ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಸೋಮವಾರ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‌ಒ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ದಾವಣಗೆರೆ ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
- ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಿಂಪಡೆಯಲು ಎಐಡಿಎಸ್‌ಒ ಆಗ್ರಹ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಸೋಮವಾರ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‌ಒ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ದಾವಣಗೆರೆ ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಎಸ್‌ಡಿಎಂಸಿ ಸದಸ್ಯ ಅಂಜಿನಪ್ಪ ಮಾತನಾಡಿ, ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ 900ಕ್ಕೂ ಸರ್ಕಾರಿ ಶಾಲೆಗಳು ಮುಚ್ಚುವ ಹುನ್ನಾರ ನಡೆಸಿದೆ. ಜಿಲ್ಲೆಯಲ್ಲಿ 243 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳೆಂದು ಗುರುತಿಸಲಾಗಿದೆ. ಮೂರು ತಲೆಮಾರು ಓದಿರುವಂತಹ ಕೋಡಿಹಳ್ಳಿ ಶಾಲೆಯು ಇಂದಿಗೂ ಬಹುತೇಕ ಬಡವರು ಮತ್ತು ಹಾಗೂ ದಲಿತ ಮಕ್ಕಳಿಗೆ ಆಶ್ರಯವಾಗಿದೆ. ಈ ಶಾಲೆ ಮುಚ್ಚಿದರೆ ಪಕ್ಕದ ಹಳ್ಳಿಗೆ ಮಕ್ಕಳನ್ನು ಕಳುಹಿಸುವುದು ಕಷ್ಟ. ನಮ್ಮೂರ ಶಾಲೆ ನಮ್ಮ ಹಕ್ಕು. ಯಾವುದೇ ಕಾರಣಕ್ಕೂ ನಮ್ಮೂರ ಶಾಲೆಯನ್ನು ಪಕ್ಕದ ಊರಿಗೆ ವಿಲೀನಗೊಳಿಸಲು ನಾವು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಹೆಸರಿನಲ್ಲಿ 40 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಬಿಜೆಪಿ ಸರ್ಕಾರ ಕರ್ನಾಟಕದಲ್ಲೇ ಮೊದಲು ಎಂಬಂತೆ ಜಾರಿಗೊಳಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಜನಗಳನ್ನು ಮೂರ್ಖರನ್ನಾಗಿಸುವಂತಹ ಅದೇ ತರಹದ ಹೊಸ ನೀತಿಯನ್ನು ಸರ್ಕಾರ ಖಾಸಗೀಕರಣ ಮಾಡುವ ನೀತಿ ಜಾರಿಗೊಳಿಸಲು ಮುಂದಾಗಿದೆ ಎಂದು ದೂರಿದರು.ಮೊದಲ ಹಂತದಲ್ಲೇ ಎಸ್‌ಎಸ್‌ಎಂ ನಗರ ಉರ್ದು ಮತ್ತು ಎಸ್‌ಎಸ್‌ಎಂ ನಗರ ಕನ್ನಡ ಹಿರಿಯ ಪ್ರಾರ್ಥಮಿಕ ಶಾಲೆ, ಆನಗೋಡು, ಪಲ್ಲಾಗಟ್ಟೆ, ಅಣಬೇರು, ಗುತ್ತೂರು, ಕಕ್ಕರಗೊಳ್ಳ ಸೇರಿದಂತೆ 20 ಸರ್ಕಾರಿ ಶಾಲೆಗಳನ್ನು ಮೊದಲ ಹಂತದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಆಗಿ ಉನ್ನತೀಕರಿಸಲಾಗುತ್ತಿದೆ. ಕಕ್ಕರಗೊಳ್ಳ ಕೆಪಿಎಸ್ ಶಾಲೆ ವ್ಯಾಪ್ತಿಯಲ್ಲಿ ಬರುವಂತಹ ಆವರಗೊಳ್ಳ, ಉರ್ದು, ಕಕ್ಕರಗೊಳ್ಳ ಕ್ಯಾಂಪ್, ಆಂಜನೇಯ ಬಡಾವಣೆ, ಕೋಡಿಹಳ್ಳಿ ನಾಲ್ಕು ಶಾಲೆಗಳು ವಿಲೀನಗೊಳಿಸಲಾಗುವುದು ಎಂದು ತಿಳಿಸಿದರು.
ಶಾಲೆಗಳ ವಿಲೀನಗೊಳಿಸುವ ಮೊದಲು ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಸಮರ್ಪಕ ಅನುದಾನ ಬಿಡುಗಡೆ ಮಾಡಬೇಕು. ಗುಣಮಟ್ಟದ ಶಿಕ್ಷಣ ಕೊಡಲು ಸಮರ್ಪಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ಕೂಡಲೇ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡ ಜಯಣ್ಣ, ಸಂಘಟನೆಯ ಗಂಗಾಧರ, ಅಧ್ಯಕ್ಷ ಹಾಲೇಶ್, ಜಯಣ್ಣ, ಅಂಜಿನಪ್ಪ, ದುರುಗೇಶ್, ಮಂಜುನಾಥ, ಶಿವರಾಜ, ಹಳೆಯ ವಿದ್ಯಾರ್ಥಿಗಳಾದ ಮಧು, ಕಿರಣ್, ಹಾಲೇಶ್, ಆಕಾಶ್, ಪರಶುರಾಮ ಇತರರು ಇದ್ದರು.
- - --8ಕೆಡಿವಿಜಿ36: ದಾವಣಗೆರೆ ತಾಲೂಕು ಕೋಡಿಹಳ್ಳಿಯಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಪ್ರ ತಿಭಟನೆ ನಡೆಯಿತು.