ಪುತ್ತೂರು: ಸಾಮಾಜಿಕ ಕಳಕಳಿಯೊಂದಿಗೆ ಜನತೆಗೆ ಅತ್ಯುತ್ತಮ ಸಂದೇಶ ನೀಡುವ ದೇಶ ಭಕ್ತಿಯ ಕಿರುಚಿತ್ರವನ್ನು ಜನ್ಮ ಕ್ರಿಯೇಷನ್ ಮೂಲಕ ಡಾ. ಹರ್ಷ ಕುಮಾರ್ ರೈ ಅವರು ಜನತೆಗೆ ಅರ್ಪಣೆ ಮಾಡಿದ್ದಾರೆ. ಅತ್ಯುತ್ತಮ ಸಂದೇಶ ನೀಡುವ ಕಿರುಚಿತ್ರ ಇದಾಗಿದ್ದು, ಬಹಳಷ್ಟು ಅಭಿಮಾನದಿಂದ ಈ ಚಿತ್ರ ತಂಡಕ್ಕೆ ಶುಭ ಹಾರೈಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡ ಹೇಳಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಅವರ ನಿವಾಸದಲ್ಲಿ ಜನ್ಮ ಕ್ರಿಯೇಷನ್ ಪುತ್ತೂರು ಅರ್ಪಣೆ ಮಾಡಿದ ‘ಕಲ್ಪ ಭಾರತ’ ಕಿರುಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ, ಲ್ಯಾಪ್‌ಟಾಪ್ ಮೂಲಕ ಕಿರುಚಿತ್ರವನ್ನು ಬಿಡುಗಡೆಗೊಳಿಸಿ, ವೀಕ್ಷಿಸಿ ಶುಭ ಹಾರೈಸಿದರು.ಕಳೆದ ಏಳೆಂಟು ವರ್ಷಗಳಿಂದ ಪ್ರತಿ ವರ್ಷದ ಸ್ವಾತಂತ್ರ್ಯದಿನಾಚರಣೆಗೆ ಈ ರೀತಿಯ ಕಿರುಚಿತ್ರಗಳ ನಿರ್ಮಾಣ ಮೂಲಕ ಸಮಾಜಕ್ಕೆ ಅತ್ಯುತ್ತಮ ಸಂದೇಶ ನೀಡುವ ಕೆಲಸವನ್ನು ಜನ್ಮ ಕ್ರಿಯೇಷನ್ ಮಾಡುತ್ತಿರುವುದು ಖುಷಿ ತಂದಿದೆ ಎಂದರು.
ರಸ್ತೆ ನಿಯಮ ಪಾಲನೆ ಕಥೆ: ರಸ್ತೆ ನಿಯಮಗಳು ನಮ್ಮ ರಕ್ಷಣೆಗಾಗಿ, ಇಂಧನ ಉಳಿತಾಯ ನಮ್ಮ ನಾಳೆಗಾಗಿ...ಬದಲಾವಣೆ ನಮ್ಮಿಂದಲೇ ಆರಂಭ, ಸಂಕಲ್ಪ ನಮ್ಮದು, ಸುರಕ್ಷಿತ ಭಾರತ ನಮ್ಮೆಲ್ಲರದ್ದು...ಎಂಬ ಕಲ್ಪನೆಯ ಲೋಕದಲ್ಲಿ ಈ ಕಿರುಚಿತ್ರ ಓಡುತ್ತೆ.ಟ್ರಾಫಿಕ್ ಸಿಗ್ನಲ್‌ನಲ್ಲಿ ಚಾಲಕನ ಕರ್ತವ್ಯವನ್ನು ಇಲ್ಲಿ ತೋರಿಸಲಾಗಿದ್ದು, ಇದಕ್ಕಾಗಿಯೇ ಈ ಕಿರುಚಿತ್ರದ ಚಿತ್ರೀಕರಣ ಮಂಗಳೂರು, ಪುತ್ತೂರು ಇತ್ಯಾದಿ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಇಂಡಿಯಾ ಬುಕ್ ಆಫ್ ರೇಕಾರ್ಡ್ಸ್ ಪ್ರೊಡಕ್ಷನ್ ಹೌಸ್ ಜನ್ಮ ಕ್ರಿಯೇಷನ್‌ನಲ್ಲಿ ಈ ಕಿರುಚಿತ್ರ ತಯಾರಾಗಿದ್ದು, ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ ೩೧೮೧ ರ ರೋಡ್ ಸೇಪ್ಟಿ ಆ್ಯಂಡ್ ಟ್ರಾಫಿಕ್ ಅವೇರ್‌ನೆಸ್ ಚೇರ್‌ಮೆನ್ ಹರ್ಷ ಕುಮಾರ್ ರೈ ಮಾಡಾವು ನಿರ್ಮಾಣ, ಪತ್ರಕರ್ತ ಸಿಶೇ ಕಜೆಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಕನ್ನಡ, ತುಳು ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿರುವ ಅರುಣ್ ರೈ ಪುತ್ತೂರು ಛಾಯಾಗ್ರಹಣ, ರೋಶನ್ ಕಡಬ ಸಂಕಲನ, ಕೀರ್ತಿರಾಜ್ ಮಂಗಳೂರು ಸಂಗೀತ ಇದೆ. ಚಿತ್ರದಲ್ಲಿ ಡಾ. ಹರ್ಷ ಕುಮಾರ್ ರೈ ಮಾಡಾವು, ವಿಲೇಜ್ ಬಾಯ್ಸ್ ಸಿನಿಮಾ ಬಾಲನಟ ಅಂಶ್ ಕೋಡಿಕಲ್ ಮಂಗಳೂರು, ನಿಶ್ವಿತಾ ಶಿವರಾಜ್ ಕೋಡಿಕಲ್, ನಾಗೇಶ್ ವಗ್ಗ, ಸುರೇಶ್ ಮಂಗಳೂರು ನಟಿಸಿದ್ದಾರೆ. ಈ ಕಿರುಚಿತ್ರವನ್ನು ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ.
