ಬಿಜೆಪಿ ಸಂಸದ ಡಾ। ಕೆ.ಸುಧಾಕರ್ ಅವರು ವಿಜಯವಾಡದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದು, ಕೃಷ್ಣಾ ನದಿ ನೀರು ಹಂಚಿಕೆಯ ಸಾಧ್ಯತೆಗಳ ಕುರಿತು ಮಾತುಕತೆ ನಡೆಸಿದರು.
ಚಿಕ್ಕಬಳ್ಳಾಪುರ : ಬಿಜೆಪಿ ಸಂಸದ ಡಾ। ಕೆ.ಸುಧಾಕರ್ ಅವರು ವಿಜಯವಾಡದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದು, ಕೃಷ್ಣಾ ನದಿ ನೀರು ಹಂಚಿಕೆಯ ಸಾಧ್ಯತೆಗಳ ಕುರಿತು ಮಾತುಕತೆ ನಡೆಸಿದರು.
ಎಕ್ಸ್ ಖಾತೆಯಲ್ಲಿ ಮಾಹಿತಿ
ಈ ಬಗ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಂಗಳವಾರ ವಿಜಯವಾಡದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದೆ. ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರ ದೀರ್ಘಕಾಲದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅವರೊಂದಿಗೆ ಮಾತುಕತೆ ನಡೆಸಿದೆ. ಈ ಸಂಬಂಧ ಕೃಷ್ಣಾ ನದಿ ನೀರು ಹಂಚಿಕೆಯ ಸಾಧ್ಯತೆಗಳ ಕುರಿತು ಫಲಪ್ರದ ಚರ್ಚೆ ನಡೆಸಿದೆ. ನಮ್ಮ ಬಯಲುಸೀಮೆ ಭಾಗದ ಜನರ ನೀರಿನ ಭದ್ರತೆ ನನ್ನ ಪಾಲಿಗೆ ಕೇವಲ ಕರ್ತವ್ಯವಲ್ಲ, ಅತ್ಯಂತ ಮಹತ್ವದ ಬದ್ಧತೆಯಾಗಿದೆ. ಈ ನಿಟ್ಟಿನಲ್ಲಿ ಚಂದ್ರಬಾಬು ನಾಯ್ಡು ಅವರೊಂದಿಗೆ ನಡೆದ ಸಕಾರಾತ್ಮಕ ವಿಚಾರ ವಿನಿಮಯ ಹೊಸ ಭರವಸೆ ಮೂಡಿಸಿದೆ.
ಅಮೂಲ್ಯ ಅನುಭವಗಳನ್ನು ತಿಳಿದುಕೊಳ್ಳುವ ಅವಕಾಶ
ಮಾತುಕತೆಯ ವೇಳೆ, ಅವಿಭಜಿತ ಆಂಧ್ರಪ್ರದೇಶದಲ್ಲಿ 1996-97ರ ಅವಧಿಯಲ್ಲಿ ಅವರು ಜಾರಿಗೆ ತಂದ ದೂರದೃಷ್ಟಿಯ ಸೂಕ್ಷ್ಮ ನೀರಾವರಿ ಯೋಜನೆಗಳ ಅಮೂಲ್ಯ ಅನುಭವಗಳನ್ನು ತಿಳಿದುಕೊಳ್ಳುವ ಅವಕಾಶ ದೊರೆಯಿತು.
ಹೈದರಾಬಾದ್ ನ್ನು ಜಾಗತಿಕ ಮಟ್ಟದ ಐಟಿ ಹಬ್ ಆಗಿ ರೂಪಿಸುವಲ್ಲಿನ ಅವರ ಪಾತ್ರ ಹಾಗೂ ಅಮರಾವತಿ ಅಭಿವೃದ್ಧಿಯ ಕುರಿತ ಅವರ ದೂರದೃಷ್ಟಿಯ ಯೋಜನೆಗಳು, ಅವರ ದಕ್ಷ ಆಡಳಿತ ಮತ್ತು ದೀರ್ಘಕಾಲೀನ ದೃಷ್ಟಿಕೋನದ ಮಹತ್ವವನ್ನು ಅರಿಯಲು ನನಗೆ ಈ ಭೇಟಿ ಸಹಾಯಕವಾಯಿತು. ನಮ್ಮ ಭಾಗದ ಜನರ ಬಹುದಿನಗಳ ಕನಸಾದ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಸಾಕಾರಗೊಳಿಸಲು ನಾನು ಸಕಲ ರೀತಿಯಲ್ಲೂ ಶ್ರಮಿಸುತ್ತಿದ್ದೇನೆ. ಬಯಲುಸೀಮೆಯ ಜನರ ನೀರಿನ ಹಕ್ಕಿಗಾಗಿ ನನ್ನ ಹೋರಾಟ ಮತ್ತು ಪ್ರಯತ್ನ ನಿರಂತರ ಎಂದು ಸಾಮಾಜಿಕ ತಾಣವಾದ ತಮ್ಮ ಎಕ್ಸ್ ನಲ್ಲಿ ತಿಳಿಸಿದ್ದಾರೆ.