ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದ ಜೀವನ ನಡೆಸಲು ಸಾಧ್ಯವಾಗಿದೆ
ಕಂಪ್ಲಿ: ಭಾರತವು ಧರ್ಮ, ದೇವರು ಹಾಗೂ ದೈವತ್ವವನ್ನು ಜೀವನದ ಅಂಗವಾಗಿ ಅಳವಡಿಸಿಕೊಂಡು ಬಂದ ದೇಶವಾಗಿದ್ದು, ಅದರಿಂದಲೇ ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಶ್ರೀಧರಗಡ್ಡೆಯ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠದ ಶ್ರೀಮರಿ ಕೊಟ್ಟೂರು ದೇವರು ಹೇಳಿದರು.
ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಆದಿ ಜಗದ್ಗುರು ಶ್ರೀರೇಣುಕಾಚಾರ್ಯರ ಜಯಂತ್ಯುತ್ಸವದ ಅಂಗವಾಗಿ ನಡೆದ ಧರ್ಮಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದರು.ಮಾನವ ಜೀವನದಲ್ಲಿ ಧರ್ಮಕ್ಕೆ ಮಹತ್ವದ ಸ್ಥಾನವಿದ್ದು, ಧರ್ಮವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ. ವಿಶೇಷವಾಗಿ ಮಕ್ಕಳಿಗೆ ಬಾಲ್ಯದಲ್ಲಿಯೇ ಧರ್ಮ, ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳನ್ನು ಬೋಧಿಸುವುದು ಅತ್ಯಂತ ಅಗತ್ಯವಾಗಿದೆ. ಮಾರ್ಗದರ್ಶಕರಾದ ಮಠಾಧೀಶರು ನೀಡಿರುವ ತತ್ವಗಳು ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸಮಾನತೆ ಸ್ಥಾಪನೆಯಾಗುತ್ತದೆ ಎಂದು ಹೇಳಿದರು.
ಸನಾತನ ಧರ್ಮದ ಉಳಿವಿಗಾಗಿ ಯುವಪೀಳಿಗೆಗೆ ಧಾರ್ಮಿಕ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ. ಮಠಗಳು ಮತ್ತು ಮಠಾಧೀಶರು ನೀಡಿರುವ ಉಪದೇಶಗಳು, ತತ್ವಗಳು ಹಾಗೂ ಆದೇಶಗಳನ್ನು ಜೀವನದಲ್ಲಿ ಅನುಸರಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಲ್ಯಾಣಚೌಕಿ ಮಠದ ಬಸವರಾಜಶಾಸ್ತ್ರಿ, ಆದಿ ಜಗದ್ಗುರು ಶ್ರೀರೇಣುಕಾಚಾರ್ಯರು ವೀರಶೈವ ಧರ್ಮದ ಸ್ಥಾಪನೆ ಹಾಗೂ ಅದರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಮಹಾನ್ ಸಂತರು ಎಂದು ಹೇಳಿದರು.ಅವರು ಇಷ್ಟಲಿಂಗ ಪೂಜೆ, ಭಕ್ತಿ ಮಾರ್ಗ ಹಾಗೂ ಸಮಾನತೆಯ ತತ್ವಗಳನ್ನು ಸಮಾಜಕ್ಕೆ ಬೋಧಿಸುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸಿದರು. ಅವರ ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಜನತೆ ಅವನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಯಂತ್ಯುತ್ಸವದ ಅಂಗವಾಗಿ ಶ್ರೀರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಧರ್ಮಸಭೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ಭಕ್ತರು ಭಾಗವಹಿಸಿ ಮಹಾನ್ ಸಂತನ ತತ್ವಗಳನ್ನು ಸ್ಮರಿಸಿದರು.ಈ ಸಂದರ್ಭದಲ್ಲಿ ವೀರಶೈವ ಸಮಾಜದ ಪ್ರಮುಖರಾದ ಕೆ.ಎಂ. ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಪಿ. ಮೂಕಯ್ಯಸ್ವಾಮಿ, ವಾಲಿ ಕೊಟ್ರಪ್ಪ, ಎಸ್.ಎಂ. ನಾಗರಾಜ, ಎಸ್.ಎಸ್.ಎಂ. ಚನ್ನಬಸವರಾಜ, ಡಾ. ಶಾರದಾ ಜ. ಹಿರೇಮಠ, ಇಟಗಿ ಬಸವರಾಜಗೌಡ, ಕೆ.ಎಂ. ಬಸವರಾಜಶಾಸ್ತ್ರಿ, ಘನಮಠದಯ್ಯ ಹಿರೇಮಠ, ಕೆ.ಎಂ. ವಾಗೀಶ, ವಿ. ವಿದ್ಯಾಧರ, ಎಲಿಗಾರ ವೆಂಕಟರೆಡ್ಡಿ, ಎಸ್.ಡಿ. ಬಸವರಾಜ, ಯು.ಎಂ. ವಿದ್ಯಾಶಂಕರ, ಅಕ್ಕಮಹಾದೇವಿ ಮಹಿಳಾ ಮಂಡಳಿ ಸದಸ್ಯೆಯರು ಹಾಗೂ ವೀರಶೈವ ಸಮುದಾಯದವರು ಉಪಸ್ಥಿತರಿದ್ದರು.