ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಧ್ಯ ಕರ್ನಾಟಕದ ಪ್ರಮುಖ ಗಣೇಶೋತ್ಸವಗಳಲ್ಲಿ ಒಂದಾದ ದಾವಣಗೆರೆಯ ಹಿಂದೂ ಮಹಾ ಗಣಪತಿ ಅದ್ಧೂರಿ, ಬೃಹತ್ ಶೋಭಾಯಾತ್ರೆಯು ಯಾವುದೇ ಡಿಜೆ ಅಬ್ಬರ ಇಲ್ಲದೇ, ಡೊಳ್ಳು, ಸಮಾಳ, ನಾಸಿಕ್ ಡೋಲು ಸೇರಿದಂತೆ ಜಾನಪದ ಕಲಾ ತಂಡಗಳು, ಮೇಳಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.ನಗರದ ಹೈಸ್ಕೂಲ್ ಮೈದಾನದಲ್ಲಿ ಶಾಸ್ತ್ರೋಕ್ತವಾಗಿ, ವಿಧ್ಯುಕ್ತವಾಗಿ ಮಹಾಪೂಜೆ, ಮಹಾ ಮಂಗಳಾರತಿ ಮಾಡುವುದರೊಂದಿಗೆ ಮಧ್ಯಾಹ್ನ ಜಿಲ್ಲೆಯ ದೊಡ್ಡ ಗಣಪತಿಯಾದ ಹಿಂದೂ ಮಹಾಗಣಪತಿಯನ್ನು ಟ್ರ್ಯಾಕ್ಟರ್‌ಗೆ ಇಡಲಾಯಿತು. ನಂತರ ಗಣ್ಯರು, ಜನ ಪ್ರತಿನಿಧಿಗಳು, ಅಧಿಕಾರಿಗಳು, ರಾಜಕೀಯ ಮುಖಂಡರು, ಸಾರ್ವಜನಿಕರು ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಹಿಂದೂ ಮಹಾಗಣಪತಿ ಶೋಭಯಾತ್ರೆಗೆ ಚಾಲನೆ ನೀಡಿದರು.
ಗಣೇಶೋತ್ಸವ ಸಮಿತಿಯವರು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗಳು ಡಿಜೆಗೆ ಅನುಮತಿ ನೀಡಿಲ್ಲವೆಂಬುದಾಗಿ ಅಪಾರ ಸಂಖ್ಯೆಯ ವಿದ್ಯಾರ್ಥಿ, ಯುವಜನರು, ಸಂಘಟಕರು ಮುನಿಸಿಕೊಂಡಿದ್ದರೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ಟ್ರಸ್ಟ್‌ನ ಮುಖಂಡರು ತಮ್ಮ ಕೊರಳಿಗೆ ಕೇಸರಿ ಶಾಲು ಹಾಕಿದಾಗ ಖುಷಿಯಿಂದಲೇ ಶ್ರೀ ಗಣೇಶನಿಗೆ ನಮಿಸಿದರು. ನಂತರ ಹಿಂದೂ ಮಹಾಗಣಪತಿ ಇದ್ದ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಎಲ್ಲರಲ್ಲೂ ಇಲಾಖೆ ಮೇಲಿದ್ದ ಮುನಿಸು ಮರೆಯಾಗುವಂತೆ ಮಾಡಿದರು.