ನರಸಿಂಹರಾಜಪುರಮಹಿಳೆಯರು ಟೈಲರಿಂಗ್ ವೃತ್ತಿ ನಡೆಸಿದರೆ ನಿಯಮಿತ ಆದಾಯ ಗಳಿಸಬಹುದು ಎಂದು ಮಹಿಳಾ ಜ್ಞಾನ ವಿಕಾಸ ಕೇಂದ್ರದ ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕುಗಳ ಸಮನ್ವಯಾಧಿಕಾರಿ ಉಷಾ ತಿಳಿಸಿದರು.
- ಹಿಳುವಳ್ಳಿಯಲ್ಲಿ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ಟೈಲರಿಂಗ್ ತರಬೇತಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ,ನರಸಿಂಹರಾಜಪುರಮಹಿಳೆಯರು ಟೈಲರಿಂಗ್ ವೃತ್ತಿ ನಡೆಸಿದರೆ ನಿಯಮಿತ ಆದಾಯ ಗಳಿಸಬಹುದು ಎಂದು ಮಹಿಳಾ ಜ್ಞಾನ ವಿಕಾಸ ಕೇಂದ್ರದ ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕುಗಳ ಸಮನ್ವಯಾಧಿಕಾರಿ ಉಷಾ ತಿಳಿಸಿದರು.
ಭಾನುವಾರ ತಾಲೂಕಿನ ಹಿಳುವಳ್ಳಿ ಗಣಪತಿ ಪೆಂಡಾಲ್ ನಲ್ಲಿ ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಮಹಿಳೆಯರಿಗೆ ನಡೆದ ಟೈಲರಿಂಗ್ ತರಬೇತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಕಾರ್ಯಕ್ರಮ ರೂಪಿಸಿದೆ. ಮಹಿಳಾ ಜ್ಞಾನ ವಿಕಾಸ ಕೇಂದ್ರದ ಮೂಲಕ ಮಹಿಳೆ ಯರ ಆರ್ಥಿಕ ಅನುಕೂಲ, ಸ್ವಾವಲಂಬನೆಗಾಗಿ ಟೈಲರಿಂಗ್ ವೃತ್ತಿ ತರಬೇತಿ ಸೇರಿದಂತೆ ಹಲವಾರು ತರಬೇತಿ ನಡೆಸು ತ್ತಿದೆ. ಮಹಿಳೆಯರು ತಮ್ಮ ಮನೆ ಕೆಲಸದ ಜೊತೆಗೆ ಆರ್ಥಿಕವಾಗಿ ಲಾಭ ತರುವ ಸಣ್ಣ ಉದ್ಯಮ ನಡೆಸಬಹುದು ಎಂದರು.ಧ.ಗ್ರಾ.ಯೋಜನೆ ಎನ್.ಆರ್.ಪುರ ವಲಯ ಮೇಲ್ವೀಚಾರಕಿ ಸುಸೀಲ ಮಾತನಾಡಿ, ಬಹಳ ಹಿಂದಿನಿಂದಲೂ ಮಹಿಳೆಯರು ಟೈಲರಿಂಗ್ ವೃತ್ತಿ ನಡೆಸಿ ಆದಾಯ ಗಳಿಸುತ್ತಿದ್ದರು. ಕಾಲ ಕ್ರಮೇಣ ಸಿದ್ದ ಉಡುಪು ಬಂದಿರುವುದರಿಂದ ಟೈಲರಿಂಗ್ ವೃತ್ತಿ ಸ್ವಲ್ಪ ಹಿನ್ನೆಡೆ ಅನುಭವಿಸಬೇಕಾಯಿತು. ನಾವು ಧರಿಸುವ ಬಟ್ಟೆನಮ್ಮ ವ್ಯಕ್ತಿತ್ವ ರೂಪಿಸುತ್ತದೆ. ಮಹಿಳೆಯರು ತಮ್ಮ ಮನೆಗೆ ಬೇಕಾಗುವ ಗೃಹ ಉತ್ಪನ್ನಗಳನ್ನು ತಾವೇ ತಯಾರಿಸಿ ಅದನ್ನು ಇತರರಿಗೂ ನೀಡಿದರೆ ಕುಟುಂಬದ ಆದಾಯ ಹೆಚ್ಚಿಸಿ ಕೊಳ್ಳಬಹುದು ಎಂದರು.
ಶೌರ್ಯ ವಿಪತ್ತು ಘಟಕದ ಸದಸ್ಯ ಸುಧಾಕರ್ ಮಾತನಾಡಿ, ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸಾದ ಮಹಿಳಾ ಜ್ಞಾನ ವಿಕಾಸ ಕೇಂದ್ರಗಳಲ್ಲಿ ಮಹಿಳೆಯರ ಪ್ರತಿಭೆ ಗುರುತಿಸಲು ಕೌಶಲ್ಯ ತರಬೇತಿಗಳು ತುಂಬಾ ಉಪಯುಕ್ತವಾಗಿದೆ. ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ಆಧುನಿಕ ಜಗತ್ತಿನಲ್ಲಿ ಎಲ್ಲಾ ರಂಗದಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ ಎಂದರು.ಹಿಳುವಳ್ಳಿ ಗಣಪತಿ ಪೆಂಡಾಲ್ ಸಮಿತಿ ಸದಸ್ಯ ನಿತ್ಯಾನಂದ ಉದ್ಘಾಟಿಸಿದರು. ಸಭೆಯಲ್ಲಿ ನವ ಜೀವನ ಸಮಿತಿ ಸದಸ್ಯರಾದ ಅನಿಲ್, ಅಕ್ಷತ,ಒಕ್ಕೂಟದ ಅಧ್ಯಕ್ಷೆ ಪುಷ್ಪ, ಟೈಲರಿಂಗ್ ತರಬೇತಿ ಶಿಕ್ಷಕಿ ರಸೀನಾ, ಸೇವಾ ಪ್ರತಿನಿಧಿಗಳಾದ ಶಸಿಕಲಾ, ವಿಮಲ, ಭಾನುಮತಿ, ಸುನೀತ, ನಿರ್ಮಲ,ಮಂಜಳಾ ಇದ್ದರು.ತರಬೇತಿಯಲ್ಲಿ 30 ಸದಸ್ಯರು ಪಾಲ್ಗೊಂಡಿದ್ದರು.