ಪಿಡಿಒ ನೇಮಕಾತಿ ಪರೀಕ್ಷೆ ವೇಳೆ ಬ್ಲೂಟೂತ್‌ ಬಳಸಿ ಅಕ್ರಮ : ಅಭ್ಯರ್ಥಿ ಪೊಲೀಸ್ ವಶಕ್ಕೆ

| Published : Dec 09 2024, 12:46 AM IST / Updated: Dec 09 2024, 06:45 AM IST

ಪಿಡಿಒ ನೇಮಕಾತಿ ಪರೀಕ್ಷೆ ವೇಳೆ ಬ್ಲೂಟೂತ್‌ ಬಳಸಿ ಅಕ್ರಮ : ಅಭ್ಯರ್ಥಿ ಪೊಲೀಸ್ ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆ ನೇಮಕಾತಿ ಪರೀಕ್ಷೆ ವೇಳೆ ತುಮಕೂರಿನ ಲಾ ಕಾಲೇಜಿನ ಪರೀಕ್ಷಾ ಕೇಂದ್ರವೊಂದರಲ್ಲಿ ಬ್ಲೂಟೂತ್ ಸಾಧನ ಬಳಸಿ ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಯೊಬ್ಬನನ್ನು ಪತ್ತೆ ಹಚ್ಚಿರುವ ಸಿಬ್ಬಂದಿ, ಆತನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.

 ಬೆಂಗಳೂರು : ಗ್ರಾಮೀಣ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆ ನೇಮಕಾತಿ ಪರೀಕ್ಷೆ ವೇಳೆ ತುಮಕೂರಿನ ಲಾ ಕಾಲೇಜಿನ ಪರೀಕ್ಷಾ ಕೇಂದ್ರವೊಂದರಲ್ಲಿ ಬ್ಲೂಟೂತ್ ಸಾಧನ ಬಳಸಿ ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಯೊಬ್ಬನನ್ನು ಪತ್ತೆ ಹಚ್ಚಿರುವ ಸಿಬ್ಬಂದಿ, ಆತನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.

ಈ ಹಿಂದೆ ಯಾದಗಿರಿ, ಕಲಬುರಗಿಯಲ್ಲಿ ಪಿಎಸ್‌ಐ, ಎಫ್‌ಡಿಎ ಪರೀಕ್ಷೆಯಲ್ಲೂ ಹೀಗೆ ಬ್ಲೂಟೂತ್‌ ಬಳಸಿ ಅಕ್ರಮ ನಡೆಸಿದ್ದು ಬೆಳಕಿಗೆ ಬಂದು ಭಾರೀ ಸುದ್ದಿಯಾಗಿತ್ತು. ಅದಾದ ಬಳಿಕ ಇಂಥ ಅಕ್ರಮ ತಡೆಯಲು ಸರ್ಕಾರ ನಾನಾ ಕ್ರಮ ಕೈಗೊಂಡಿತ್ತು . ಅದರ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಸಿಸಿಟೀವಿಯಲ್ಲಿ ಸೆರೆ:

ಭಾನುವಾರ ಪರೀಕ್ಷೆ ನಡೆಯುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಅಭ್ಯರ್ಥಿ ಬ್ಲೂಟೂತ್ ಸಾಧನ ಬಳಸಿ ಅಕ್ರಮ ಮಾಡುತ್ತಿರುವುದನ್ನು ಸಿಸಿ ಕ್ಯಾಮೆರಾ ಕಂಟ್ರೋಲ್ ರೂಮ್‌ನಲ್ಲಿ ಕೂತು ವೀಕ್ಷಿಸುತ್ತಿದ್ದ ಸಿಬ್ಬಂದಿ ಗಮನಿಸಿದ್ದಾರೆ. ಕೂಡಲೇ ಕೊಠಡಿಗೆ ತೆರಳಿ ಆತನನ್ನು ವಿಚಾರಣೆ ನಡೆಸಲು ಮುಂದಾದಾಗ, ಆತ ನೆಪ ಹೇಳಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಆತನನ್ನು ಹಿಡಿದುಕೊಂಡ ಸಿಬ್ಬಂದಿ, ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.

ನಿಷೇಧಕ್ಕೆ ಕ್ರಮ:

ಈತ ಬೆಂಗಳೂರಿನ ರಾಮಮೂರ್ತಿ ನಗರದವನು ಎನ್ನಲಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಈ ಕುರಿತು ಮತ್ತಷ್ಟು ಮಾಹಿತಿ, ವರದಿ ಲಭ್ಯವಾದ ಬಳಿಕ ಕೆಪಿಎಸ್‌ಸಿಯ ಪರೀಕ್ಷೆಗಳಿಂದ ನಿಷೇಧ ಮಾಡುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ಪಿಎಸ್‌ಐ, ಎಫ್‌ಡಿಎ ಪರೀಕ್ಷೆಯಲ್ಲೂ ಬಳಕೆ:

2022ರಲ್ಲಿ ನಡೆದಿದ್ದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆ ವೇಳೆ ಯಾದಗಿರಿ ಮತ್ತು ಕಲಬುರಗಿಯಲ್ಲಿ ಮೊದಲ ಬಾರಿ ಬ್ಲೂಟೂತ್‌ ಅಕ್ರಮ ಬಯಲಾಗಿ ಭಾರೀ ಸುದ್ದಿಯಾಗಿತ್ತು. ಈ ಕುರಿತು ತನಿಖೆ ನಡೆಸಿದ ಸಿಐಡಿ ಪೊಲೀಸರಿಗೆ ರಾಜ್ಯಾದ್ಯಂತ ಇದೇ ರೀತಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಹಗರಣದ ಕಿಂಗ್‌ ಪಿನ್‌ ಆರ್‌.ಡಿ.ಪಾಟೀಲ್‌, ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪಾಲ್‌ ಸೇರಿ 113 ಮಂದಿ ಅಭ್ಯರ್ಥಿಗಳು, ಅಧಿಕಾರಿಗಳು, ಮಧ್ಯವರ್ತಿಗಳನ್ನು ಬಂಧಿಸಲಾಗಿತ್ತು. ಆ ಬಳಿಕ ಸರ್ಕಾರ ಮರುಪರೀಕ್ಷೆಗೆ ಆದೇಶ ಹೊರಡಿಸಿತ್ತು.

ಇದಾದ ಬಳಿಕ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೆಇಎ ನಡೆಸಿದ ಎಫ್‌ಡಿಎ ಪರೀಕ್ಷೆಯಲ್ಲೂ ಬ್ಲೂಟೂತ್‌ ಅಕ್ರಮ ಪತ್ತೆಯಾಗಿತ್ತು. ಕಲಬುರಗಿಯ ಪರೀಕ್ಷಾ ಕೇಂದ್ರದಲ್ಲಿ ಈ ಅಕ್ರಮ ಬೆಳಕಿಗೆ ಬಂದಿತ್ತು. ಇದರ ಹಿಂದೆ ಕೂಡ ಆರ್‌.ಡಿ.ಪಾಟೀಲ್‌ ಕೈವಾಡದ ಆರೋಪ ಕೇಳಿಬಂದಿತ್ತು.