ಪರ್ಯಾಯ ಬೆಳೆ ಬೆಳೆದು ಹೆಚ್ಚು ಲಾಭಗಳಿಸಿ

| Published : Nov 09 2024, 01:12 AM IST

ಸಾರಾಂಶ

ಮಣ್ಣಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳೆ ಬೆಳೆದರೆ ಲಾಭ ಗಳಿಸಲು ಸಾಧ್ಯ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ರೈತರು ಆಹಾರ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಅದಕ್ಕೆ ಪರ್ಯಾಯವಾದ ಬೆಳೆಗಳನ್ನು ಬೆಳೆದು ಹೆಚ್ಚು ಲಾಭಗಳಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಮಾರ್ಚಹಳ್ಳಿ ಶಿವರಾಮು ಹೇಳಿದರು.

ತಾಲೂಕಿನ ಕೆಂಪನಕೊಪ್ಪಲು ಗ್ರಾಮದ ಪ್ರಗತಿಪರ ರೈತ ಕೆ.ಪಿ. ಜಗದೀಶ್‌ ಅವರ ಕಾಳೇನಹಳ್ಳಿ ಗ್ರಾಮದ ಜಮೀನಿನಲ್ಲಿ ಶುಕ್ರವಾರ ತೋಟಗಾರಿಕೆ ಇಲಾಖೆ, ಜಿಪಂ ಮತ್ತು ಕೆ.ಆರ್. ನಗರ ತಾಲೂಕು ಅರ್ಕೇಶ್ವರಸ್ವಾಮಿ ರೈತ ಉತ್ಪಾದಕರ ಸಂಸ್ಥೆಯ ಸಹಯೋಗದಲ್ಲಿ ನಡೆದ ಅಪ್ರಧಾನ ಹಣ್ಣುಗಳ ಬೇಸಾಯ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ರೈತರು ವಾಣಿಜ್ಯ ಬೆಳೆಯಾಗಿ ಬೆಳೆಯುವ ಹಣ್ಣುಗಳನ್ನು ಅಪ್ರಧಾನ ಹಣ್ಣುಗಳು ಎಂದು ಕರೆಯಲಿದ್ದು, ಈ ವಿಚಾರದಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನ ಪಡೆದು ತಮ್ಮ ಜಮೀನಿನಲ್ಲಿ ಹೆಚ್ಚುವರಿಯಾಗಿ ಇವುಗಳನ್ನು ಬೆಳೆಯಬೇಕೆಂದು ಸಲಹೆ ನೀಡಿದರು.

ಮಣ್ಣಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳೆ ಬೆಳೆದರೆ ಲಾಭ ಗಳಿಸಲು ಸಾಧ್ಯವಾಗುವುದರ ಜತೆಗೆ ಅನಗತ್ಯವಾಗಿ ರಾಸಾಯನಿಕ ಗೊಬ್ಬರಗಳ ಬಳಕೆ ತಪ್ಪಲಿದ್ದು, ಇದನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.

ಮೈಸೂರು ತೋಟಗಾರಿಕ ಹಣ್ಣುಗಳ ವಿಭಾಗದ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಮನುಕುಮಾರ್ ಮಾತನಾಡಿ, ಕರ್ನಾಟಕ ರಾಜ್ಯ ಹಣ್ಣುಗಳ ಉತ್ಪಾದನೆಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದು, ಭವಿಷ್ಯದಲ್ಲಿ ಮೊದಲ ಸ್ಥಾನ ಗಳಿಸುವತ್ತ ದಾಪುಗಾಲು ಹಾಕುತ್ತಿದ್ದು, ಅದನ್ನು ಸಾಧಿಸದರೆ ರೈತರ ಆರ್ಥಿಕ ಸ್ಥಿತಿ ಗಣನೀಯವಾಗಿ ಏರಿಕೆಯಾಗಲಿದೆ ಎಂದರು.

ವಿಶ್ವದ ಆಗ್ನೇಯ ಏಷ್ಯಾ, ಆಫ್ರಿಕಾ, ಅಮೇರಿಕಾದ ದಕ್ಷಿಣಿ, ಉತ್ತರ ಮತ್ತು ಮಧ್ಯಭಾಗಗಳಲ್ಲಿ ಡ್ರಾಗನ್ ಪ್ರ್ಯೂಟ್ಸ್ ಬೆಳೆಯನ್ನು ಹೆಚ್ಚಾಗಿದ್ದು, ಅದು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಉತ್ತಮ ಎಂದು ಸಂಶೋಧನೆಯಿಂದ ತಿಳಿದು ಬಂದಿರುವುದರಿಂದ ಬೇಡಿಕೆ ಹೆಚ್ಚಾಗಿದ್ದು, ರಾಜ್ಯದ ರೈತರು ಹವಮಾನಕ್ಕೆ ಅನುಗುಣವಾಗಿ ಇಲ್ಲಿಯು ಬೆಳೆಯಬೇಕೆಂದು ಹೇಳಿದರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಟಿ.ಎಸ್. ಭಾರತಿ ಮಾತನಾಡಿ, ಹಣ್ಣುಗಳ ಬೆಳೆಯಿಂದ ರೈತರಿಗೆ ಆಗುವ ಪ್ರಯೋಜನಗಳು ಮತ್ತು ಅವುಗಳನ್ನು ಬೆಳೆಯಲು ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಿಂದಲೂ ಸಹಾಯಧನ ಪಡೆಯಬಹುದು ಎಂದು ವಿವರಿಸಿದರು.

ದೊಡ್ಡೇಕೊಪ್ಪಲು ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಬಲರಾಮು, ಮಾಜಿ ಅಧ್ಯಕ್ಷ ಮಮತಾ ಜಗದೀಶ್, ನಂಜುಂಡ, ಅರ್ಕೇಶ್ವರಸ್ವಾಮಿ ರೈತ ಉತ್ಪಾದಕರ ಸಂಸ್ಥೆಯ ಕೆ.ಎಂ. ಶ್ರೀನಿವಾಸ್, ರೈತ ಮುಖಂಡರಾದ ಎಂ.ಎಸ್. ನಟರಾಜು, ಕೆಂಪೇಗೌಡ, ಮಹದೇವ್, ವೆಂಕಟೇಗೌಡ, ಬಲರಾಮು, ಸಣ್ಣಮಾಲೇಗೌಡ, ವೆಂಕಟರಾಮು, ಹೆಬ್ಬಾಳು ರವಿ, ಜಗದೀಶ್, ಕೃಷ್ಣೇಗೌಡ, ಶಂಕರ್ ರಾವ್ ಬಾಂಗೆ, ಅಂಬರೀಶ್, ರೈತರು ಭಾಗವಹಿಸಿದ್ದರು.