ಪಡಿತರ ವಿತರಣೆಯಲ್ಲಿ ಲೋಪವಿಲ್ಲ ಎಂದ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ

| Published : Jul 01 2025, 12:48 AM IST

ಸಾರಾಂಶ

ಆಹಾರ ಗೋದಾಮಿನಿಂದ ನೀಡುತ್ತಿರುವ ಅಕ್ಕಿಯ ಚೀಲದ ತೂಕ ಮತ್ತು ಅಳತೆ ಸರಿಯಾಗಿದ್ದು, ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ವಿತರಣೆ ಮಾಡಲಾಗುತ್ತಿದೆ ಎಂದು ತಾಲೂಕು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದ ಗೌರವಾಧ್ಯಕ್ಷ ಕುಶಾವರ ನಾಗರಾಜು ತಿಳಿಸಿದರು. ಗೋದಾಮಿನಿಂದ ಅಕ್ಕಿ ವಿತರಣೆ ಮಾಡುವಾಗ ಸರಿಯಾದ ಪ್ರಮಾಣದಲ್ಲಿ ತೂಕ ಮಾಡುವುದಲ್ಲದೆ ತಮ್ಮಿಂದ ಸಹಿಯನ್ನು ಕೂಡ ಹಾಕಿಸಿಕೊಳ್ಳಲಾಗುತ್ತದೆ. ಒಂದು ವೇಳೆ ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸವಾದರೆ ನಾವು ಗ್ರಾಹಕರಿಗೆ ಹೇಗೆ ಅಕ್ಕಿಯನ್ನು ವಿತರಣೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಆಹಾರ ಗೋದಾಮಿನಿಂದ ನೀಡುತ್ತಿರುವ ಅಕ್ಕಿಯ ಚೀಲದ ತೂಕ ಮತ್ತು ಅಳತೆ ಸರಿಯಾಗಿದ್ದು, ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ವಿತರಣೆ ಮಾಡಲಾಗುತ್ತಿದೆ ಎಂದು ತಾಲೂಕು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದ ಗೌರವಾಧ್ಯಕ್ಷ ಕುಶಾವರ ನಾಗರಾಜು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಹಾರ ನಿಗಮದ ಗೋದಾಮಿನಲ್ಲಿ ನ್ಯಾಯ ಬೆಲೆ ಅಂಗಡಿಗಳಿಗೆ ವಿತರಣೆಯಾಗುವ ಅನ್ನಭಾಗ್ಯ ಯೋಜನೆಯ ಪಡಿತರ ತೂಕದಲ್ಲಿ ವಂಚನೆ ನಡೆಯುತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಆಹಾರ ಇಲಾಖೆಯ ಶಿರಸ್ತೇದಾರ್ ಗೀತಾಂಜಲಿ ವಿಫಲರಾಗಿದ್ದು, ಇವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಸರ್ಕಾರಿ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದಮೂರ್ತಿ ಇತ್ತೀಚೆಗೆ ನಡೆದ ತಾಲೂಕು ಪಂಚಾಯಿತಿ ಸಭೆಯಲ್ಲಿ ಆರೋಪಿಸಿದ್ದರು. ಆದರೆ ಗೋದಾಮಿನಿಂದ ಅಕ್ಕಿ ವಿತರಣೆ ಮಾಡುವಾಗ ಸರಿಯಾದ ಪ್ರಮಾಣದಲ್ಲಿ ತೂಕ ಮಾಡುವುದಲ್ಲದೆ ತಮ್ಮಿಂದ ಸಹಿಯನ್ನು ಕೂಡ ಹಾಕಿಸಿಕೊಳ್ಳಲಾಗುತ್ತದೆ. ಒಂದು ವೇಳೆ ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸವಾದರೆ ನಾವು ಗ್ರಾಹಕರಿಗೆ ಹೇಗೆ ಅಕ್ಕಿಯನ್ನು ವಿತರಣೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ತಹಸೀಲ್ದಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ನ್ಯಾಯಬೆಲೆ ಅಂಗಡಿಗಳಿಂದ ಗ್ರಾಹಕರಿಗೆ ಯಾವುದೇ ರೀತಿ ತೊಂದರೆ ಆಗಬಾರದು, ಅಲ್ಲದೆ ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸ ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಗೋದಾಮಿನಲ್ಲೂ ಅಕ್ಕಿ ವಿತರಣೆಯ ತೂಕದಲ್ಲಿ ಲೋಪ ಕಂಡುಬಂದರೆ ತಮ್ಮ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿರುತ್ತಾರೆ. ಈ ಬಗ್ಗೆ ಸತ್ಯಾಂಶ ತಿಳಿಯದೆ ಗ್ಯಾರಂಟಿ ಅಧ್ಯಕ್ಷರು ಆರೋಪ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎನ್ ಅನಂತು, ಉಪಾಧ್ಯಕ್ಷ ತಿಮ್ಮೇಗೌಡ, ಸದಸ್ಯರಾದ ಶಿವಣ್ಣ, ಶಂಭುಗೌಡ ಇದ್ದರು.