ಕೋವಿಡ್ ವೇಳೆ ಕಾರ್ಮಿಕರು ಮತ್ತು ಇತರರು ಅನುಭವಿಸಿದ ಚಿತ್ರಣಗಳನ್ನು ಕವಯಿತ್ರಿ ಶೀಲಾ ಗೌಡರ ಮಹಾಯಾನ ಕಾದಂಬರಿಯಲ್ಲಿ ಚೆನ್ನಾಗಿ ದಾಖಲಿಸಿದ್ದಾರೆ ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಲಲಿತಾ ಹೊಸಪ್ಯಾಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾದಾಮಿ
ಕೋವಿಡ್ ವೇಳೆ ಕಾರ್ಮಿಕರು ಮತ್ತು ಇತರರು ಅನುಭವಿಸಿದ ಚಿತ್ರಣಗಳನ್ನು ಕವಯಿತ್ರಿ ಶೀಲಾ ಗೌಡರ ಮಹಾಯಾನ ಕಾದಂಬರಿಯಲ್ಲಿ ಚೆನ್ನಾಗಿ ದಾಖಲಿಸಿದ್ದಾರೆ ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಲಲಿತಾ ಹೊಸಪ್ಯಾಟಿ ಹೇಳಿದರು.ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ನಗರದ ಕಾಲೇಜು ರಸ್ತೆಯ ಶಿವಯೋಗಮಂದಿರದ ಶಾಖಾಮಠದಲ್ಲಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆ ಸಹಶಿಕ್ಷಕಿ ಶೀಲಾ ಶಿವಾನಂದ ಗೌಡರ ಇವರ ಮಹಾಯಾನ ಕಾದಂಬರಿ ಮತ್ತು ಅವ್ಯಕ್ತ ಕಥಾಸಂಕಲನ ಪುಸ್ತಕಗಳ ಬಿಡುಗಡೆ ಹಾಗೂ ಅವಲೋಕನ ಕಾರ್ಯಕ್ರಮವನ್ನು ಅನಾವರಣ ಮಾಡಿ ಮಾತನಾಡಿದರು.
ಮೊದಲ ಬಾರಿಗೆ ಕಾದಂಬರಿ ಬರೆದಿರುವ ಶೀಲಾ ಗೌಡರ ಬರುವ ದಿನಗಳಲ್ಲಿ ಉತ್ತಮ ಕಾದಂಬರಿ, ಕವಿಯಿತ್ರಿಯಾಗಿ ಹೊರಹೊಮ್ಮುತ್ತಾರೆ ಎಂದು ಹೇಳಿದ ಅವರು, ಮಹಾಯಾನ ಕಾದಂಬರಿ ಮತ್ತು ಅವ್ಯಕ್ತ ಕಥಾಸಂಕಲನದಲ್ಲಿ ಮೂಡಿಬಂದಿರುವ ಪ್ರಮುಖ ಸನ್ನಿವೇಶ ಉತ್ತಮವಾಗಿ ವಿವರಿಸಿದರು.ಬೆಂಗಳೂರಿನ ಖ್ಯಾತ ಸಾಹಿತಿ ಡಾ.ರಾಜಶೇಖರ ಮಠಪತಿ (ರಾಗಂ) ಅವಲೋಕನ ಮಾಡಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿನ ಸನ್ನಿವೇಶದಲ್ಲಿ ಮನುಷ್ಯ ಮನುಷ್ಯತ್ವ ಬಿಟ್ಟು ಬದುಕಿದ. ಒಬ್ಬರನ್ನೊಬ್ಬರು ಮುಟ್ಟಿಸಿಕೊಳ್ಳಲಾರದ, ಭೇಟಿಯಾಗದ, ಸ್ಥಿತಿ ನೋಡಿ ಬಹಳ ನೋವು ವ್ಯಕ್ತಪಡಿಸಿದರು. ಅವ್ಯಕ್ತದಲ್ಲಿ ಬರುವ 12 ಕಥೆಗಳನ್ನು ಎಳೆಎಳೆಯಾಗಿ ಬಿಡಿಸಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಹಶಿಕ್ಷಕಿ, ಲೇಖಕಿ ಶೀಲಾ ಶಿವಾನಂದ ಗೌಡರ, ತಾಲೂಕು ಕಸಾಪ ಅಧ್ಯಕ್ಷ ಬಿ.ಎಫ್. ಹೊರಕೇರಿ ಉಪಸ್ಥಿತರಿದ್ದರು. ಇಷ್ಟಲಿಂಗ ಶಿರಶಿ ಸ್ವಾಗತಿಸಿದರು. ಉಜ್ವಲ ಬಸರಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಕವಿಗಳು, ಹಿರಿಯರು, ಸಾಹಿತ್ಯಾಸಕ್ತರು, ಮಹಿಳೆಯರು ಭಾಗವಹಿಸಿದ್ದರು.