ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ಆ ಸ್ಥಳವನ್ನು ಶುದ್ಧೀಕರಣ ಮಾಡಿದ್ದಾರೆ ಎಂದು ಖಂಡಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಯಿತು.

ನವನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಕಾರ್ಯಕರ್ತರು, ಆರ್‌ ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.

ಒಬ್ಬ ವ್ಯಕ್ತಿ ದಲಿತ ಎಂಬ ಕಾರಣಕ್ಕೆ ಅವರು ಬಳಸಿದ ವೇದಿಕೆಯನ್ನು ಅಪವಿತ್ರವೆಂದು ಭಾವಿಸಿ ಶುದ್ಧೀಕರಣ ಮಾಡಿರುವುದು ಖಂಡನೀಯ. ಇದು ಖರ್ಗೆ ಅವರಿಗೆ ಮಾತ್ರ ಮಾಡಿದ ಅವಮಾನವಲ್ಲ. ಭಾರತದ ಸಂವಿಧಾನದ ಆಶಯಗಳಿಗೆ ಮಾಡಿದ ಅಪಮಾನ ಎಂದು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳಿದರು.ಸಂವಿಧಾನ ಅಸ್ಪೃಶ್ಯತೆಯನ್ನು ನಿಷೇಧಿಸಿದ್ದರೂ ಜಾತಿ ಮನಸ್ಥಿತಿ ಇನ್ನೂ ಸಮಾಜದಲ್ಲಿ ಜೀವಂತವಾಗಿರುವುದು ಆತಂಕಕಾರಿ ಸಂಗತಿ. ಸ್ವಾತಂತ್ರ್ಯ ಪಡೆದು ಸುಮಾರು 80 ವರ್ಷಗಳಾದರೂ ಇಂತಹ ಘಟನೆಗಳು ನಡೆಯುತ್ತಿರುವುದು ನಿಜವಾದ ಸಾಮಾಜಿಕ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆ ಮೂಡಿಸುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದು, ಕಾರ್ಮಿಕರು ಹಾಗೂ ದುರ್ಬಲ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿ, ದೇಶದ ಉನ್ನತ ರಾಜಕೀಯ ಸ್ಥಾನಗಳನ್ನು ಅಲಂಕರಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕನಿಗೆ ಇಂತಹ ವರ್ತನೆ ತೋರುವುದು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಮಾನತೆಯ ಆಶಯಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ.ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ಇಂತಹ ಜಾತಿ ತಾರತಮ್ಯದ ಮನಸ್ಥಿತಿಯ ವಿರುದ್ಧ ಕಠಿಣ ಕ್ರಮ ಕೈಗೊಂಡು, ಸಂವಿಧಾನದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ಮತ್ತಷ್ಟು ಬಲಪಡಿಸಬೇಕೆಂದು ರಾಷ್ಟ್ರಪತಿಗಳನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ್ ಹದ್ಲಿ, ವಕ್ತಾರ ಚಂದ್ರಶೇಖರ ರಾಠೋಡ, ಮುಖಂಡರಾದ ಎಂ.ಬಿ.ಸೌದಾಗರ, ಪರಶುರಾಮ ಮಹಾರಾಜನವರ, ಹಣಮಂತ ನೀಲನಾಯಕ, ರಾಜು ಮನ್ನಿಕೇರಿ, ಎನ್.ಬಿ.ಗಸ್ತಿ, ಕಿಶೋರ ಸುರಪುರ, ಅಕ್ಬರ ಮುಲ್ಲಾ, ಸಿಕಂದರ ಅಥಣಿ, ರೇಣುಕಾ ನ್ಯಾಮಗೌಡ, ವೀರಣ್ಣ ಹುಂಡೇಕಾರ, ಶ್ರೀಧರ ನೀಲನಾಯಕ, ಕುತುಬುದ್ದೀನ ಖಾಜಿ, ಹಾಜಿಸಾಬ ದಂಡಿನ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.