ಪ್ರಧಾನಿ ಮೋದಿ ಕಲ್ಪನೆಗೆ ಸಾಥ್...
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಂಧನ ಉಳಿತಾಯ ಮತ್ತು ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ದೇಶಾದ್ಯಂತ ಜಾಗೃತಿ ಮೂಡಿಸಲು ಹಾಗೂ ಭವಿಷ್ಯದ ಪೀಳಿಗೆಗೆ ತಿಳಿಯಪಡಿಸಲು ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವರ ನವ ಭಾರತ್ ಸಂಕಲ್ಪದಂತೆ ‘ಸಂಕಲ್ಪ ಭಾರತ್’ ಕಿರುಚಿತ್ರದಲ್ಲಿ ‘ಇಂದನ ಉಳಿತಾಯ ನಮ್ಮ ನಾಳೆಗಾಗಿ, ರಸ್ತೆ ನಿಯಮಗಳು ನಮ್ಮ ರಕ್ಷಣೆಗಾಗಿ’ ಎಂಬ ವಿಷಯವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಲಾಗಿದೆ.
ಜನ್ಮ ಕ್ರಿಯೇಷನ್ಸ್ ಸಂಸ್ಥೆ ಹೊಸ ಪ್ರತಿಭೆಗಳನ್ನು ಯುವ ಕಲಾವಿದರನ್ನು ಪ್ರೋತ್ಸಾಹಿಸಿ ಅವರಿಗೆ ವೇದಿಕೆ ಕೊಟ್ಟು ಬೆಳೆಸುವ ಕಾರ್ಯವನ್ನು ಮಾಡುತ್ತಿದ್ದು ಕಳೆದ ಹಲವು ವರ್ಷಗಳಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ದೇಶಾಭಿಮಾನ ಜೊತೆಗೆ ದೇಶಭಕ್ತಿ ಸಾರುವ ಮತ್ತು ಭಕ್ತಿ ಗೀತೆಗಳ ಹಲವು ಕಿರುಚಿತ್ರಗಳು, ಆಲ್ಬಮ್ ಹಾಡು ಮತ್ತು ಧ್ವನಿ ಮುದ್ರಿಕೆಗಳನ್ನು ನಿರ್ಮಾಣ ಮಾಡಿ ದೇಶ ವಿದೇಶಗಳಲ್ಲಿ ಬಿಡುಗಡೆಗೊಳಿಸಿದ ಕೀರ್ತಿ ಜನ್ಮ ಕ್ರಿಯೇಷನ್ಸ್ ಸಂಸ್ಥೆಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಮಾಡಿ ಜಾಗತಿಕ ಹಿಂದೂ ಫೌಂಡೇಶನ್‌ನಿಂದ ಪ್ರಶಂಸೆ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.ರಸ್ತೆ ಸುರಕ್ಷತೆ ನಮ್ಮೆಲ್ಲರ ರಕ್ಷಣೆಗಾಗಿ, ಇಂಧನ ಉಳಿತಾಯ ನಮ್ಮ ನಾಳೆಗಾಗಿ ಎಂಬ ಧ್ಯೇಯವಾಕ್ಯದೊಂದಿಗೆ ರಸ್ತೆ ಸುರಕ್ಷತೆ ಬಗ್ಗೆ ತಿಳಿಸಿಕೊಡುವ ವಿಭಿನ್ನ ಆಲೋಚನೆ ಮತ್ತು ಮನಸ್ಸಿಗೆ ಯೋಚನೆಯನ್ನು ಕೊಡುವ ‘ಸಂಕಲ್ಪ ಭಾರತ್’ ಕಿರುಚಿತ್ರ ೮೦ನೇ ಸ್ವಾತಂತ್ರ್ಯ ದಿನಾಚರಣೆ ಸವಿ ನೆನಪಿನೊಂದಿಗೆ ಆ. ೧೫ರಂದು ಲೋಕಾರ್ಪಣೆಗೊಳ್ಳುತ್ತಿದ್ದು, ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡ ಚಿತ್ರವನ್ನು ವೀಕ್ಷಿಸಿ ಬಿಡುಗಡೆಗೊಳಿಸುವ ಮೂಲಕ ಬಹಳಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದು ಜನ್ಮ ಕ್ರಿಯೇಷನ್‌ಗೆ ಹೆಮ್ಮೆ ತಂದಿದೆ.- ಡಾ. ಹರ್ಷ ಕುಮಾರ್ ರೈ ಮಾಡಾವು ಜನ್ಮ ಕ್ರಿಯೇಷನ್ಸ್ ಪುತ್ತೂರು