ಮಕ್ಕಳ ಕೌಶಲ್ಯಾಭಿವೃದ್ಧಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದರಲ್ಲಿ ಶಿಕ್ಷಕರ ಪಾತ್ರ ಅಮೋಘವಾದದ್ದು ಎಂದು ವಿಂಗ್ ಕಮಾಂಡರ್ ಎ. ರಘುನಾಥ್ ತಿಳಿಸಿದರು.
ಹರಿಹರ: ಮಕ್ಕಳ ಕೌಶಲ್ಯಾಭಿವೃದ್ಧಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದರಲ್ಲಿ ಶಿಕ್ಷಕರ ಪಾತ್ರ ಅಮೋಘವಾದದ್ದು ಎಂದು ವಿಂಗ್ ಕಮಾಂಡರ್ ಎ. ರಘುನಾಥ್ ತಿಳಿಸಿದರು.
ನಗರದ ಎಂ.ಕೆ.ಇ.ಟಿ. ಎಲ್.ಕೆ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಾಂಸ್ಕೃತಿಕ ದಿನಾಚರಣೆ ‘ಪ್ರತಿಭಾ ಪ್ರದರ್ಶನ’ ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಡಾ.ಬಿ.ಟಿ.ಅಚ್ಯುತ ಅವರೊಂದಿಗೆ ದೀಪ ಬೆಳಗಿಸಿ ಮಾತನಾಡಿ, ಇಂಥಹ ಚಟುವಟಿಕೆಗಳನ್ನು ಪೋಷಿಸುವಲ್ಲಿ ಶಿಕ್ಷಕರ ಪಾತ್ರ ಅಮೋಘವಾದದ್ದು. ಪೋಷಕರೂ ಇದಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.ಪ್ರಾಂಶುಪಾಲೆ ಅರ್ಚನಾ ಮುಳಗುಂದ್ ಮಾತನಾಡಿ, ಈ ವರ್ಷದ ಸಾಂಸ್ಕೃತಿಕ ದಿನಾಚರಣೆಯಲ್ಲಿ ವಿದ್ಯಾರ್ಥಿಗಳ ಕಲಾತ್ಮಕತೆ, ತಂಡಸಹಕಾರ ಹಾಗೂ ನಮ್ಮ ದೇಶದ ಅಮೂಲ್ಯ ಸಂಸ್ಕೃತಿ, ಪರಂಪರೆಯ ಮೇಲಿನ ಗೌರವವನ್ನು ಮತ್ತೊಂದು ಮಟ್ಟಕ್ಕೆ ಏರಿಸುವ ಮೂಲಕ ಸ್ಮರಣೀಯ ಮತ್ತು ಸಮೃದ್ಧ ಅನುಭವವಾಗಿ ಉಳಿಯುವಂತೆ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಸೃಜನಶೀಲತೆಗೆ ಹೃತ್ಪೂರ್ವಕ ಶ್ಲಾಘನೆ ಸಲ್ಲಿಸಿ, ಶಿಕ್ಷಕರ ಸಂಕಲ್ಪಬದ್ಧ ಶ್ರಮ, ಪೋಷಕರ ಅಚಲ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.ಭಾವಪೂರ್ಣ ಪ್ರಾರ್ಥನೆ ಮತ್ತು ಮನಮೋಹಕ ಆಮಂತ್ರಣ ನೃತ್ಯವು ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವೈಭವಕ್ಕೆ ಮುನ್ನುಡಿಯಾಯಿತು.
