ಸಾರಾಂಶ
ಲಕ್ಷ್ಮೇಶ್ವರ ತಾಲೂಕಿನಲ್ಲಿ ಅತಿಯಾದ ಮುಂಗಾರು ಮಳೆಯಿಂದ ಬಿತ್ತನೆ ಮಾಡಿದ್ದ ಹೆಸರು ಹಾಗೂ ಉದ್ದಿನ ಬೆಳೆಗಳು ಕೊಳೆತು ಹೋಗುತ್ತಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ಲಕ್ಷ್ಮೇಶ್ವರ: ತಾಲೂಕಿನಲ್ಲಿ ಅತಿಯಾದ ಮುಂಗಾರು ಮಳೆಯಿಂದ ಬಿತ್ತನೆ ಮಾಡಿದ್ದ ಹೆಸರು ಹಾಗೂ ಉದ್ದಿನ ಬೆಳೆಗಳು ಕೊಳೆತು ಹೋಗುತ್ತಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ಲಕ್ಷ್ಮೇಶ್ವರ ತಾಲೂಕಿನ ಮಾಡಳ್ಳಿ, ಯತ್ತಿನಹಳ್ಳಿ ಹಾಗೂ ಯಳವತ್ತಿ ಭಾಗದಲ್ಲಿ ಮುಂಗಾರು ಹಂಗಾಮಿನ ಮಳೆಗಳು ಅತಿಯಾದ ಪ್ರಮಾಣದಲ್ಲಿ ಸುರಿಯುವ ಮೂಲಕ ರೈತರು ಬಿತ್ತನೆ ಮಾಡಿದ್ದ ಹೆಸರು ಹಾಗೂ ಉದ್ದು ಬೆಳಗಳು ಈಗ ಕೊಳೆತು ಹೋಗುವ ಹಂತಕ್ಕೆ ಬಂದಿದ್ದು, ರೈತರಲ್ಲಿ ಆತಂಕದ ಸ್ಥಿತಿ ನಿರ್ಮಾಣ ಮಾಡಿದೆ.ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಮಾಡಳ್ಳಿ ಹಾಗೂ ಯತ್ತಿನಹಳ್ಳಿ ಗ್ರಾಮದ ರೈತರು ತಹಸೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕೃಷಿಕ ಸಮಾಜದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಮಾತನಾಡಿ, 2025-26ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಸುರಿದ ವಿಪರೀತ ಮಳೆಗೆ ಬಿತ್ತನೆ ಮಾಡಿದ್ದ ಹೆಸರು, ಉದ್ದು, ಬಿಟಿ ಹತ್ತಿ ಹಾಗೂ ಗೋವಿನ ಜೋಳದ ಬೆಳಗಳು ಸರಿಯಾಗಿ ಮೊಳಕೆಯೊಡೆಯದೆ ಬಿತ್ತನೆ ಮಾಡಿದ್ದ ಖರ್ಚು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಸರ್ಕಾರ ಲಕ್ಷ್ಮೇಶ್ವರ ತಾಲೂಕಿನ ಹಳ್ಳಿಗಳಿಗೆ ಹೋಗಿ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದಲ್ಲಿ ರೈತರಿಗೆ ಆದ ಅನ್ಯಾಯ ಸರಿಪಡಿಸಲು ಸಾಧ್ಯವಾಗುತ್ತದೆ. ಆದ್ದರಿಂದ ತಾವು ತಮ್ಮ ಅಧಿಕಾರಿಗಳೊಂದಿಗೆ ಹೊಲಗಳಿಗೆ ಬೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಈ ವೇಳೆ ಸುರೇಶ ಸಿಂದಗಿ, ಫಕ್ಕೀರೇಶ ಹೂಗಾರ, ಗಿರಿಯಪ್ಪಗೌಡ ಪಾಟೀಲ, ವೆಂಕಟೇಶ ಪಾಟೀಲ, ಜಗನಾಥಗೌಡ ಪಾಟೀಲ, ಪ್ರಕಾಶ ಸಿಂದಗಿ, ನಾಗರಾಜ ಜಂತ್ಲಿ, ಮಲ್ಲನಗೌಡ ಪಾಟೀಲ, ರಮೇಶ ಸಿದ್ದನಗೌಡರ, ದ್ಯಾವನಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.