ಕನ್ನಡಪ್ರಭ ವಾರ್ತೆ ಬೆಳಗಾವಿ

ನಮ್ಮ ರೋಗನಿರೋಧಕ ಶಕ್ತಿ ದುರ್ಬಲಗೊಂಡರೆ ರೋಗಗಳು ನಮ್ಮನ್ನು ಸುತ್ತುವರಿಯುತ್ತವೆ. ಹೀಗಾಗಿ ನಮಗೆ ಬರುವ ರೋಗಗಳಿಂದ ರಕ್ಷಿಸಲು ಬಲವಾದ ರೋಗನಿರೋಧಕ ಶಕ್ತಿಯ ಅಗತ್ಯವಿದ್ದು, ರೋಗ ನಿರೋಧಕ ಶಕ್ತಿ ಬಲಪಡಿಸಲು ಇಮ್ಯೂನಿಟಿ ಬೂಸ್ಟರ್ ಕಿಟ್ ಬಳಕೆ ಅತ್ಯವಶ್ಯಕವಾಗಿದೆ ಎಂದು ಆಯುಷ್‌ ವೈದ್ಯಾಧಿಕಾರಿ ಡಾ.ಸುಚೇತಾ ಬಿ.ದೇಸಾಯಿ ಹೇಳಿದರು.

ನಗರದ ವಿದ್ಯಾಗಿರಿಯಲ್ಲಿರುವ ಶ್ರವಣದೋಷಗಳ ಮಕ್ಕಳ ಸರ್ಕಾರಿ ಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ಆಯುಷ್‌ ಅಭಿಯಾನದಡಿ ಕೆಎಲ್‌ಇ ಸಂಸ್ಥೆಯ ಶ್ರೀ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯ ಸಹಯೋಗದೊಂದಿಗೆ ಜಿಲ್ಲಾ ಪಂಚಾಯತಿ, ಜಿಲ್ಲಾ ಆಯುಷ್ಯ ಇಲಾಖೆಯಿಂದ ಆಯುಷ್‌ ವಿಶೇಷ ಆರೋಗ್ಯ ಉಚಿತ ಶಿಬಿರ ಹಾಗೂ ಇಮ್ಯೂನಿಟಿ ಬೂಸ್ಟರ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಮ್ಯೂನಿಟಿ ಬೂಸ್ಟರ್ ಕಿಟ್‌ನಲ್ಲಿರುವ ಔಷಧಿಗಳನ್ನು ನಿತ್ಯ ಉಪಯೋಗಿಸುವ ಮೂಲಕ ದೇಹದಲ್ಲಿರುವ ನೈಜ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಅಶ್ವಗಂಧ ವಟಿ, ಚವನ ಪ್ರಾಶ, ಸಂಶಮಣಿ ವಟಿ ಮೂರು ವಿದಧ ಅಮೂಲ್ಯ ಆಯುರ್ವೇದ ಔಷಧಿಗಳನ್ನು ಒಳಗೊಂಡಿರುವ ಇಮುನಿಟಿ ಬೂಸ್ಟರ್ ಕಿಟ್ ಮಕ್ಕಳಿಗೆ ಆರೋಗ್ಯಕರವಾಗಿದ್ದು, ನೆಗಡಿ, ಕೆಮ್ಮು, ಜ್ವರ, ಅಶಕ್ತತೆ ಬರದಂತೆ ನೋಡಿಕೊಳ್ಳವ ಮೂಲಕ ಬೂಸ್ಟರ್ ನೀಡುತ್ತದೆ. ನಿಯಮಿತವಾಗಿ ಪ್ರತಿದಿನ ಬಳಸಿ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಇಲಾಖೆಯನ್ನು ಸಂಪರ್ಕಿಸಲು ಕೋರಿದರು.ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕ ಶಂಕರಗೌಡ ಪಾಟೀಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಶಿಕ್ಷಕಿ ಸವಿತಾ ಹೊಳಿ ಸಂಜ್ಞಾ ಭಾಷೆಯಲ್ಲಿ ಮಕ್ಕಳಿಗೆ ವಿವರಿಸಿದರು. ರಶ್ಮಿ ನವಲ್ಕರ್ ಸ್ವಾಗತಿಸಿ, ವಂದಿಸಿದರು.ಕೆಎಲ್‌ಇ ಸಂಸ್ಥೆಯ ಶ್ರೀ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ವೈದ್ಯಕೀಯ ನಿರ್ದೇಶಕ ಪ್ರೊ.ಡಾ.ಸುಹಾಸ್ ಕುಮಾರ್ ಶೆಟ್ಟಿ ಹಾಗೂ ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಶ್ರೀಕಾಂತ ಸುಣದೋಳಿ ಮಾರ್ಗದರ್ಶನದಲ್ಲಿ ಶಾಲೆಯ 75 ಮಕ್ಕಳಿಗೆ ಮತ್ತು ಶಾಲಾ ಸಿಬ್ಬಂದಿ ವರ್ಗದವರಿಗೆ ಇಮ್ಯೂನಿಟಿ ಬೂಸ್ಟರ್ ಕಿಟ್ ವಿತರಿಸಲಾಯಿತು. ಆರೋಗ್ಯ ಉಚಿತ ಶಿಬಿರದಲ್ಲಿ ಕೆಎಲ್‌ಇ ಸಂಸ್ಥೆಯ ಶ್ರೀ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದ ಡಾ.ಓಜಸ್ವಿನಿ ರೆಡ್ಡಿ, ತಜ್ಞ ವೈದ್ಯ ವಿದ್ಯಾರ್ಥಿಯರಾದ ಡಾ.ಅಂಶಿಕಾ, ಡಾ.ಯಶ್ವಂತ್, ಡಾ.ಸ್ವಪ್ನಿಲ್, ಡಾ.ರೋಹನ್, ಡಾ.ಸ್ನೇಹಲ್, ಡಾ.ವೃಶಾಲಿ ಶಿಬಿರದಲ್ಲಿ ಮಕ್ಕಳ ಆರೋಗ್ಯ ತಪಾಷಣೆ ಮಾಡಿ ಅಗತ್ಯ ಸಲಹೆ ನೀಡಿದರು.ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುವಂತ ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ಬೀನ್ಸ್‌ನಂತಹ ಆಹಾರಗಳಲ್ಲಿ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದರಲ್ಲಿನ ನಾರಿನಂಶ ಸಮೃದ್ಧವಾಗಿರುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗಲಿದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ವ್ಯಾಯಾಮವು ಅತ್ಯುತ್ತಮ ಮಾರ್ಗವಾಗಿದ್ದು, ಚುರುಕಾದ ನಡಿಗೆ, ಸೈಕ್ಲಿಂಗ್, ಜಾಗಿಂಗ್, ಈಜು ಅಥವಾ ಜಾಗಿಂಗ್ ನಿತ್ಯ ಮಾಡಿ.

