ಅಣ್ಣಿಗೇರಿ:

ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್‌ ಸ್ಫೋಟಗೊಂಡು ಮನೆಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ತಾಯಿ ಹಾಗೂ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡ ಘಟನೆ ಪಟ್ಟಣದ ಉದಯನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ.

ಸಾಹೀರಾಬಾನು ಧಾರವಾಡ (55), ಅವರ ಪುತ್ರರಾದ ಅಬ್ಬಾಸ್ ಅಲಿ ಧಾರವಾಡ (29) ಹಾಗೂ ಹಸನಸಾಬ್ ಧಾರವಾಡ (27) ತೀವ್ರವಾಗಿ ಗಾಯಗೊಂಡಿದ್ದಾರೆ.

ಶುಕ್ರವಾರ ರಾತ್ರಿ ಸಿಲಿಂಡರ್‌ ಸೋರಿಕೆ ಆಗಿದೆ. ಎಂದಿನಂತೆ ಬೆಳಗ್ಗೆ ಎದ್ದು ಲೈಟ್‌ ಹಚ್ಚುತ್ತಿದ್ದಂತೆ ಮನೆಯಲ್ಲಿ ಬೆಂಕಿ ಆವರಿಸಿ ಸಿಲಿಂಡರ್‌ ಸ್ಫೋಟಗೊಂಡಿದೆ. ಈ ವೇಳೆ ಮನೆಯೊಳಗಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮನೆಯಲ್ಲಿ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿದೆ. ಮಕ್ಕಳ ಮದುವೆಗೆ ಖರೀದಿಸಿದ್ದ ಬಟ್ಟೆ, ಮದುವೆ ಸಾಮಗ್ರಿ ಬೆಂಕಿಗೆ ಆಹುತಿಯಾಗಿವೆ. ಈ ಘಟನೆಯಿಂದ ನೆರೆಹೊರೆಯ ಮನೆಗಳಿಗೆ ಹಾನಿಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ ಎಸ್ಪಿ ಗುಂಜನ್ ಆರ್ಯ, ಪಿಎಸ್‌ಐ ಉಮಾದೇವಿ ಹಾಗೂ ತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ಭೇಟಿ ನೀಡಿ ಪರಿಶೀಲಿಸಿದರು.