ಮೊಳಕಾಲ್ಮುರು: ಹದಗೆಟ್ಟ ರೈಲ್ವೆ ಅಂಡರ್ ಪಾಸ್ ರಸ್ತೆ

| Published : Dec 09 2024, 12:46 AM IST

ಸಾರಾಂಶ

ಪಟ್ಟಣದಲ್ಲಿನ ರೈಲ್ವೆ ಕೆಳ ಸೇತುವೆ ರಸ್ತೆ ಹಾಳಾಗಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ಜನರು ನಿತ್ಯ ಪ್ರಯಾಸದಿಂದಲೇ ರಸ್ತೆ ದಾಟುವಂತ ಅನಿವಾರ್ಯತೆ ಎದುರಾಗಿದ್ದರೂ, ಸಂಬಂಧಿಸಿದ ರೈಲ್ವೆ ಇಲಾಖೆ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ.

ಬಿ.ಜಿ.ಕೆರೆ ಬಸವರಾಜ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಪಟ್ಟಣದಲ್ಲಿನ ರೈಲ್ವೆ ಕೆಳ ಸೇತುವೆ ರಸ್ತೆ ಹಾಳಾಗಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ಜನರು ನಿತ್ಯ ಪ್ರಯಾಸದಿಂದಲೇ ರಸ್ತೆ ದಾಟುವಂತ ಅನಿವಾರ್ಯತೆ ಎದುರಾಗಿದ್ದರೂ, ಸಂಬಂಧಿಸಿದ ರೈಲ್ವೆ ಇಲಾಖೆ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ.ಮೊಳಕಾಲ್ಮುರು ಮಲ್ಪೆ ರಾಜ್ಯ ಹೆದ್ದಾರಿಗೆ ನಿರ್ಮಿಸಿರುವ ರೈಲ್ವೆ ಕೆಳ ಸೇತುವೆ ರಸ್ತೆ ಕಳೆದೊಂದು ವರ್ಷದಿಂದ ಹಾಳಾಗಿದೆ. ಭಾರಿ ಗಾತ್ರದ ಗುಂಡಿಗಳಿಂದಾಗಿ ವಾಹನ ಸವಾರರು ಪರಿತಪಿಸುತ್ತಿದ್ದಾರೆ. ಆಳುದುದ್ದ ಗುಂಡಿಗಳ ನಡುವೆ ಪ್ರಯಾಣಿಸುವ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುವಂತಾಗಿದ್ದರೂ, ಸಂಬಂಧಿಸಿದ ಅಧಿಕಾರಿಗಳು ದುರಸ್ತಿಗೆ ಮುಂದಾಗುತ್ತಿಲ್ಲ.ಪಟ್ಟಣದಿಂದ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಸಂಪೂರ್ಣ ಹದಗೆಟ್ಟಿದೆ. ಹಲವು ಬಾರಿ ಈ ರಸ್ತೆ ರಿಪೇರಿ ಆಗಿದ್ದರೂ ಪ್ರಯೋಜನವಾಗಿಲ್ಲ. ಮೊದಲೇ ಕಿರಿದಾಗಿರುವ ಅಂಡರ್ ಪಾಸ್ ರಸ್ತೆಯಿಂದ ಹೈರಾಣಾಗಿರುವ ಈ ಭಾಗದ ಜನರಿಗೆ ಪ್ರಸ್ತುತ ರಸ್ತೆ ಹಾಳಾಗಿರುವುದು ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ.