ನಿವೇಶನ, ಬೆಳೆ ಪರಿಹಾರಕ್ಕಾಗಿ ರೈತ: ಕಾರ್ಮಿಕ ಪ್ರತಿಭಟನೆ

| Published : Nov 09 2024, 01:12 AM IST

ನಿವೇಶನ, ಬೆಳೆ ಪರಿಹಾರಕ್ಕಾಗಿ ರೈತ: ಕಾರ್ಮಿಕ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ಬೆಳೆ ಪರಿಹಾರ ಮತ್ತು ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ರೈತ ಮತ್ತು ಕಾರ್ಮಿಕ ಹಕ್ಕೋತ್ತಾಯ ಸಮಿತಿ ಸದಸ್ಯರು ಶುಕ್ರವಾರ ಗುಡ್ಡೆತೋಟದಿಂದ ಜಯಪುರದವರೆಗೂ ಪ್ರತಿಭಟನೆ ನಡೆಸಿ ನಾಡಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಜಯಪುರದವರೆಗೂ ಪ್ರತಿಭಟನೆ ನಡೆಸಿ ನಾಡಕಚೇರಿಯಲ್ಲಿ ಮನವಿ

ಕನ್ನಡಪ್ರಭ ವಾರ್ತೆ, ಕೊಪ್ಪ

ಬೆಳೆ ಪರಿಹಾರ ಮತ್ತು ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ರೈತ ಮತ್ತು ಕಾರ್ಮಿಕ ಹಕ್ಕೋತ್ತಾಯ ಸಮಿತಿ ಸದಸ್ಯರು ಶುಕ್ರವಾರ ಗುಡ್ಡೆತೋಟದಿಂದ ಜಯಪುರದವರೆಗೂ ಪ್ರತಿಭಟನೆ ನಡೆಸಿ ನಾಡಕಚೇರಿಯಲ್ಲಿ ಮನವಿ ಸಲ್ಲಿಸಿದರು.ಮೇಗುಂದಾ ಹೋಬಳಿ ಅಗಳಗಂಡಿ ಮತ್ತು ಗುಡ್ಡೆತೋಟ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಕುಟುಂಬಗಳು ವಾಸವಾಗಿದ್ದು ಕಳೆದ ಹತ್ತು ಹಲವು ವರ್ಷಗಳಿಂದ ನಿವೇಶನ ರಹಿತರು ನಿವೇಶನಕ್ಕಾಗಿ ಅರ್ಜಿ ಹಾಕುತ್ತಿದ್ದಾರೆ. ಈವರೆಗೂ ಯಾವುದೇ ನಿವೇಶನ ಮಂಜೂರು ಮಾಡಿಲ್ಲ. ಈಗಾಗಲೇ ನಿವೇಶನಕ್ಕಾಗಿ ಮಂಜೂರಾದ ಭೂಮಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಕೂಡಲೇ ನಿವೇಶನರಹಿತರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು. ಪ್ರಕೃತಿ ವಿಕೋಪದಿಂದ ಮಳೆ ಹೆಚ್ಚಾಗಿ ಮಲೆನಾಡಿನ ರೈತರು ಬೆಳೆದ ಅಡಕೆ, ಕಾಫಿ, ಕಾಳುಮೆಣಸು ಸೇರಿದಂತೆ ಎಲ್ಲಾ ಬೆಳೆಗಳು ನೆಲಕಚ್ಚಿವೆ. ಅದನ್ನೇ ಅವಲಂಬಿಸಿರುವ ರೈತಾಪಿ ಇಂದು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಮೊದಲೇ ರೈತವಿರೋಧಿ ಅರಣ್ಯ ಕಾಯ್ದೆಗಳು ಹಾಗೂ ಒತ್ತುವರಿ ತೆರವು ಮಲೆನಾಡಿನ ರೈತರ ನೆಮ್ಮದಿ ಕೆಡಿಸಿವೆ. ಈ ವರ್ಷ ಮೇಗುಂದಾ ಹೋಬಳಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇನ್ನೂ ಮಳೆ ಕಡಿಮೆ ಯಾಗಿಲ್ಲ. ಪ್ರತೀ ವರ್ಷದಂತೆ ರೈತರಿಗೆ ಮಳೆಯಿಂದ ಹಾನಿಯಾದಾಗ ಸರ್ಕಾರ ಬೆಳೆ ಹಾನಿ ಪರಿಹಾರ ಮೊತ್ತ ಕೊಡಬೇಕಾಗಿತ್ತು. ಆದರೆ ಕಳೆದ 2 ವರ್ಷವೂ ರಾಜ್ಯ ಸರ್ಕಾರ ರೈತರ ಬೆಳೆ ಪರಿಹಾರ ಒದಗಿಸದೇ ನಿರ್ಲಕ್ಷ್ಯ ವಹಿಸಿರುವುದನ್ನು ನೊಂದ ರೈತ ಮತ್ತು ಕಾರ್ಮಿಕ ಹಕ್ಕೋತ್ತಾಯ ಸಮಿತಿ ಖಂಡಿಸುತ್ತದೆ. ಕೂಡಲೇ ಪರಿಹಾರ ಮೊತ್ತ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತದೆ. ಇಲ್ಲದೇ ಹೋದಲ್ಲಿ ಮುಂದಿನ ದಿನದಲ್ಲಿ ಕೊಪ್ಪ ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಈ ಮನವಿಯಲ್ಲಿ ತಿಳಿಸಲಾಗಿದೆ.ಸಮಿತಿ ಅಧ್ಯಕ್ಷ ಸುಬ್ರಮಣ್ಯ, ಕಾರ್ಯದರ್ಶಿ ಶ್ರೀನಾಥ್, ಸಂಚಾಲಕ ಹಾಲಪ್ಪ, ಶಾಂತಕುಮಾರ್ ಜೈನ್, ಮಣಿಕಂಠನ್ ಕಂದಸ್ವಾಮಿ, ಎಸ್.ಎನ್. ರಾಮಸ್ವಾಮಿ, ಪುಣ್ಯಪಾಲ್, ದಿನೇಶ್ ಹೊಸೂರು, ಸಂತೋಷ್ ಅರನೂರು ಮುಂತಾದವರಿದ್ದರು.