳ ಸಂಖ್ಯೆ ಹೆಚ್ಚಾದಲ್ಲಿ ಆರೋಗ್ಯ ಇಲಾಖೆ ಕೂಡಲೇ ಈ ಬಗ್ಗೆ ನನ್ನ ಗಮನಕ್ಕೆ ತರಬೇಕು ಹಾಗೂ ಈ ಯಂತ್ರಗಳನ್ನು ನಿರ್ವಹಿಸಲು ಸಿಬ್ಬಂದಿಯ ಕೊರತೆಯಿದ್ದು, ಕೂಡಲೇ ಇದನ್ನು ನೀಗಿಸಲಾಗುವುದು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಝಡ್.ಆರ್. ಮಕಾನ್‌ದಾರ್‌ ಮಾತನಾಡಿ, ಈ ಮೊದಲು ಹಿರೇಕೆರೂರು ಹಾಗೂ ರಟ್ಟೀಹಳ್ಳಿಯ ಆಸ್ಪತ್ರೆಗಳಲ್ಲಿ 1 ಯಂತ್ರಕ್ಕೆ ದಿನಕ್ಕೆ 4 ಶಿಫ್ಟ್‌ನಂತೆ 2 ಡಯಾಲಿಸಿಸ್ ಯಂತ್ರಗಳಿಂದ ಕೇವಲ 8 ರೋಗಿಗಳಿಗೆ ಮಾತ್ರ ಡಯಾಲಿಸಿಸ್ ಮಾಡಲಾಗುತ್ತಿತ್ತು. ಶಾಸಕರ ಪ್ರಯತ್ನದಿಂದ ಈಗ ಮತ್ತೆ ಒಟ್ಟು 4 ಯಂತ್ರಗಳು ಹೊಸದಾಗಿ ಮಂಜೂರಾಗಿದ್ದು, ಇದರಿಂದ ಭಾನುವಾರ ರಜಾ ದಿನ ಹೊರತುಪಡಿಸಿ, ಇನ್ನು ಮುಂದೆ ಹಿರೇಕೆರೂರಿನಲ್ಲಿ 16 ಮತ್ತು ರಟ್ಟೀಹಳ್ಳಿಯಲ್ಲಿ 16 ಹೀಗೆ ದಿನಕ್ಕೆ ಒಟ್ಟು 32 ರೋಗಿಗಳಿಗೆ ಡಯಾಲಿಸಿಸ್ ಮಾಡಬಹುದಾಗಿದೆ ಎಂದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ತಾಲೂಕು ಕಾಂಗ್ರೆಸ್ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ ತಳವಾರ, ಮುನ್ನಾ ಅಪರಂಜಿ ಆಸ್ಪತ್ರೆಯ ಸಿಬ್ಬಂದಿ ಇದ್ದರು.