ಹಿಂದೂ ಮಹಾಗಣಪತಿ ಅಲಂಕರಿಸಿದ್ದ ಟ್ರ್ಯಾಕ್ಟರ್ ಚಾಲನೆಗೂ ಮುನ್ನ ಸ್ವತಃ ಉಮಾ ಪ್ರಶಾಂತ ವಿಘ್ನ ನಿವಾರಕನಿಗೆ ಪೂಜೆ, ಪ್ರಾರ್ಥನೆಯನ್ನು ಸಲ್ಲಿಸಿ, ಎಲ್ಲರ ಪ್ರಶಂಸೆಗೆ ಪಾತ್ರರಾದರು. ಪ್ರತಿ ವರ್ಷ ರಾಜಕೀಯ ಪಕ್ಷಗಳ ಮುಖಂಡರು, ಟ್ರಸ್ಟ್, ಹಿಂದು ಸಂಘಟನೆಗಳ ಮುಖಂಡರು ಚಾಲನೆ ಮಾಡುತ್ತಿದ್ದರು. ಆದರೆ, ಇದೇ ಮೊದಲ ಸಲ ಒಬ್ಬ ಮಹಿಳೆ, ಅದರಲ್ಲೂ ಐಪಿಎಸ್ ಅಧಿಕಾರಿಯಾದ ಉಮಾ ಪ್ರಶಾಂತ ಸ್ವತಃ ಚಾಲನೆ ಮಾಡಿದ್ದಲ್ಲದೇ, ನಂತರ ಟ್ರ್ಯಾಕ್ಟರ್ ಇಳಿದು, ಶಾಲನ್ನು ತೆಗೆದರು. ಅಲ್ಲಿಂದ ಶೋಭಾಯಾತ್ರೆಯ ಬಂದೋಬಸ್ತ್‌ನಲ್ಲಿದ್ದರು.
ನಗರ, ಜಿಲ್ಲೆ, ನೆರೆ ಜಿಲ್ಲೆ, ಉದ್ಯೋಗ ನಿಮಿತ್ತ ಬೇರೆ ಊರುಗಳಲ್ಲಿದ್ದ ನೌಕರಸ್ಥರು, ಓದಲು ಹೋಗಿದ್ದ ಯುವಕ-ಯುವತಿಯರು ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆಂದೇ ದಾವಣಗೆರೆಗೆ ಬಂದು, ಗಣೇಶ ವಿಸರ್ಜನಾ ಮೆರವಣಿಗೆಗೆ ಮತ್ತಷ್ಟು ರಂಗು ತಂದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಪಾಲಿಕೆ ಮಾಜಿ ವಿಪಕ್ಷ ನಾಯಕ ಎ.ನಾಗರಾಜ ಇತರರು ಸಹ ಮಾರ್ಗ ಮಧ್ಯೆ ಶ್ರೀ ಹಿಂದೂ ಮಹಾಗಣಪತಿಗೆ ಪೂಜೆ ಸಲ್ಲಿಸಿ, ನಮಿಸಿದರು. ಟ್ರಸ್ಟ್ ಅಧ್ಯಕ್ಷ ಜೊಳ್ಳಿ ಗುರು ಸೇರಿದಂತೆ ಅನೇಕರು ಹಾಜರಿದ್ದರು. ಸ್ವಲ್ಪ ದೂರ ದಿನೇಶ್ ಶೆಟ್ಟಿ ಸಹ ಟ್ರ್ಯಾಕ್ಟರ್ ಚಾಲನೆ ಮಾಡಿದರು.ತಂಡೋಪ ತಂಡವಾಗಿ ನಗರದ ವಿವಿಧೆಡೆಯಿಂದ ಮಕ್ಕಳು, ಮಹಿಳೆಯರು, ವಿದ್ಯಾರ್ಥಿ, ಯುವ ಜನರು, ಯುವತಿಯರು ಗುಂಪು ಗುಂಪಾಗಿ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಕೇಸರಿ ಧ್ವಜ, ಭಗವಾ ಧ್ವಜ, ಶ್ರೀರಾಮ, ಹನುಮನ ಧ್ವಜ, ಛತ್ರಪತಿ ಶಿವಾಜಿ ಮಹಾರಾಜರು, ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕರು ಹೀಗೆ ಅನೇಕರ ಚಿತ್ರಗಳು ಗಮನ ಸೆಳೆದರು.
