ಸಾರಾಂಶ
- ಕೆಂಬಾವುಟ, ನೀಲಿಬಾವುಟ, ಹಸಿರು ಬಾವುಟದ ಶಕ್ತಿ ಅರಿದು, ಒಂದಾಗಲು ಡಾ.ಎ.ಬಿ.ರಾಮಚಂದ್ರಪ್ಪ ಮನವಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆಅಪಾಯದಲ್ಲಿರುವ ಭಾರತದ ತ್ರಿವರ್ಣ ಧ್ವಜ ರಕ್ಷಣೆಗಾಗಿ ಕಾರ್ಮಿಕರ ಕೆಂಪು ಬಾವುಟ, ದಲಿತ ಸಮುದಾಯದ ನೀಲಿ ಬಾವುಟ ಹಾಗೂ ರೈತರ ಹಸಿರು ಬಾವುಟಗಳು ಒಂದಾಗಿ, ನಿರಂತರ ಆಂದೋಲನ ನಡೆಸಬೇಕು. ಆಗ ಮಾತ್ರ ಸಂವಿಧಾನ, ಪ್ರಜಾಪ್ರಭುತ್ವ, ಅನ್ನದಾತರ ಭೂಮಿ, ಹಕ್ಕುಗಳು ಉಳಿಯುತ್ತವೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಹೇಳಿದರು.
ನಗರದ ಶ್ರೀ ಜಯದೇವ ವೃತ್ತದಲ್ಲಿ ಶುಕ್ರವಾರ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಎರಡು ದಿನಗಳ ಪ್ರಥಮ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಸಂವಿಧಾನ, ಪ್ರಜಾಪ್ರಭುತ್ವ, ರೈತರ ಭೂಮಿಯ ಉಳಿವಿಗಾಗಿ ರೈತ, ಕಾರ್ಮಿಕರು, ದಲಿತ ಸಂಘಟನೆಗಳು ಸಂಘಟಿತ ಆಂದೋಲನ ನಡೆಸಬೇಕು, ಐಕ್ಯತೆಯ ಹೋರಾಟ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.ಪ್ರಸ್ತುತದ ದೇಶದ ಪರಿಸ್ಥಿತಿಯಲ್ಲಿ ಕಾರ್ಮಿಕರು, ರೈತರು, ದಲಿತ ಸಮುದಾಯಗಳು ಒಂದೇ ವೇದಿಕೆಯಡಿ ಬರಬೇಕಾದ ಅಗತ್ಯ, ಅನಿವಾರ್ಯತೆ ಇದೆ. ಆಂದೋಲನ ಮೂಲಕ ದೇಶ ಕಟ್ಟುವಲ್ಲಿ ಹೊಸ ಭಾಷ್ಯ ಬರೆಯಬೇಕು. ದೇಶದ ಮೂಲನಿವಾಸಿಗಳಾದ ದ್ರಾವಿಡರು ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೂ ಹಕ್ಕುಗಳು ಸಿಗುತ್ತಿಲ್ಲ. ಈಗ ಎಲ್ಲರೂ ಸಂಘಟಿತ ಹೋರಾಟ ನಡೆಸುವ ಮೂಲಕ ಹಕ್ಕುಗಳನ್ನು ಪಡೆಯಬೇಕು ಎಂದು ತಿಳಿಸಿದರು.
ಅನಾದಿಯಿಂದಲೂ ದೇಶದಲ್ಲಿ ವರ್ಗ, ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಸಾಗುತ್ತಲೇ ಬಂದಿದೆ. ಜಾತಿ, ವರ್ಗ ಹೋರಾಟ ಒಂದಾಗಿಯೇ ಆಗಬೇಕೆಂದು ಲೋಹಿಯಾ ಹೇಳಿದ್ದರು. ಅಂಬೇಡ್ಕರ್ ನಿಲುವು ಸಹ ಅದೇ ಆಗಿತ್ತು. ಈಗ ಎಲ್ಲರೂ ಸಂಘಟಿತ ಹೋರಾಟ ನಡೆಸುವ ಮೂಲಕ ಹಕ್ಕುಗಳನ್ನು ಪಡೆಯಬೇಕು. ಇಂದಿಗೂ ದಲಿತ ಸಮುದಾಯಗಳ ಹಕ್ಕುಗಳಿಗೆ ಮೊದಲ ತಡೆ ಎಂದರೆ ಸನಾತನತೆ. ಧರ್ಮ, ದೇವರ ಹೆಸರಲ್ಲಿ ದಲಿತ ಸಮುದಾಯಗಳಿಗೆ ದೊರೆಯಬೇಕಾದ ಹಕ್ಕುಗಳ ದಮನ ಮಾಡಲಾಗುತ್ತಿದೆ ಎಂದು ಅವರು ದೂರಿದರು.ಹಿರಿಯ ಕಾರ್ಮಿಕ ಮುಖಂಡ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ದೇಶದ ಧ್ವಜದ ಘನತೆ ಉಳಿಸಬೇಕೆಂಬ ಮಹತ್ತರ ಆಶಯದಿಂದ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ರೂಪಿಸಲಾಗಿದೆ. ಇದು ಸಂಘಟನೆ ಅಲ್ಲ. ನಿರಂತರ ಚಳವಳಿ, ಆಂದೋಲನ. ಕಾರ್ಮಿಕ, ದಲಿತ, ರೈತರ ಈ ಮೂರೂ ಸಂಘಟನೆಗಳು ಒಗ್ಗೂಡಿ ಪ್ರಭುತ್ವ ಸಮಾಜವಾದ ರೂಪಿಸಬೇಕು ಎಂದರು.
ಯಾರು ಭಾರತದ ತ್ರಿವರ್ಣ ಧ್ವಜ, ಭಾಷಾವಾರು ಪ್ರಾಂತ್ಯ ನೀತಿ ಒಪ್ಪಿಲ್ಲವೋ ಅಂತಹವರ ಕೈಯಲ್ಲಿ ದೇಶದ ಅಧಿಕಾರ ಇದೆ. ಅಪಾಯಕಾರಿಗಳ ಆಳುವ ತತ್ವದಿಂದಾಗಿ ದಲಿತರು, ರೈತರು, ಕಾರ್ಮಿಕರು ಹಕ್ಕುಗಳ ಕಳೆದುಕೊಳ್ಳುತ್ತಿದ್ದಾರೆ. ಅಂಬೇಡ್ಕರ್ ಆಶಯದಂತೆ ಜನಪರ ಮತ್ತು ಪ್ರಗತಿಪರ ಸಂಘಟನೆಗಳು ಒಂದಾಗಬೇಕು. ಇಲ್ಲವಾದಲ್ಲಿ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಅನೇಕ ಚಳವಳಿ, ಹೋರಾಟಕ್ಕೆ ನಾಂದಿ ಹಾಡಿರುವ ಪಂಪಾಪತಿ ಕರ್ಮಭೂಮಿ ದಾವಣಗೆರೆ. ಇಲ್ಲಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಪ್ರಥಮ ರಾಜ್ಯ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ವಿಚಾರ. ಅಸಮಾನತೆ ನಿರ್ಮೂಲನೆ, ಶಿಕ್ಷಣ, ಆರ್ಥಿಕತೆಗೆ ದಲಿತ, ರೈತ, ಕಾರ್ಮಿಕ ಸಂಘಟನೆಗಳು ಒಂದಾಗಿ ಹೋರಾಟ ನಡೆಸಬೇಕು. ಸರ್ಕಾರಕ್ಕೆ ಚಾಟಿ ಬೀಸುವಂತಹ ಜನಾಂದೋಲನ ನಡೆಯಬೇಕು. ಆಗ ಯಾವುದೇ ಸರ್ಕಾರವೇ ಇರಲಿ, ಸ್ಪಂದಿಸುತ್ತದೆ ಎಂದು ಹೇಳಿದರು.
ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಪ್ರಮುಖವಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪ್ರತಿಯೊಬ್ಬರು ಶಿಕ್ಷಣವಂತರಾದಾಗ ಎಲ್ಲ ಹಕ್ಕುಗಳು, ಸೌಲಭ್ಯಗಳ ಪಡೆಯಲು ಸಾಧ್ಯ. ಯಾವುದೇ ಸಮಸ್ಯೆಗಳಿದ್ದಲ್ಲಿ ನಿಯೋಗ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಮಾಡೋಣ. ನಾನು ನಿಮ್ಮೊಂದಿಗೆ ಸದಾ ಇರುವೆ ಎಂದು ಅವರು ತಿಳಿಸಿದರು.ಆಂದೋಲನದ ಡಾ.ಸದಾಶಿವ ಮರ್ಜಿ ಅಧ್ಯಕ್ಷತೆ ವಹಿಸಿದ್ದರು. ಆಂದೋಲನದ ರಾಷ್ಟ್ರೀಯ ಮಂಡಳಿ ಸದಸ್ಯ ಡಾ.ಮಹೇಶಕುಮಾರ ರಾಥೋಡ್ ಪ್ರಾಸ್ತಾವಿಕ ನುಡಿಗಳಾಡಿದರು. ಡಾ.ಮಂಜುಳಾ ಮರ್ಜಿ, ರಾಷ್ಟ್ರೀಯ ಅಧ್ಯಕ್ಷ ಎ.ರಾಮಮೂರ್ತಿ, ಆವರಗೆರೆ ಚಂದ್ರು, ಆವರಗೆರೆ ವಾಸು, ಎಚ್.ಮಲ್ಲೇಶ್, ಹೆಗ್ಗೆರೆ ರಂಗಪ್ಪ, ಪಿ.ಷಣ್ಮುಖಸ್ವಾಮಿ, ರೇಣುಕಮ್ಮ, ಎಚ್.ಎಂ. ಸಂತೋಷ್, ವೀಣಾ ನಾಯಕ್ ಇತರರು ಇದ್ದರು. ಕಾರ್ಯಕ್ರಮದ ಮುನ್ನ ಅಂಬೇಡ್ಕರ್ ವೃತ್ತದಿಂದ ರ್‍ಯಾಲಿ ನಡೆಯಿತು.
- - -ಕೋಟ್ ಪುರಾತನತೆಯ ಪ್ರಕಾರ ಎಲ್ಲವೂ ಸಮಾನರು. ಆದರೆ, ಸನಾತನತೆ ಅದಕ್ಕೆ ಅವಕಾಶ ನೀಡುತ್ತಿಲ್ಲ. ಎಲ್ಲ ಕಹಿ ಸತ್ಯ ಗೊತ್ತಿದ್ದರೂ ಕತ್ತಿಗೆ ಚುಂಬಿಸುವಂತಹ ದುರಂತದ ಕೆಲಸ ನಡೆಸಲಾಗುತ್ತಿದೆ. ಹಕ್ಕುಗಳ ಕೇಳುವವವರಿಗೆ ನಗರ ನಕ್ಸಲರ ಹೆಸರಲ್ಲಿ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ
- ಎ.ಬಿ. ರಾಮಚಂದ್ರಪ್ಪ, ರಾಜ್ಯ ಸಂಚಾಲಕ- - - -8ಕೆಡಿವಿಜಿ1:
ದಾವಣಗೆರೆಯಲ್ಲಿ ಶುಕ್ರವಾರದಿಂದ ಆರಂಭವಾದ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಎರಡು ದಿನಗಳ ಪ್ರಥಮ ರಾಜ್ಯ ಸಮ್ಮೇಳನವನ್ನು ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು.