5 ಮಿನಿ ಗ್ಯಾಸ್ ಸಿಲಿಂಡರ್ ಬಾಂಬ್ ಸ್ಫೋಟದ ಕುರಿತು ಬೆದರಿಕೆ
ಕನ್ನಡಪ್ರಭ ವಾರ್ತೆ ಚಾಮರಾಜನಗರದೇಶಾದ್ಯಂತ ಹುಸಿ ಬಾಂಬ್ ಬೆದರಿಕೆ ಸಂದೇಶಗಳ ಹಾವಳಿ ಮುಂದುವರೆದಿದ್ದು, ಚಾಮರಾಜನಗರಕ್ಕೂ ಇದು ಹಬ್ಬಿದೆ. 26/11 ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ಹೆಸರಿನಲ್ಲಿ ಕಿಡಿಗೇಡಿಗಳು ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಬೆದರಿಕೆ ಸಂದೇಶ ಕಳುಹಿಸಿರುವ ಘಟನೆಯು ಬುಧವಾರ ನಡೆದಿದೆ.
AJJMAL. KASAB@ATOMICMAIL. IO ಎಂಬ ಇ-ಮೇಲ್ ವಿಳಾಸದಲ್ಲಿ ಬೆದರಿಕೆ ಸಂದೇಶ ಬಂದಿದ್ದು, ಅದರಲ್ಲಿ ‘ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಅಲ್ಲಿನ ಪತ್ರಕರ್ತರು ಉಧಯನಿಧಿ ಸ್ಟಾಲಿನ್ ಪರ ಕೆಲಸ ಮಾಡಿದ್ದರು. ಅವರಿಗೆ ಬಾಲಕಿಯರನ್ನು ಪೂರೈಸಲಾಗಿತ್ತು’ ಎಂಬ ಒಕ್ಕಣೆಯಿದೆ.ಜೊತೆಗೆ ಮಾಧ್ಯಮದವರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ನ್ಯಾಯ ಸಿಕ್ಕಿಲ್ಲ. ಆದ್ದರಿಂದ ತುಕ್ಕು ಹಿಡಿದ ಮೊಳೆಗಳನ್ನ ಜೋಡಿಸಲಾದ 5 ಮಿನಿ ಗ್ಯಾಸ್ ಸಿಲಿಂಡರ್ ಬಾಂಬ್‌ಗಳು ಮಧ್ಯಾಹ್ನ 2.30ಕ್ಕೆ ನ್ಯಾಯಾಲಯದಲ್ಲಿ ಸ್ಫೋಟಗೊಳ್ಳಲಿದೆ’ ಎಂಬ ಸಂದೇಶ ಕಳುಹಿಸಲಾಗಿದೆ.
ಘಟನೆ ಸಂಬಂಧ ತಕ್ಷಣವೇ ಕಾರ್ಯಪ್ರವೃತ್ತರಾದ ಬಾಂಬ್ ನಿಷ್ಕ್ರಿಯ ದಳ, ಪೊಲೀಸ್ ಇಲಾಖೆ, ಶ್ವಾನದಳ ಕೋರ್ಟ್ ಆವರಣಕ್ಕೆ ಧಾವಿಸಿ, ಸಂಪೂರ್ಣ ಪರಿಶೀಲನೆ ನಡೆಸಿದೆ.
ಈ ವೇಳೆ ಎಲ್ಲರೂ ಕೋರ್ಟ್‌ನಿಂದ ಹೊರಬಂದಿದ್ದಾರೆ. ಸಂಪೂರ್ಣ ಪರಿಶೀಲನೆ ನಂತರ ಬೆದರಿಕೆ ಸಂದೇಶ ಹುಸಿ ಎಂದು ಖಾತ್ರಿಪಡಿಸಲಾಗಿದೆ.