ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ₹25 ಲಕ್ಷ ವೆಚ್ಚದ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಇದುವರೆಗೂ ಮಳೆ ನೆಪವನ್ನು ಹೇಳುತ್ತಿದ್ದ ಇಲಾಖೆ, ಈಗ ಮಳೆ ನಿಂತು ತಿಂಗಳುಗಳೇ ಗತಿಸಿದ್ದರೂ ಇದುವರೆಗೂ ಉತ್ಖನನ ಪ್ರಾರಂಭವಾಗದೇ ಇರುವುದಕ್ಕೆ ಯಾವುದೇ ಸಕಾರಣಗಳೇ ಇಲ್ಲ.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲೆಯ ಐತಿಹಾಸಿಕ ಮುಕುಟ ಲಕ್ಕುಂಡಿಯಲ್ಲಿ ಹುದುಗಿರುವ ಐತಿಹಾಸಿಕ ಪರಂಪರೆಯನ್ನು ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಉತ್ಖನನಕ್ಕೆ ಚಾಲನೆ ನೀಡಿ 6 ತಿಂಗಳು ಕಳೆದಿದ್ದರೂ ಇದುವರೆಗೂ ಕಾಮಗಾರಿಯೇ ಪ್ರಾರಂಭವಾಗಿಲ್ಲ!.

ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ₹25 ಲಕ್ಷ ವೆಚ್ಚದ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಇದುವರೆಗೂ ಮಳೆ ನೆಪವನ್ನು ಹೇಳುತ್ತಿದ್ದ ಇಲಾಖೆ, ಈಗ ಮಳೆ ನಿಂತು ತಿಂಗಳುಗಳೇ ಗತಿಸಿದ್ದರೂ ಇದುವರೆಗೂ ಉತ್ಖನನ ಪ್ರಾರಂಭವಾಗದೇ ಇರುವುದಕ್ಕೆ ಯಾವುದೇ ಸಕಾರಣಗಳೇ ಇಲ್ಲ. ಸರ್ಕಾರದ ಬಳಿ ಉತ್ಖನನಕ್ಕೆ ಬೇಕಾದ ₹25 ಲಕ್ಷ ಹಣ ನೀಡಲು ಅನುದಾನವಿಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ.

ವಿಶೇಷ ಪೂಜೆ: 2025ರ ಜೂ. 3ರಂದು ಲಕ್ಕುಂಡಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಉತ್ಖನನ ಕಾರ್ಯಕ್ಕೆ ಪೂಜೆ ನೆರವೇರಿಸಲಾಗಿತ್ತು. ಸಚಿವ ಎಚ್.ಕೆ. ಪಾಟೀಲ, ಶಾಸಕ ಸಿ.ಸಿ. ಪಾಟೀಲ, ಭೂಮಿಗೆ ಹಾಲೆರೆದು ಬೆಳ್ಳಿಯ ಗುದ್ದಲಿಯಿಂದ ಸಿಎಂ ಗುದ್ದಲಿ ಪೂಜೆ ನೆರವೇರಿಸಿದ್ದರು. ಈ ವಿಶೇಷ ಪೂಜಾ ಕಾರ್ಯಕ್ರಮವೇ ರಾಜ್ಯದ ಗಮನ ಸೆಳೆದಿತ್ತು. ಆದರೆ ಪೂಜೆ ಕೇವಲ ಪೂಜೆಯ ಹಂತಕ್ಕೆ ನಿಂತಿರುವುದು ಮಾತ್ರ ವಿಪರ್ಯಾಸ.

ಯಾವ ಕಾರಣಕ್ಕಾಗಿ ಉತ್ಖನನ?: ತಾಲೂಕಿನ ಲಕ್ಕುಂಡಿ ಗ್ರಾಮ 101 ದೇವಸ್ಥಾನ ಮತ್ತು 101 ಬಾವಿ ಹೊಂದಿರುವ ಐತಿಹಾಸಿಕ ಸ್ಥಳವಾಗಿದೆ. ಚಾಲುಕ್ಯ ಮತ್ತು ರಾಷ್ಟ್ರಕೂಟರ ಕಾಲದಲ್ಲಿ ಆಡಳಿತ ಕೇಂದ್ರವಾಗಿತ್ತು. ಅಂದಿನ ಕಾಲದಲ್ಲಿಯೇ ಲಕ್ಕುಂಡಿಯಲ್ಲಿ ನಾಣ್ಯ ಮುದ್ರಣ ಮಾಡುವ ಟಂಕಸಾಲೆ ಕೂಡಾ ಲಕ್ಕುಂಡಿಯಲ್ಲಿಯೇ ಇತ್ತು. ಇದರೊಟ್ಟಿಗೆ ಹಲವಾರು ದೇವಸ್ಥಾನಗಳು ಮಣ್ಣಲ್ಲಿ ಹುದುಗಿರುವ ಸಾಧ್ಯತೆ ಇರುವ ಸಾಕಷ್ಟು ಕುರುಹುಗಳು ದೊರೆತ ಹಿನ್ನೆಲೆ ಐತಿಹಾಸಿಕ ಸ್ಥಳಗಳ ಸಂಶೋಧನೆಗೆ ಉತ್ಖನನ ಮಾಡಲು ಸರ್ಕಾರ ಮತ್ತು ಜಿಲ್ಲಾಡಳಿತ ಉದ್ದೇಶಿಸಿದೆ. ಸಧ್ಯದಲ್ಲಿಯೇ ಉತ್ಖನನ: ಅನುದಾನದ ಕೊರತೆ ಇಲ್ಲ. ಉತ್ಖನನ ನಡೆಯುವ ಸ್ಥಳ ಖಾಸಗಿ ಮಾಲೀಕತ್ವದಲ್ಲಿ ಇದ್ದ ಹಿನ್ನೆಲೆ ಅವರಿಗೆ ಪರಿಹಾರದ ಹಣವನ್ನು ಕೊಡಬೇಕಿತ್ತು. ಜಿಲ್ಲಾಡಳಿತ ಮೂಲಕ ಹಣಕಾಸು ಇಲಾಖೆಗೆ ಹೋಗಿ ಅಲ್ಲಿ ಅನುಮತಿ ಪಡೆದು, ಅಲ್ಲಿಂದ ಪುರಾತತ್ವ ಇಲಾಖೆಯಲ್ಲಿ ಅನುಮತಿ ದೊರೆತಿದ್ದು, ಈ ವಿಷಯ ಇತ್ತೀಚೆಗೆ ಬೆಳಗಾವಿಯಲ್ಲಿ ಕೂಡಾ ಚರ್ಚೆಯಾಗಿ ಅಂತಿಮಗೊಂಡಿದೆ. ಸಧ್ಯದಲ್ಲಿಯೇ ಉತ್ಖನನ ಕಾರ್ಯ ಪ್ರಾರಂಭವಾಗಲಿದೆ ಎಂದು ಲಕ್ಕುಂಡಿ ಪ್ರಾಧಿಕಾರ ಆಯುಕ್ತರಾದ ಶರಣು ಗೋಗೇರಿ ತಿಳಿಸಿದರು.