ಡೊಳ್ಳು, ಸಮಾಳ, ನಾಸಿಕ್ ಡೋಲುಗಳ ಜೊತೆಗೆ ರೋಡ್ ಆರ್ಕೆಸ್ಟ್ರಾ ತಂಡದ ಸದಸ್ಯರು ಹಾಡುತ್ತಿದ್ದ ಹಾಡುಗಳು, ಚರ್ಮವಾದ್ಯಗಳ ಸದ್ದಿಗೆ ಯುವಕರು, ಮಕ್ಕಳು, ಯುವತಿಯರು, ಮಹಿಳೆಯರು, ಹಿರಿಯರು ಹೀಗೆ ಎಲ್ಲರೂ ಹೆಜ್ಜೆ ಹಾಕುತ್ತ ಸಾಗಿದರು. ಸಹಸ್ರಾರು ಸಂಖ್ಯೆಯಲ್ಲಿ ಶೋಭಾಯಾತ್ರೆಗೆ ಎಲ್ಲರೂ ಕಳೆ ತಂದರು. ಎಲ್ಲಿಯೂ ಸಣ್ಣ ಅಹಿತಕರ ಘಟನೆಯೂ ನಡೆಯದೇ, ಶಾಂತಿ, ಸುವ್ಯವಸ್ಥಿತವಾಗಿ ಮೆರವಣಿಗೆ ಸಾಗಿತು. ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಹ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು.ಟ್ರಸ್ಟ್‌ನ ಅಧ್ಯಕ್ಷ ಜೊಳ್ಳಿ ಗುರು, ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ಟಿ.ಶ್ರೀನಿವಾಸ ದಾಸಕರಿಯಪ್ಪ, ಎಂ.ಪಿ.ಜಯಪ್ರಕಾಶ ಮಾಗಿ, ವಿ.ಸಿದ್ದೇಶ, ಆದಿತ್ಯ ಮಂಜುನಾಥ ಅಲ್ಯುಮಿನಿಯಂ, ಕಮಲ್, ಗಿರೀಶ, ಜರೀಕಟ್ಟೆ ಚಂದ್ರು, ಗಿರೀಶಕುಮಾರ, ಐಗೂರು ಪ್ರಕಾಶ, ಜರೀಕಟ್ಟೆ ಮಂಜುನಾಥ, ಎಂ.ಜಿ.ಶ್ರೀಕಾಂತ, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ್ ಅನೇಕರು ಇದ್ದರು.
ಬೃಹತ್ ಶೋಭಾಯಾತ್ರೆಗೆ ಭಕ್ತ ಸಾಗರ:ಹೈಸ್ಕೂಲ್ ಮೈದಾನದಿಂದ ಆರಂಭವಾದ ಶೋಭಾಯಾತ್ರೆಯು ಅಕ್ಕ ಮಹಾದೇವಿ ರಸ್ತೆ, ಅಂಬೇಡ್ಕರ್ ವೃತ್ತ, ಶ್ರೀ ಜಯದೇವ ವೃತ್ತ, ಕುವೆಂಪು ರಸ್ತೆ, ಹಳೆ ಪಿಬಿ ರಸ್ತೆ, ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಸಂಜೆ ಹೊತ್ತಿಗೆ ಬಾತಿ ಕೆರೆಯನ್ನು ತಲುಪಿತು. ಅಲ್ಲಿ ಪೂಜೆ ಸಲ್ಲಿಸುವ ಜತೆಗೆ ಹಿಂದೂ ಮಹಾಗಣಪತಿಯ ವಿಸರ್ಜನೆ ಕಾರ್ಯ ನೆರವೇರಿತು.
ಬೇಕೆ ಬೇಕು.. ಡಿಜೆ ಬೇಕೆಂದು ಯುವಕರ ಪ್ರತಿಭಟನೆ:ಬೇಕೇ ಬೇಕು ಡಿಜೆ ಬೇಕು, ಡಿಜೆ ಬೇಕೆ ಬೇಕು ಎಂಬುದಾಗಿ ಯುವಜನರು ಪಟ್ಟು ಹಿಡಿದು ಘೋಷಣೆ ಕೂಗಿದ ಘಟನೆ ನಗರದಲ್ಲಿ ಶನಿವಾರ ನಡೆಯಿತು.
ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ಟ್ರಸ್ಟ್ ಹಮ್ಮಿಕೊಂಡಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಯುವಕರು ಬೇಕೇ ಬೇಕು ಡಿಜೆ ಬೇಕು ಎಂಬುದಾಗಿ ಘೋಷಣೆ ಕೂಗಲಾರಂಭಿಸಿದರು.ಡಿಜೆಗೆ ಅನುಮತಿ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಡಿಜೆಗೆ ಅನುಮತಿ ನೀಡಿದ್ದಾರೆ. ದಾವಣಗೆರೆಯಲ್ಲಿ ಏಕೆ ಕೊಟ್ಟಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಡಿಜೆ ಸದ್ದು ಗದ್ದಲವಿಲ್ಲದೇ ಗಣೇಶೋತ್ಸವ ಸಂಪನ್ನದಶಕದ ನಂತರ ದಾವಣಗೆರೆ ನಗರ, ಜಿಲ್ಲೆಯಲ್ಲಿ ಶ್ರೀ ಗಣೇಶೋತ್ಸವ ಮೆರವಣಿಗೆಯಲ್ಲಿ ಒಂದೇ ಒಂದು ಡಿಜೆ ಸದ್ದು, ಡಿಜೆ ಅಬ್ಬರವಾಗಲೀ ಇಲ್ಲದೇ, ಜಾನಪದ ಕಲಾ ತಂಡಗಳು, ಡೊಳ್ಳು, ಸಮಾಳ, ನಾಸಿಕ್ ಡೊಳ್ಳು ಸೇರಿದಂತೆ ಜಾನಪದ ಕಲಾ ತಂಡಗಳು, ದೇವರ ಕುಣಿತ, ನಂದಿಕೋಲು, ವಾದ್ಯ ತಂಡಗಳು, ರೋಡ್ ಆರ್ಕೆಸ್ಟ್ರಾ ತಂಡಗಳು ಶ್ರೀ ಗಣೇಶದ ಹಬ್ಬದ ಮೆರಗು ಒಂದಿಷ್ಟೂ ಕಡಿಮೆಯಾಗದಂತೆ ನೋಡಿಕೊಂಡವು.
ಬಹುತೇಕ ಡಿಜೆ ನಿಷೇಧದಿಂದ ಅವುಗಳ ಮಾಲೀಕರಿಗೆ ತೊಂದರೆಯಾಗಿದೆ. ಡಿಜೆ ಸಿಸ್ಟಂ ಹಾಕಿಸಬೇಕೆಂದುಕೊಂಡಿದ್ದ ಶ್ರೀ ಗಣೇಶೋತ್ಸವ ಸಮಿತಿಯವರು, ಸಂಘಟಕರು, ವಿದ್ಯಾರ್ಥಿ, ಯುವ ಜನರಿಗೆ ಬೇಸರ ಆಗಿರಬಹುದು. ಆದರೆ, ಸಾವಿರಾರು ಬಡ ಕಲಾವಿದರು, ಕಲಾ ತಂಡಗಳಿಗೆ ಶ್ರೀ ಗಣೇಶೋತ್ಸವ ಒಂದಿಷ್ಟು ಆದಾಯಕ್ಕೂ ಕಾರಣವಾಗಿದೆ. ವಿಘ್ನ ನಿವಾರಕನ ಹಬ್ಬಕ್ಕೆ ಡಿಜೆ ಕೊರತೆ ಕಾಡಿದ್ದು, ಕೆಲವೊಂದು ಅಹಿತಕರ ಘಟನೆ ಹೊರತುಪಡಿಸಿದರೆ ದಾವಣಗೆರೆ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥಿತವಾಗಿ ವಿಘ್ನ ನಿವಾರಕನ ಹಬ್ಬವು ಸಂಪನ್ನವಾಗಿದ್ದು ವಿಶೇಷ.