ಶಿಕ್ಷಣ ಜ್ಞಾನವನ್ನು ಒದಗಿಸಿದರೆ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳು ಯುವಕರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್ ಎಂ.ಎನ್. ಹೇಳಿದ್ದಾರೆ.

- ಹರಿಹರದ ಸರ್ಕಾರಿ ಕಾಲೇಜಿನಲ್ಲಿ ಸ್ಪರ್ಧೆ ವಿಜೇತರಿಗೆ ಅಭಿನಂದಿಸಿ ಡಾ. ರಮೇಶ್‌

- - -

ಕನ್ನಡಪ್ರಭ ವಾರ್ತೆ ಹರಿಹರ

ಶಿಕ್ಷಣ ಜ್ಞಾನವನ್ನು ಒದಗಿಸಿದರೆ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳು ಯುವಕರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್ ಎಂ.ಎನ್. ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಎನ್‌ಎಸ್‌ಎಸ್, ಇತಿಹಾಸ ವಿಭಾಗ ಮತ್ತು ಕ್ರೀಡಾ ವಿಭಾಗದ ಆಶ್ರಯದಲ್ಲಿ ಸೋಮವಾರ ವಿವಿಧ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ರೀಡೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು, ಸಮಯ ನಿರ್ವಹಣೆ ಮತ್ತು ನಾಯಕತ್ವ ಗುಣದೊಂದಿಗೆ ಜೀವನ ಕೌಶಲ್ಯಗಳನ್ನು ರೂಢಿಸುತ್ತವೆ. ಶಿಕ್ಷಣ ಸಂಸ್ಥೆಗಳ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ದೈಹಿಕ ಆರೋಗ್ಯ, ಭಾವನಾತ್ಮಕ ಯೋಗಕ್ಷೇಮ ಮತ್ತು ಸಾಮಾಜಿಕ ಕೌಶಲ್ಯಗಳು ಸುಸಜ್ಜಿತ ವ್ಯಕ್ತಿಯನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ. ಅಂತಿಮವಾಗಿ ಶೈಕ್ಷಣಿಕ ಕಾರ್ಯಕ್ಷಮತೆ ಭವಿಷ್ಯದ ಯಶಸ್ಸನ್ನು ತಂದುಕೊಡುತ್ತದೆ ಎಂದರು.

ದೈಹಿಕ ಶಿಕ್ಷಣ ನಿರ್ದೇಶಕ ಡಾ.ಚಂದ್ರಶೇಖರ್ ಸಿ. ಮಾತನಾಡಿ, ಶ್ರದ್ಧೆ ರೂಢಿಸಿಕೊಂಡರೆ ಸ್ಥಾನಮಾನ ಗಳಿಕೆ, ಸಾಧನೆ ಮಾಡಲು ಸಾಧ್ಯ. ಆರೋಗ್ಯದ ದೃಷ್ಠಿಯಿಂದ ಕ್ರೀಡೆ ಸಹಕಾರಿಯಾಗುತ್ತದೆ. ಅದರೊಂದಿಗೆ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಬೆಳವಣಿಗೆಗೂ ಕ್ರೀಡಾ ಚಟುವಟಿಕೆ ಸಹಕರಿಸಲಿದೆ ಎಂದರು.

ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ತಿಪ್ಪೇಸ್ವಾಮಿ ಎಚ್. ಮಾತನಾಡಿ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಾಮಾಜಿಕ ಕೌಶಲ್ಯ, ಪರಸ್ಪರ ಸಂಬಂಧಗಳ ವೃದ್ಧಿ, ಸಂವಹನ ಕ್ಷಮತೆ ಹೆಚ್ಚುತ್ತದೆ. ಕ್ರೀಡೆಯಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಸಾಮಾನ್ಯ ಆಸಕ್ತಿಗಳನ್ನು ಹಂಚಿಕೊಳ್ಳಲು ಮತ್ತು ಶಾಶ್ವತ ಸ್ನೇಹ ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

ಕಾಲೇಜಿನ ಐಕ್ಯೂಎಸ್‌ಸಿ ಸಹ ಸಂಯೋಜಕ ಅಬ್ದುಲ್ ಬಷೀರ್, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಗೌರಮ್ಮ.ಎಸ್.ಎಂ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗಂಗರಾಜು ಎಸ್., ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಯೋಗೀಶ್ ಕೆ.ಜೆ. ಉಪಸ್ಥಿತರಿದ್ದರು.

ಬಿ.ಎ. ವಿದ್ಯಾರ್ಥಿನಿ ಅರ್ಪಿತಾ ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಹನುಮಂತಪ್ಪ ಕೆ.ವೈ. ಪ್ರಾಸ್ತಾವಿವಾಗಿ ಮಾತನಾಡಿದರು. ಅಧ್ಯಾಪಕ ಮಲ್ಲಿಕಾರ್ಜುನ ಜವಳಿ ಸ್ವಾಗತಿಸಿ, ರೇಣುಕಾ ಕೆ.ಡಿ. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

- - -

-08HRR.03:

ಪಠ್ಯೇತರ ಚಟುವಟಿಕೆಗಳ ಸ್ಪರ್ಧಾ ವಿಜೇತರಿಗೆ ಅಭಿನಂದಿಸಲಾಯಿತು.