ನಾನು ಯುವಕನಗಿದ್ದಾಗಿನಿಂದ ಇಲ್ಲಿವರೆಗೂ ಸಾರ್ಥಕ ಬದುಕಿಗೆ ಕಾರಣರಾಗಿ ಸದಾ ಆಶೀರ್ವಾದ ಮಾಡುತ್ತಿರುವ ಶಕ್ತಿ ದೇವತೆ ಶ್ರೀ ಮಾರಮ್ಮ ತಾಯಿಗೆ ಹಾಗೂ ಕ್ಷೇತ್ರದ ಜನತೆಗೆ ನಮ್ಮ ಕುಟುಂಬ ಸದಾ ಚಿರಋಣಿಯಾಗಿರುತ್ತೇವೆ ಎಂದು ದಾಸರಹಳ್ಳಿ ಶಾಸಕ ಎಸ್.ಮುನಿರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ನಾನು ಯುವಕನಗಿದ್ದಾಗಿನಿಂದ ಇಲ್ಲಿವರೆಗೂ ಸಾರ್ಥಕ ಬದುಕಿಗೆ ಕಾರಣರಾಗಿ ಸದಾ ಆಶೀರ್ವಾದ ಮಾಡುತ್ತಿರುವ ಶಕ್ತಿ ದೇವತೆ ಶ್ರೀ ಮಾರಮ್ಮ ತಾಯಿಗೆ ಹಾಗೂ ಕ್ಷೇತ್ರದ ಜನತೆಗೆ ನಮ್ಮ ಕುಟುಂಬ ಸದಾ ಚಿರಋಣಿಯಾಗಿರುತ್ತೇವೆ ಎಂದು ದಾಸರಹಳ್ಳಿ ಶಾಸಕ ಎಸ್.ಮುನಿರಾಜು ಹೇಳಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಯೋಜನೆ ಮಾಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸಾಮಾನ್ಯ ಯುವಕನಾಗಿ ಈ ಗ್ರಾಮಕ್ಕೆ ಬಂದು ಅನೇಕ ಕಷ್ಟದ ಜೀವನ ನಡೆಸಿ, ಕಾರ್ಮಿಕನಾಗಿ, ನಂತರ ಎಲ್ಲರ ಸಹಕಾರದಿಂದ ಕಾರ್ಮಿಕರ ಮುಖಂಡನಾಗಿ ಗುರುತಿಸಿ ಕೊಂಡಿದ್ದೆ.

ಈ ಹಿನ್ನಲೆಯಲ್ಲಿ ಬಿಜೆಪಿಯ ಕೇಂದ್ರದ ಹಾಗೂ ರಾಜ್ಯದ ವರಿಷ್ಠರು ಶಾಸಕನಾಗುವ ಅವಕಾಶ ಮಾಡಿ ಕೊಟ್ಟಿದ್ದರಿಂದ ಅಲ್ಲಿಂದ ಇಲ್ಲಿವರೆಗೂ ಕ್ಷೇತ್ರದ ಮುಖಂಡರು ಜೊತೆಗೆ ಮತದಾರರು ಆಶೀರ್ವಾದ ಮಾಡಿದರು. ಆ ದಿನದಿಂದ ಇಲ್ಲಿವರೆಗೂ ಜನರ ಸೇವೆ ಮಾಡಲು ಅವಕಾಶ ದೊರಕಿದೆ ಇದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಭಾವುಕರಾಗಿ ಮಾತನಾಡಿದರು.

ಸುಮಾರು 50 ವರ್ಷದ ಹಿಂದೆ ಯುವಕನಾಗಿ ಬಾಗಲಗುಂಟೆಗೆ ಬಂದಾಗ ಗ್ರಾಮದ ಜನತೆ ಎಲ್ಲಾ ರೀತಿ ಸಹಾಯ ಸಹಕಾರ ಕೊಟ್ಟು ಪ್ರೋತ್ಸಾಹಿಸಿದ್ದರಿಂದ ನಾನು ಸಮಾಜದಲ್ಲಿ ಈ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು. ಮೂರು ಭಾರಿ ಶಾಸಕನಾಗಿ ಅಲ್ಲಿಂದ ಇಲ್ಲಿವರೆಗೂ ಕ್ಷೇತ್ರದ ಎಲ್ಲಾ ದೇವಸ್ಥಾನಕ್ಕೆ ಭೇಟಿ ಮಾಡಿ ಆಶೀರ್ವಾದ ಪಡೆದು ಸೇವೆ ಮಾಡುತ್ತೀದ್ದೇನೆ ಎಂದರು.

ಸುಜಾತ ಮುನಿರಾಜು ಮಾತನಾಡಿ, ನನ್ನ ಬದುಕಿನ ಆಶ್ರಯದಾತರಾಗಿ, ಮಕ್ಕಳು,ಅಳಿಯಂದಿರು,ಮೊಮ್ಮಕ್ಕಳ ಜೊತೆಗೆ ಎಲ್ಲಾ ಸೌಲಭ್ಯಕ್ಕೆ ಕಾರಣರದವರು ನನ್ನ ಪತಿ ಮುನಿರಾಜು ನಮ್ಮ ಕುಟುಂಬದ ಮನೆ ದೇವರು. ಅವರ ಈ ಬೆಳವಣಿಗೆಗೆ ಕಾರಣರಾದ ನೀವೇ ನಮಗೆ ದೇವರು ಎಂದರು. ನಿಮ್ಮ ಸೇವೆಯನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ನಮ್ಮ ಕುಟುಂಬದವರು ಸದಾ ನಿಮ್ಮ ಸೇವೆ ಮಾಡುವ ಭಾಗ್ಯ ದೊರೆತಿದ್ದಕ್ಕಾಗಿ ಧನ್ಯವಾದಗಳನ್ನು, ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು. ಈ ವೇಳೆ ಬಿಜೆಪಿಯ ಹಿರಿಯ, ಕಿರಿಯ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.