-ಡಾ.ಶ್ರೀಕಾಂತ ಸುಣದೋಳಿ, ಜಿಲ್ಲಾ ಆಯುಷ್‌ ಅಧಿಕಾರಿ ಬೆಳಗಾವಿ.ವಿಶೇಷ ಚೇತನ ಮಕ್ಕಳಿಗೆ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಯುರ್ವೇದ ಪದ್ಧತಿಯಲ್ಲಿರುವ ದಿನಚರ್ಯ, ಋತುಚರ್ಯ, ಯೋಗ, ಧ್ಯಾನ ಹಾಗೂ ಸ್ವಾಸ್ತ್ಯ ವೃತ್ತ ನಿಯಮಗಳನ್ನು ಪಾಲಿಸಬೇಕು.

-ಡಾ.ಸುಚೇತಾ ಬಿ.ದೇಸಾಯಿ,


ಆಯುಷ್‌ ವೈದ್ಯಾಧಿಕಾರಿಗಳು.ನಮಗೆ ಯಾವುದೇ ರೋಗದ ವಿರುದ್ಧ ಹೋರಾಡುವಲ್ಲಿ ರೋಗನಿರೋಧಕ ಶಕ್ತಿಯು (immunity power) ಅತೀ ದೊಡ್ಡ ಆಯುಧ. ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ನಾವು ಅನೇಕ ಪ್ರಯತ್ನಗಳನ್ನು ಮಾಡಿದ್ದೇವೆ. ಆದರೆ, ನಮ್ಮ ಲೈಫ್ ಸ್ಟೈಲ್, ತಪ್ಪು ಆಹಾರ ಕ್ರಮದಿಂದಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ದೇಹದ ದೌರ್ಬಲ್ಯ ನಿವಾರಣೆಗೆ, ಶಕ್ತಿ ವೃದ್ಧಿಗೆ ಮನೆಮದ್ದುಗಳನ್ನು ಬಳಕೆ ಮಾಡಬೇಕು.

-ಪ್ರೊ.ಡಾ.ಸುಹಾಸ್ ಕುಮಾರ್ ಶೆಟ್ಟಿ,
ಪ್ರಾಂಶುಪಾಲರು, ವೈದ್ಯಕೀಯ ನಿರ್ದೇಶಕರು, ಕೆಎಲ್‌ಇ ಸಂಸ್ಥೆಯ ಶ್ರೀ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯ ಬೆಳಗಾವಿ.ನಾಗರ ಪಂಚಮಿ ಹಬ್ಬದ ನಿಮಿತ್ತ ಮಕ್ಕಳಲ್ಲಿ ಆರೋಗ್ಯದ ಕಾಳಜಿ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ತಜ್ಞವೈದ್ಯರು ಭಾಗವಹಿಸಿ ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ ಮಾಡಿಕೊಳ್ಳಲು ಅಮೂಲ್ಯ ಸಲಹೆ ನೀಡಿದ್ದಾರೆ. ವೈದ್ಯರ ಮಾರ್ಗದರ್ಶನದಂತೆ ವಿಶೇಷ ಚೇತನ ಮಕ್ಕಳಿಗೆ ನೀಡಿದ ಬೂಸ್ಟರ್ ಕಿಟ್‌ನ್ನು ಆರೋಗ್ಯ ವೃದ್ಧಿಗೆ ಕ್ರಮ ವಹಿಸಲಾಗುವುದು. ಜಿಲ್ಲಾ ಆಯುಷ್ ಇಲಾಖೆಯ ವೈದ್ಯರ ತಂಡ ಹಾಗೂ ಕೆಎಲ್‌ಇ ಕಂಕಣವಾಡಿ ಆಯುರ್ವೇದ ಕಾಲೇಜಿನವರಿಗೆ ಧನ್ಯವಾದಗಳು.

-ಶಂಕರಗೌಡ ಪಾಟೀಲ,

ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕರು.