ಕನ್ನಡಪ್ರಭ ವಾರ್ತೆ ಪಾಂಡವಪುರ

ಪುರಾಣ ಪ್ರಸಿದ್ಧ ತಾಲೂಕಿನ ಬೇಬಿಬೆಟ್ಟದಲ್ಲಿ ನಡೆಯುವ ಭಾರೀ ದನಗಳ ಜಾತ್ರಾ ಮಹೋತ್ಸವ ಫೆ.15ರಿಂದ 23ರವೆರೆಗೆ ನಡೆಯಲಿದ್ದು, ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರಾಸುಗಳು ಆಗಮಿಸಲಿವೆ.

ಮೈಸೂರಿನ ಅರಸರ ಆಳ್ವಿಕೆಯ ಕಾಲದಿಂದಲೂ ಬೇಬೆ ಬೆಟ್ಟದ ಅಮೃತ ಮಹಲ್ ಕಾವಲು (ಈಗಿನ ಬೇಬಿಬೆಟ್ಟ) ಪ್ರದೇಶದಲ್ಲಿ ಪ್ರತಿ ವರ್ಷವು ದನಗಳ ಜಾತ್ರೆ ನಡೆಸಿಕೊಂಡು ಬರಲಾಗುತ್ತಿತ್ತು. ಇದರ ಮಧ್ಯೆ ಕೆಲವು ವರ್ಷಗಳ ಕಾಲ ಜಾತ್ರೆ ಸ್ಥಗಿತಗೊಂಡಿತ್ತು. ಇದಾದ ಬಳಿಕ ಸಿ.ಎಸ್.ಪುಟ್ಟರಾಜು ಅವರು ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ನಂತರ ಬೇಬಿಬೆಟ್ಟದ ದನಗಳ ಜಾತ್ರೆ ಆರಂಭಿಸುವ ಮೂಲಕ ಜಾತ್ರೆಗೆ ಮರುಜೀವ ನೀಡಿದರು. ಅಲ್ಲಿಂದ ಆರಂಭಗೊಂಡ ಜಾತ್ರೆಯೂ ಪ್ರತಿವರ್ಷ ಕ್ಷೇತ್ರದ ಶಾಸಕ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ.

ಫೆ.15ರಿಂದ ಜಾತ್ರೆ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ನಾನಾ ಭಾಗಗಳಿಂದ ರೈತರು ರಾಸುಗಳನ್ನು ಹೊಡೆದುಕೊಂಡು ಬರುತ್ತಿದ್ದಾರೆ. ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ ಚಿನ್ನದ ಬಹುಮಾನ ನೀಡುವ ಮೂಲಕ ರೈತರನ್ನು ಪ್ರೋತ್ಸಾಹಿಸುತ್ತಿರುವ ರಾಜ್ಯದ ಏಕೈಕ ಜಾತ್ರೆಯಾಗಿರುವುದರಿಂದ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ರಾಸುಗಳು ಬಂದು ಸೇರುವ ನಿರೀಕ್ಷೆ ಹೊಂದಲಾಗಿದೆ.

ಲಕ್ಷಾಂತರ ಬೆಲೆ ಬಾಳುವ ಹಳ್ಳಿಕಾರ್, ಹೋರಿ, ಕರುಗಳು, ನಾಟಿ ಹಸುಗಳು, ಎತ್ತುಗಳು, ಟಗರು, ಕುರಿಗಳು ಸಹ ಭಾಗವಹಿಸುವುದಿ ಇಲ್ಲಿನ ವಿಶೇಷವಾಗಿದೆ. ಜಾತ್ರಾ ಮೈದಾನದಲ್ಲಿ ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ರೈತರು ಜಾತ್ರೆ ಮೈದಾನದಲ್ಲಿ ಶಾಮಿಯಾನ, ಟೆಂಟ್ ನಿರ್ಮಿಸಿಕೊಂಡು ರಾಸುಗಳನ್ನು ಕಟ್ಟುತ್ತಿದ್ದಾರೆ. ಇನ್ನೂ ಕೆಲವು ರೈತರು ಮರದ ನೆರಳಿನಲ್ಲಿ ರಾಸುಗಳನ್ನು ಕಟ್ಟುತ್ತಿದ್ದು, ಮಂಡ್ಯ, ಮೈಸೂರು, ಹಾಸನ, ರಾಮನಗರ, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ನಾನಾ ಜಿಲ್ಲೆಗಳಿಂದ ರಾಸುಗಳು ಆಮಿಸಲಿವೆ.


ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜಾತ್ರೆಗೆ ಸಕಲ ಸಿದ್ಧತೆ ನಡೆಸಿಕೊಳ್ಳಲಾಗಿದೆ. ಸುತ್ತಮತ್ತಲಿನ ಗ್ರಾಪಂ ಅಧಿಕಾರಿಗಳು, ವಿವಿಧ ಇಲಾಖೆಗಳ ಆರ್ಥಿಕ ನೆರವಿನ ಜತೆಗೆ ಸ್ಥಳೀಯ ಮುಖಂಡರ ಸಹಕಾರಪಡೆದು ಜಾತ್ರೆಯನ್ನು ನಡೆಸಲಾಗುತ್ತಿದೆ. ನೂರಾರು ಸಂಖ್ಯೆಯಲ್ಲಿ ಜಾತ್ರೆಗೆ ಸಾರ್ವಜನಿಕರು ಆಗಮಿಸಲಿದ್ದಾರೆ.

ಜಾತ್ರೆಗೆ ಆಗಮಿಸುವ ರೈತರ ಮನರಂಜನೆಗಾಗಿ ಪ್ರತಿನಿತ್ಯ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ಕ್ರೀಡಾಕೂಟ, ವಸ್ತುಪ್ರದರ್ಶನ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳ ಕುರಿತು ರೈತರಿಗೆ ಅರಿವು ಮೂಡಿಸಲಾಗುತ್ತಿದೆ.

ಫೆ.15ರಂದು ಸಂಜೆ 4 ಗಂಟೆಗೆ ಬೇಬಿಬೆಟ್ಟ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪುಸ್ತಕಮನೆ ಅಂಕೇಗೌಡರು ಚಾಲನೆ ನೀಡಲಿದ್ದಾರೆ. ಬೇಬಿಬೆಟ್ಟದ ಶ್ರೀರಾಮಯೋಗಿಶ್ವರಮಠದ ಪೀಠಾಧ್ಯಕ್ಷ ಶ್ರೀಶಿವಬಸವ ಸ್ವಾಮೀಜಿ, ಬೇಬಿಗ್ರಾಮದ ದುರ್ದಂಡೇಶ್ವರ ಮಠದ ಪೀಠಾಧ್ಯಕ್ಷ ಶ್ರೀತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದಾರೆ. ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ಜಿಲ್ಲಾಕಾರಿ ಡಾ.ಕುಮಾರ, ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಎಸಿ ಶ್ರೀನಿವಾಸ್ ಇತರರು ಭಾಗವಹಿಸಲಿದ್ದಾರೆ.

ಫೆ.17ರಂದು ಮಂಗಳವಾರ ಬೆಳಗ್ಗೆ 11ಗಂಟೆಗೆ ಮಹಿಳಾ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಸಂಜೆ 7 ಗಂಟೆಗೆ ಶಿವಾರ ಉಮೇಶ್ ಅವರಿಂದ ಸಂಗೀತ ಕಾರ್ಯಕ್ರಮ. ಫೆ.19ರಂದು ಬೆಳಗ್ಗೆ 9 ಗಂಟೆಗೆ ಉಚಿತ ಸರಳ ಸಾಮೂಹಿಕ ವಿವಾಹ ನಡೆಯಲಿದೆ. ಫೆ.22ರಂದು ಶ್ರೀ ಸಿದ್ದಲಿಂಗೇಶ್ವರ-ಮಹದೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ. ಫೆ.23ರಂದು ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಗುವುದು.