ಕನ್ನಡಪ್ರಭ ವಾರ್ತೆ ಗೋಕಾಕ
ಜಿಲ್ಲೆಯಲ್ಲಿ ಹಲವು ಸಕ್ಕರೆ ಕಾರ್ಖಾನೆಗಳು ದಿವಾಳಿಯಾಗಿ ಬಂದ್ ಆಗಿವೆ. ಆದರೆ, ಅವುಗಳ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಯಾರು ಬಂದ್ ಮಾಡಿದರು, ಏಕೆ ಬಂದ್ ಮಾಡಿದರು ಎಂಬುದನ್ನು ಯಾರೂ ಕೇಳುತ್ತಿಲ್ಲ. ಘಟಪ್ರಭಾ ಸಕ್ಕರೆ ಕಾರ್ಖಾನೆಯೂ ದಿವಾಳಿಯಾಗಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಬೆಮುಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ನಗರದ ಹೊರ ವಲಯದಲ್ಲಿರುವ ಪ್ರಭಾ ಶುಗರ್ಸ್‌ನ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಸೋಮವಾರ ನಡೆದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನೌಕರರು ಹಾಗೂ ಕಾರ್ಮಿಕರ ಸಭೆಯಲ್ಲಿ ಅವರು ಮಾತನಾಡಿದರು. ಘಟಪ್ರಭಾ ಕಾರ್ಖಾನೆ ಹಳೆಯದಾಗಿದ್ದರೂ ರೈತರ ಹಿತಾಸಕ್ತಿ ಕಾಪಾಡಿಕೊಂಡು ಉತ್ತಮವಾಗಿ ನಡೆಸಲಾಗುತ್ತಿದೆ. ಪ್ರಸ್ತುತ 3,500 ಟನ್ ಕಬ್ಬು ನುರಿಸುವ ಸಾಮರ್ಥ್ಯವಿದ್ದು, ಮುಂದಿನ ದಿನಗಳಲ್ಲಿ ಅದನ್ನು 10 ಸಾವಿರ ಟನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಕಾರ್ಮಿಕರು ಹಾಗೂ ರೈತರ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ಕಾರ್ಖಾನೆಯ ಅಭಿವೃದ್ಧಿಗಾಗಿ ಬೀರೇಶ್ವರ ಬ್ಯಾಂಕಿನಲ್ಲಿ ನನ್ನ ಸ್ವಂತ ಆಸ್ತಿಯನ್ನು ಅಡವಿಟ್ಟು ಸುಮಾರು ₹70 ಕೋಟಿ ಸಾಲ ಪಡೆದಿದ್ದೇನೆ. ರೈತರಿಗೆ ಯಾವುದೇ ರೀತಿಯ ಮೋಸ ಮಾಡುವ ಉದ್ದೇಶವಿಲ್ಲ. ರೈತರ ವಿಶ್ವಾಸ ಉಳಿಸಿಕೊಂಡು ಕಾರ್ಖಾನೆಯನ್ನು ಮುನ್ನಡೆಸಲಾಗುವುದು. ಇಂತಹ ಸಂದರ್ಭದಲ್ಲಿ ಕಾರ್ಖಾನೆಯ ಬಗ್ಗೆ ಸುಳ್ಳು ಪ್ರಚಾರ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ರೈತರು ಹಾಗೂ ಕಾರ್ಮಿಕರ ಹಿತಾಸಕ್ತಿಗಾಗಿ ಗೋಕಾಕದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ನೇತೃತ್ವದ ಆಡಳಿತ ಮಂಡಳಿ ಕಾರ್ಖಾನೆಯ ಆಡಳಿತ ವಹಿಸಿಕೊಂಡಾಗಿನಿಂದಲೂ ಅದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಕಾರ್ಖಾನೆಗೆ ಕಬ್ಬು ಪೂರೈಸುವ ರೈತರು ಹಾಗೂ ಇಲ್ಲಿ ದುಡಿಯುವ ಕಾರ್ಮಿಕರ ಹಿತಾಸಕ್ತಿಗೆ ಆಡಳಿತ ಮಂಡಳಿ ಬದ್ಧವಾಗಿದೆ. ರೈತರು ಮತ್ತು ಕಾರ್ಮಿಕರ ಹಿತ ಕಾಪಾಡಿಕೊಂಡು ಕಾರ್ಖಾನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದರು.ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಮನವಿ ಸಲ್ಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಗತ್ಯ ನೆರವು ನೀಡಲಾಗುತ್ತಿದೆ. ಅಣ್ಣಾಸಾಹೇಬ ಜೊಲ್ಲೆ ಅವರೂ ಸಹಕಾರ ನೀಡುತ್ತಿದ್ದಾರೆ. ಕಾರ್ಮಿಕರಿಗೆ ವೇತನವನ್ನು ಸಮಯಕ್ಕೆ ಸರಿಯಾಗಿ ನೀಡಲಾಗುತ್ತಿದ್ದು, ಎಲ್ಲರೂ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.ರೈತರು ಕೂಡ ಕಾರ್ಖಾನೆ ಬೆನ್ನಿಗೆ ನಿಂತಿದ್ದಾರೆ. ದೇವರ ದಯೆಯಿಂದ ಕಾರ್ಖಾನೆ ಉತ್ತಮವಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು. ರೈತರು ಹಾಗೂ ಕಾರ್ಮಿಕರ ಹಿತಾಸಕ್ತಿಗೆ ಬದ್ಧವಾಗಿ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು.ಕಾರ್ಮಿಕ ಕುಟುಂಬಗಳಿಗೆ ₹2 ಲಕ್ಷ ಆರೋಗ್ಯ ವಿಮೆ:ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಪ್ರಭಾ ಶುಗರ್ಸ್‌ನ ನೌಕರರು ಹಾಗೂ ಕಾರ್ಮಿಕರ ಕುಟುಂಬಗಳಿಗೆ ₹2 ಲಕ್ಷದವರೆಗೆ ಆರೋಗ್ಯ ವಿಮೆ ಮತ್ತು ₹10 ಲಕ್ಷದವರೆಗೆ ಅಪಘಾತ ವಿಮೆ ಮಾಡಿಸಲಾಗುವುದು ಎಂದರು.ಕಾರ್ಮಿಕರು ಹಾಗೂ ನೌಕರರ ಕುಟುಂಬಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲ ಕಾರ್ಮಿಕರು ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಬೇಕು. ಕಾರ್ಮಿಕರ ಸುರಕ್ಷತೆ ಮತ್ತು ಕುಟುಂಬಗಳ ಕಲ್ಯಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾರ್ಮಿಕರು ಸಂಸ್ಥೆಯೊಂದಿಗೆ ಸಹಕರಿಸಿದರೆ ಪ್ರಭಾ ಶುಗರ್ಸ್ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ ಎಂದರು.ಈ ವೇಳೆ ಪ್ರಭಾ ಶುಗರ್ಸ್ ಅಧ್ಯಕ್ಷ ಶಿದ್ಲಿಂಗಪ್ಪ ಕಂಬಳಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕಬ್ಬೂರ, ನಿರ್ದೇಶಕರಾದ ಬಸಗೌಡ ಪಾಟೀಲ, ಕೆಂಚನಗೌಡ ಪಾಟೀಲ, ಲಕ್ಷ್ಮಣ ಗಣಪ್ಪಗೋಳ, ಶಿವಲಿಂಗ ಪೂಜೇರಿ, ಮಾಳಪ್ಪ ಜಾಗನೂರ, ಮಹಾದೇವಪ್ಪ ಭೋವಿ, ಭೂತಪ್ಪ ಗೊಡೇರ, ಜಗದೀಶ ಬಂಡ್ರೊಳ್ಳಿ, ವಿನಿತ ಪಾಟೀಲ, ಅರುಣ ಮಹಾರೆಡ್ಡಿ ಹಾಗೂ ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಕಛೇರಿ ಅಧೀಕ್ಷಕ ಈರಣ್ಣ ಜಂಬಗಿ ಉಪಸ್ಥಿತರಿದ್ದರು.