ಸಾರಾಂಶ
ಕೇರಳದ ವಯನಾಡಿನಲ್ಲಿ ನಡೆಯುತ್ತಿರುವ ಲೋಕಸಭೆ ಉಪ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ತಂದಿದ್ದರು ಎನ್ನಲಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಚಿತ್ರಗಳುಳ್ಳ ರೇಶನ್ ಕಿಟ್‌ಗಳು ಪತ್ತೆಯಾಗಿದ್ದರ ಸಂಬಂಧ ಎಲ್‌ಡಿಎಫ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ವಯನಾಡ್ : ಕೇರಳದ ವಯನಾಡಿನಲ್ಲಿ ನಡೆಯುತ್ತಿರುವ ಲೋಕಸಭೆ ಉಪ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ತಂದಿದ್ದರು ಎನ್ನಲಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಚಿತ್ರಗಳುಳ್ಳ ರೇಶನ್ ಕಿಟ್‌ಗಳು ಪತ್ತೆಯಾಗಿದ್ದರ ಸಂಬಂಧ ಆಡಳಿತಾರೂಢ ಎಲ್‌ಡಿಎಫ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಜಿಲ್ಲೆಯ ತೋಳ್ಪೆಟ್ಟಿಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರವುಳ್ಳ ದಿನಸಿ ವಸ್ತುಗಳ ಕಿಟ್‌ಗಳನ್ನು ಗುರುವಾರ ಪೊಲೀಸರು ವಶಪಡಿಸಿಕೊಂಡಿದ್ದರು.
ಈ ಸಂಬಂಧ ಎಡಪಕ್ಷಗಳ ಮೈತ್ರಿಕೂಟವು ಶುಕ್ರವಾರ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಇವು ನ.13ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾರರಿಗೆ ಅಕ್ರಮವಾಗಿ ಹಂಚಲೆಂದು ತಂದ ದಿನಸಿ ವಸ್ತುಗಳಾಗಿವೆ. ಈ ಬಗ್ಗೆ ತನಿಖೆ ನಡೆಸಿ, ಚುನಾವಣಾ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದೆ.
ಆದರೆ, ಇವು ವಯನಾಡಿನಲ್ಲಿ ಸಂಭವಿಸಿದ್ದ ಭೂಕುಸಿತದ ಸಂತ್ರಸ್ತರಿಗೆ ವಿತರಿಸಲು ತಂದ ಕಿಟ್‌ಗಳಾಗಿವೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.