ಎಲ್ಲಾ ವಿದ್ಯಾರ್ಥಿಗಳು ಅಪಾರ ಉತ್ಸಾಹ ಮತ್ತು ಆತ್ಮವಿಶ್ವಾಸದೊಂದಿಗೆ ಕಣ್ಮನ ಸೆಳೆಯುವ ನೃತ್ಯ ಪ್ರದರ್ಶಿಸಿದರು. ಮೊದಲ ದಿನದಂದು ‘ಹಳ್ಳಿ ಸೊಗಡು’ ಶೀರ್ಷಿಕೆ ಅಡಿಯಲ್ಲಿ ಹಳ್ಳಿ ಜೀವನದ ವಿವಿಧ ರೂಪಕಗಳು, ಕಿರುನಾಟಕ ಹಾಗೂ ನೃತ್ಯಗಳ ಬಣ್ಣಗಳಿಂದ ಕಂಗೊಳಿಸಿತು. ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನದಲ್ಲಿ ಭಾರತದ ವೈವಿಧ್ಯಮಯ ಸಂಸ್ಕೃತಿ, ಹಳ್ಳಿ ಜೀವನ, ಹಬ್ಬ, ಸಂಪ್ರದಾಯಗಳು ಮತ್ತು ಪ್ರಾದೇಶಿಕ ಕಲಾರೂಪಗಳ ನೈಜ ಚಿತ್ರಣಗಳು ನೋಡುಗರ ಗಮನ ಸೆಳೆದವು. ಮಕ್ಕಳ ಪ್ರತಿಭೆ, ಶಿಸ್ತು ಮತ್ತು ವೇದಿಕೆಯಲ್ಲಿ ನೃತ್ಯ ಅನಾವರಣಕ್ಕೆ ಪ್ರೇಕ್ಷಕರು ಮನಸಾರೆ ಚಪ್ಪಾಳೆ ತಟ್ಟಿದರು.ವಿಶೇಷ ಆಕರ್ಷಣೆಯಾಗಿ ವಿಷಯಾಧಾರಿತ ಪ್ರದರ್ಶನಗಳು ಗಮನ ಸೆಳೆದವು. ಹಳ್ಳಿ ಜೀವನದ ನಿತ್ಯದ ಸಂಗತಿಗಳು, ಸಾಂಪ್ರದಾಯಿಕ ಆಟಗಳ ಝಲಕ್ , ಶಿಕ್ಷಣದ ಮಹತ್ವ ಸಾರುವ ನಾಟಕ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಅರ್ಥಪೂರ್ಣ ಸಂದೇಶಗಳನ್ನು ಒಳಗೊಂಡಿತ್ತು.
ಎರಡನೇ ದಿನ ಭಾರತದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಅದಕ್ಕೆ ತಕ್ಕಂತೆ ವಿವರಣೆ ಮನಮೋಹಕವಾಗಿ ಮೂಡಿಬಂದವು. ಕಾರ್ಯಕ್ರಮ ಪ್ರಮುಖ ಆಕರ್ಷಣೆ ‘ಆಪರೇಷನ್ ಸಿಂದೂರ’'''' ಕಿರುನಾಟಕ ಕಾರ್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಿತು.ಮುಖ್ಯ ಶಿಕ್ಷಕಿ ಪರಿಮಳ ಕೆ., ನಳಿನಿ ಎ.ರಘುನಾಥ, ಡಾ.ಬಿ.ಟಿ.ಅಚ್ಯುತ ಭಾಗವಹಿಸಿದ್ದರು. ಎರಡು ದಿನಗಳ ಈ ಸಾಂಸ್ಕೃತಿಕ ಮಹೋತ್ಸವ ಹಿನ್ನೆಲೆ ಶಾಲಾ ಆವರಣವೇ ಹರ್ಷೋದ್ಘಾರದ ಬಣ್ಣಗಳಿಂದ ಕಂಗೊಳಿಸಿ, ವಿದ್ಯಾರ್ಥಿಗಳ ಉತ್ಸಾಹ, ಪೋಷಕರ ಹೆಮ್ಮೆಯ ನಗುವಿನಿಂದ ತುಂಬಿ ತುಳುಕಿತು.
ಶಿಕ್ಷಕಿಯರಾದ ಪಾವನ, ಕಾಂಚನಾ, ಶಿಕ್ಷಕರಾದ ಜಗನ್ನಾಥ ರಾವ್, ನಾಗರಾಜ್ ಬಾರ್ಕಿ ನಿರೂಪಿಸಿದರು.