ಬಸ್, ಲಾರಿ ಸೇರಿದಂತೆ ನಿತ್ಯ ನೂರಾರು ವಾಹನಗಳು ಈ ರಸ್ತೆಯ ಅಂಡರ್‌ಪಾಸ್‌ ಮೂಲಕ ಸಂಚಾರ ಮಾಡಲಿವೆ. ಇದಲ್ಲದೆ ಸುತ್ತಲಿನ ಹತ್ತಾರು ಹಳ್ಳಿಗಳ ವಿದ್ಯಾರ್ಥಿಗಳನ್ನು ಹೊತ್ತು ತರುವಂತ ಆಟೋಗಳು ಮತ್ತು ದ್ವಿಚಕ್ರ ವಾಹನಗಳ ಓಡಾಟ ಇದೆ. ಗುಂಡಿ ಬಿದ್ದ ರಸ್ತೆಯಲ್ಲಿ ಸಾಗಿ ಬರುವಾಗ ಸ್ವಲ್ಪ ಯಾಮಾರಿದರೂ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ವಾಹನ ಸವಾರರು ನೀರಿನಲ್ಲಿ ಸಾಗುವಂತಾಗುತ್ತದೆ. ರೈಲ್ವೆ ಅಂಡರ್ ಪಾಸ್ ಎರಡೂ ಕಡೆಯಿಂದಲೂ ಇಳಿಜಾರು ಇದೆ. ಬರುವ ವಾಹನಗಳಿಗೆ ರಸ್ತೆಯಲ್ಲಿನ ಗುಂಡಿ ಗೊತ್ತಾಗದೇ ಹಲವು ಬಾರಿ ಅಪಘಾತ ನಡೆದಿರುವ ಘಟನೆಗಳು ಬೆಳಕಿಗೆ ಬಂದಿವೆ.ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರು ಪಟ್ಟಣಕ್ಕೆ ಹೂ, ಹಣ್ಣು, ತರಕಾರಿ ಹೊತ್ತು ನೂರಾರು ರೈತರು ಆಗಮಿಸುತ್ತಾರೆ. ಗುಂಡಿಗಳು ತುಂಬಿರುವ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ಬರುವಂತಾಗಿದೆ. ಇನ್ನು ತುರ್ತು ವಾಹನಗಳ ಪಾಡಂತೂ ಹೇಳತೀರದಾಗಿದ್ದು, ಅಂಡರ್ ಪಾಸ್ ದಾಟಿ ಬರುವಲ್ಲಿ ಹರಸಾಹಸ ಪಡುವಂತಾಗಿದ್ದು, ದುರಸ್ತಿಗೊಳಿಸದ ಅಧಿಕಾರಿಗಳ ಜಾಣ ನಡೆಗೆ ಜನತೆ ಹಿಡಿ ಶಾಪ ಹಾಕುವಂತಾಗಿದೆ.ರೈಲ್ವೆ ಅಧಿಕಾರಿಗಳ ಹೊಣೆ ಗೇಡಿ ತನದಿಂದಾಗಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ರೈಲ್ವೆ ಕೆಳ ಸೇತುವೆ ರಸ್ತೆಯಲ್ಲಿ ದೊಡ್ಡ ಅಪಘಾತ ಸಂಭವಿಸುವ ಮುನ್ನಾ ಸಂಬಂಧಿಸಿದ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ದುರಸ್ತಿಗೆ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿನ ರೈಲ್ವೆ ಅಂಡರ್ ಪಾಸ್ ಮೊದಲೇ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಇದರ ಜತೆಗೆ ಕಳೆದೆರಡು ವರ್ಷಗಳಿಂದ ರಸ್ತೆ ಹದಗೆಟ್ಟು ಆಳುದ್ದುದ್ದ ಗುಂಡಿಗಳು ಬಿದ್ದಿವೆ. ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿ ಕಾಡುತ್ತಿದ್ದರೂ, ಸಂಬಂಧಿಸಿದ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸದಿರುವುದರಿಂದ, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಕೂಡಲೇ ರಸ್ತೆ ದುರಸ್ತಿಗೆ ಮುಂದಾಗದಿದ್ದರೆ ಹೋರಾಟ ಮಾಡುತ್ತೇವೆ.- ಮರ್ಲಹಳ್ಳಿ ರವಿ ಕುಮಾರ್, ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ.