ಸಾರಾಂಶ
ಯುವಕರಿಗೆ ಭಾರತೀಯ ಸೇನೆಯಲ್ಲಿ ಸೇರಲು ಬಹಳಷ್ಟು ಅವಕಾಶಗಳಿದ್ದು, ಆಸಕ್ತರು ಭಾರತೀಯ ಸೇನೆಗೆ ಸೇರಬೇಕು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಯುವಕರಿಗೆ ಭಾರತೀಯ ಸೇನೆಯಲ್ಲಿ ಸೇರಲು ಬಹಳಷ್ಟು ಅವಕಾಶಗಳಿದ್ದು, ಆಸಕ್ತರು ಭಾರತೀಯ ಸೇನೆಗೆ ಸೇರಬೇಕು ಎಂದು ಎಡಿಜಿ ರಿಕ್ರೂಟಿಂಗ್ ಝಡ್‌ಆರ್‌ಓ ಬೆಂಗಳೂರಿನ ಮೇಜರ್ ಜನರಲ್ ಹರಿಪಿಳ್ಳೈ ಹೇಳಿದರು.ತಳಕಲ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಗೆ ಸೇರುವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ವರ್ಷ ಸೇನಾ ರ್‍ಯಾಲಿಯ ಮುಖಾಂತರ ಇಡೀ ದೇಶದಾದ್ಯಂತ 40 ಸಾವಿರ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದೆವೆ. ಮುಂದಿನ ವರ್ಷ ಇದು ಡಬಲ್ ಆಗಲಿದೆ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಸೇನೆಯಲ್ಲಿ ಸೇರಲು ಬಹಳಷ್ಟು ಅವಕಾಶವಿದ್ದು, ವಿದ್ಯಾರ್ಥಿಗಳು ದೇಶ ಸೇವೆ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.ಆಯ್ಕೆ ಪ್ರಕ್ರಿಯೆ ಮೊದಲಿಗೆ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗುತ್ತದೆ. ನಂತರ ವಿವಿಧ ಹಂತಗಳಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳ ಅರ್ಹತೆ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.
ಒಮ್ಮೆ ಸೇನೆಗೆ ಸೇರಿದ ನಂತರ ವೃತ್ತಿಪರ ಜೀವನ, ಸಾಹಸ, ಕ್ರೀಡೆ, ಪ್ರಯಾಣ ಸೇರಿದಂತೆ ತಮ್ಮ ಜೀವನ ಶೈಲಿ ವಿಭಿನ್ನವಾದ ರೀತಿಯಲ್ಲಿ ಬದಲಾವಣೆಯಾಗುತ್ತದೆ. ಕ್ರೀಡಾಪಟುಗಳಿಗೆ, ತಾಂತ್ರಿಕ ಸಿಬ್ಬಂದಿ ಹಾಗೂ ಹೆಚ್ಚಿನ ಶಿಕ್ಷಣ ಮುಗಿಸಿದವರಿಗೆ ಸೇನೆಯಲ್ಲಿ ಬೋನಸ್ ಅಂಕ ನೀಡಲಾಗುತ್ತದೆ. ವಿದ್ಯಾರ್ಥಿಗಳು ಭಾರತೀಯ ಸೇನೆಯ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕರ್ನಲ್ ವಿವೇಕ್ ಜಮಾದಾರ, ಕಾಲೇಜಿನ ಪ್ರಾಂಶುಪಾಲ ಡಾ. ವಿರುಪಾಕ್ಷ ಬಾಗೋಡಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರದೀಪ್, ಕಬ್ಬಳ್ಳಿ ಪ್ರಶಾಂತ, ಡಾ. ಶೋಭಾ ಭುವನೇಶ್ವರಿ, ಪ್ರಥಮ ದರ್ಜೆ ಸಹಾಯಕ ಹೊನ್ನಪ್ಪ ಸೇರಿದಂತೆ ಕಾಲೇಜಿನ ಇತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.